ಹದಗೆಟ್ಟ ಕಾನೂನು ವ್ಯವಸ್ಥೆ: ಎಸ್ಪಿಗೆ ಮನವಿ
ಮಂಗಳೂರು: ದ.ಕ.ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯವೈಫಲ್ಯ, ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ನಿರ್ವಹಣೆ, ಕಾನೂನು ಸುವ್ಯವಸ್ಥೆಯಲ್ಲಿ ಕಾಪಾಡುವಲ್ಲಿ ಅಸಮರ್ಥತೆ ಬಗ್ಗೆ ಬಿಜೆಪಿ ಜಿಲ್ಲಾ ಸಮಿತಿ ಶನಿವಾರ ಜಿಲ್ಲಾ ಎಸ್ಪಿ ಡಾ.ಶರಣಪ್ಪಗೆ ಮನವಿ ಸಲ್ಲಿಸಿದೆ. ಹಲವು ತಿಂಗಳಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ಬಗ್ಗೆ ಜನರು ನಂಬಿಕೆ ಕಳಕೊಳ್ಳುವಂತೆ ಆಗಿದೆ. ಜಿಲ್ಲಾದ್ಯಂತ ಗೋಹತ್ಯೆ ಮತ್ತು ಗೋಕಳ್ಳತನ ನಡೆಯುತ್ತಿದೆ. ದರೋಡೆ ಮತ್ತು ನಗದು ಕಳವು ಪ್ರಕರಣ ವರದಿಯಾಗುತ್ತಿದೆ. ಮಹಿಳಾ ದೌರ್ಜನ್ಯ ಹಾಗೂ ಅತ್ಯಾಚಾರ ನಡೆಯುತ್ತಿದೆ. ತರುಣಿಯರ ನಾಪತ್ತೆ ಪ್ರಕರಣ, ಕೋಮು ಸೌಹಾರ್ದತೆ ಹಾಳು ಮಾಡುವ ಘಟನೆ, ರಾಜಕೀಯ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಕೇಸು, ಟೋಲ್ ಸಂಗ್ರಹ ಕೇಂದ್ರಗಳ ಮೇಲೆ ದಾಳಿ, ಜಿಲ್ಲೆ ಉಗ್ರರ ತಾಣವಾಗುತ್ತಿರುವ ಪ್ರಕರಣಗಳು ನಡೆಯುತ್ತಿದೆ. ರಾಜಕೀಯ ಒತ್ತಡದಿಂದ ಇದನ್ನು ನಿರ್ಲಕ್ಷಿಸಿದಲ್ಲಿ ಮುಂದಿನ ಎಲ್ಲ ಅನಾಹುತಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗಬೇಕಾದೀತು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದೆ. ವಿಧಾನ ಪರಿಷತ್ತು ಸದಸ್ಯರಾದ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಶಾಸಕ ಅಂಗಾರ, ಮಾಜಿ ಸಚಿವ ಕೃಷ್ಣ ಪಾಲೇಮಾರ್, ವಿಧಾನಸಭೆ ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಮುಖಂಡರಾದ ಸುಲೋಚನಾ ಭಟ್, ಸತೀಶ್ ಪ್ರಭು, ಶಾಂತಾ ಆರ್, ಸಂಜಯ ಪ್ರಭು, ಕಸ್ತೂರಿ ಪಂಜ, ಆನಂದ ಬಂಟ್ವಾಳ ಮತ್ತಿತರರಿದ್ದರು.
ವಿದ್ಯುತ್ ದರ ಹೆಚ್ಚಳಕ್ಕೆ ವಿರೋಧ
ಮಂಗಳೂರು: ವಿದ್ಯುತ್ ಕಂಪನಿಗಳು ವಿದ್ಯುತ್ ದರ ಹೆಚ್ಚಿಸಿರುವ ಕ್ರಮವನ್ನು ಗ್ಯಾಸ್ ಮತ್ತು ಬಳಕೆದಾರರ ವೇದಿಕೆ ಖಂಡಿಸಿದೆ. ಇಲಾಖೆಗೆ ನಷ್ಟವಾಗುತ್ತಿದ್ದರೆ ಗ್ರಾಹಕರಿಗೆ ಲಾಭ, ನಷ್ಟಗಳ ಸಮಗ್ರ ವರದಿಯ ಶ್ವೇತಪತ್ರ ಹೊರಡಿಸಬೇಕು. ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿದರೆ ನಷ್ಠ ಪ್ರಮಾಣವನ್ನು ಕಡಿಮೆ ಮಾಡಬಹುದು. ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದಿರುವ ಜನತೆಗೆ ವಿದ್ಯುತ್ ದರ ಹೆಚ್ಚಿಸುವ ಮೂಲಕ ಇನ್ನೊಂದು ಶಾಕ್ ನೀಡಿದಂತಾಗಿದೆ. ಇದರ ಹಿಂದೆ ಬಿಪಿಎಲ್ ಕಾರ್ಡ್‌ನಿಂದ ಜನರನ್ನು ವಂಚಿಸುವ ಷಡ್ಯಂತರ ಇದೆ. ಗ್ರಾಹಕರ ಹಿತದೃಷ್ಟಿಯಿಂದ ವಿದ್ಯುತ್ ದರ ಇಳಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ವೇದಿಕೆ ಅಧ್ಯಕ್ಷ ಧರ್ಮೇಂದ್ರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

