'ಮೋದಿಯಂತೆ ನನಗೂ ತಾಯಿ ಆಶೀರ್ವಾದವೇ ಶಕ್ತಿ'
ಸುಳ್ಯ: ನನ್ನ ತಾಯಿಯ ಆಶೀರ್ವಾದ, ಕುಟುಂಬ ದೈವಗಳ ಆಶೀರ್ವಾದದಿಂದ ನನಗೆ ಹೆಚ್ಚು ಆತ್ಮಸ್ಥೈರ್ಯ ಮೂಡಿದ್ದು, ಇನ್ನಷ್ಟು ಶಕ್ತಿ ಬಂದಿದೆ. ಈ ಶಕ್ತಿಯಿಂದ ಉತ್ತಮ ಬಜೆಟ್ ಮಂಡಿಸಲು ಸಾಧ್ಯವಾಗಬಹುದು. ಮೋದಿ ಹೇಗೆ ತಾಯಿಯ ಆಶೀರ್ವಾದ ಪಡೆದಿದ್ದಾರೋ ನಾನು ಹಾಗೆ ಆಶೀರ್ವಾದ ಪಡೆದಿದ್ದೇನೆ ಎಂದು ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ತನ್ನ ತಾಯ್ನೆಲ ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೀವಿ ತನ್ನ ಜೀವನದ ನೆನಪುಗಳಿಗೆ ಜಾರಿದರು.
ತಾಯಿ ಪರಿಶ್ರಮ: ತಾಯಿ ಅತ್ಯಂತ ಕಷ್ಟದಿಂದ ನಮ್ಮನ್ನು ಬೆಳೆಸಿ ಈ ಹಂತಕ್ಕೆ ತಂದಿದ್ದಾರೆ. ಅವರ ಪರಿಶ್ರಮ, ತ್ಯಾಗ, ಸಮರ್ಪಣೆಯಿಂದ ನನಗೆ ಸಮಾಜಸೇವೆ, ರಾಜ್ಯಸೇವೆ, ರಾಷ್ಟ್ರಸೇವೆ ಸಾಧ್ಯವಾಗಿದೆ. ಸರಿಯಾಗಿ ಬಟ್ಟೆಯಿಲ್ಲದೆ, ಮೂರು ಹೊತ್ತು ಊಟವಿಲ್ಲದೆ ಬಡತನ ಅನುಭವಿಸಿದವರು ನಾವು. ತಾಯಿ ಊಟ ಮಾಡದಿದ್ದರೂ ನಮಗೆ ಊಟ ನೀಡಿ ಬೆಳೆಸಿದ್ದಾರೆ. ಅಂತಹ ತಾಯಿಯ ಆಶೀರ್ವಾದದಿಂದ, ದೇವರ ದಯೆಯಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದು ಡೀವಿ ಹೇಳಿದರು.
ನಂದೂ ತಮ್ಮಂದೂ ಸಮಾನ ಜವಾಬ್ದಾರಿ: ನನ್ನದು ಚಾಲೆಂಜಿಂಗ್ ಇಲಾಖೆ. ನನ್ನ ತಮ್ಮ ರೇಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್, ನಾನು ಅದೇ ಇಲಾಖೆಯ ಮಂತ್ರಿ. ಅವನಿಗೆ ನನ್ನಣ್ಣ ರೇಲ್ವೆ ಮಂತ್ರಿ ಅಂತ ಹೇಳಿಕೊಳ್ಳುವುದಕ್ಕೆ ಎಷ್ಟು ಸಂತೋಷ ಇದೆಯೋ, ನನ್ನ ತಮ್ಮ ಇಲ್ಲಿ ಸ್ಟೇಷನ್ ಮಾಸ್ಟರ್ ಅಂತ ಹೇಳಿಕೊಳ್ಳುವುದಕ್ಕೆ ನನಗೂ ಅಷ್ಟೇ ಸಂತೋಷ. ನಮ್ಮ ಜವಾಬ್ದಾರಿಗಳು ಸಮಾನವಾದುದು. ರೇಲ್ವೆ ಇಲಾಖೆಯಂತೆಯೇ ಇಬ್ಬರೂ 24 ಗಂಟೆ ಕೆಲಸ ಮಾಡಬೇಕು. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಈ ರೀತಿಯಾಗಿರುವುದು ಪುಣ್ಯ ಎಂದು ಅಭಿಮಾನಪಟ್ಟುಕೊಂಡರು.
ಕನಸಿನಲ್ಲೂ ಯೋಚಿಸಿರಲಿಲ್ಲ: ದೇಶದಲ್ಲಿ ಬದಲಾವಣೆ ತರುವ ಕನಸು ಇಟ್ಟುಕೊಂಡ ಮೋದಿ ತನ್ನ ತಂಡಕ್ಕೆ ನನ್ನಂತಹ ಸಣ್ಣ ಆಟಗಾರರನ್ನು ಸೇರಿಸಿಕೊಂಡಿದ್ದಾರೆ. ನನಗೆ ಮಂತ್ರಿಯಾಗಬಹುದೆಂಬ ಸಣ್ಣ ಆಸೆಯಿತ್ತು. ಆದರೆ ಇಷ್ಟು ದೊಡ್ಡ ಖಾತೆ ಕೊಡುತ್ತಾರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ನಾನು ಮುಖ್ಯಮಂತ್ರಿಯಾಗುತ್ತೇನೆಂದು ಹೇಗೆ ಕನಸಿನಲ್ಲೂ ಯೋಚಿಸಿರಲಿಲ್ಲವೋ ಇಲ್ಲೂ ಅದೇ ರೀತಿ ಆಯಿತು. ಈಗಾಗಲೇ ಮೋದಿಯವರ ಜೊತೆ ಚರ್ಚೆ ನಡೆಸಿದ್ದೇನೆ. ಅವರೂ ಧೈರ್ಯ ತುಂಬಿದ್ದಾರೆ ಎಂದು ಹೇಳಿದರು. ಪತ್ನಿ ಡಾಟಿ ಸದಾನಂದ, ಪುತ್ರ ಕಾರ್ತಿಕ್, ಸಹೋದರರಾದ ಡಿ.ವಿ. ಶಿವರಾಮ, ಡಿ.ವಿ. ಭಾಸ್ಕರ, ಡಿ.ವಿ. ಸುರೇಶ್ ಸದಾನಂದ ಗೌಡರೊಂದಿಗಿದ್ದರು.ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನನ್ಯ ಅಚ್ಚುತ ಮೂಡಿತ್ತಾಯ, ಬಿಜೆಪಿ ಮಾಧ್ಯಮ ವಕ್ತಾರ ಆರ್.ಸಿ. ನಾರಾಯಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

