ದಾವಣಗೆರೆ

ಎಲ್ಲ ನೇಮಕಾತಿಯಲ್ಲೂ ಕ್ರೀಡಾ ಮೀಸಲಾತಿ ನೀಡಿ

Published On :

ದಾವಣಗೆರೆ: ಸಿಇಟಿಯಲ್ಲಿರುವ ಕ್ರೀಡಾ ಮೀಸಲಾತಿಯಂತೆ ಇತರೆ ಕೋರ್ಸ್, ಶಾಲೆ ಪ್ರವೇಶಕ್ಕೂ ಪರಿಗಣಿಸಿ, ಕ್ರೀಡಾಪಟುಗಳ ವಾರ್ಷಿಕ ಪ್ರೋತ್ಸಾಹಧನ ಹೆಚ್ಚಿಸಿ, ಎಲ್ಲಾ ಕ್ರೀಡೆಗೂ ಸಮಾನ ಅವಕಾಶ ನೀಡಬೇಕು. ರೇಲ್ವೆ, ಪೊಲೀಸ್, ಅಬಕಾರಿ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ನೀಡಿದಂತೆ ಎಲ್ಲಾ ಇಲಾಖೆಗೂ  ಕ್ರೀಡಾ ಮೀಸಲಾತಿ ವಿಸ್ತರಿಸಿ, ಕ್ರೀಡೆ ಮತ್ತು ಯುವಜನ ಇಲಾಖೆ ಪ್ರತ್ಯೇಕಿಸಬೇಕು.
ದೈಹಿಕ ಶಿಕ್ಷಣಕ್ಕಾಗಿ ಪ್ರತ್ಯೇಕ ಕ್ರೀಡಾ ವಿವಿ ಸ್ಥಾಪಿಸಿ....ಹೀಗೆ ಅನೇಕ ಸಲಹೆ, ಅಭಿಪ್ರಾಯ, ಒತ್ತಾಯ, ಮನವಿಗಳ ಮಹಾಪೂರವೇ ನಗರದ ಡಿಸಿ ಕಚೇರಿಯಲ್ಲಿ ಹರಿದುಬಂತು. ಗುರುವಾರ ಡಿಸಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಕ್ರೀಡಾ ನೀತಿ ರಚನೆ ಕುರಿತ ಜಿಲ್ಲಾ ಮಟ್ಟದ ಅಭಿಪ್ರಾಯ ಸಂಗ್ರಹಿಸುವ ಕುರಿತ ಸಭೆಯಲ್ಲಿ ಹಿರಿಯ- ಕಿರಿಯ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳಿಂದ ಈ ಅಭಿಪ್ರಾಯಗಳು ವ್ಯಕ್ತವಾದವು.
ಸೇವಾ ಭದ್ರತೆ ಕಲ್ಪಿಸಿ: ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸುರೇಶ್ ಮಾತನಾಡಿ, ಹೊಸ ಕ್ರೀಡಾ ನೀತಿ ಜಾರಿಗೊಳಿಸಲು ಅಲ್ಪಾವಧಿ ಮಾತ್ರ ಇದೆ.
ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಈ ನೀತಿ ಜಾರಿಗೆ ಒತ್ತು ನೀಡಿದ್ದು, ಹೊಸ ನೀತಿಯನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಲು ಸಭೆ ನಡೆಸುತ್ತಿದ್ದೇವೆ. ಸುಮಾರು 104 ಕ್ರೀಡಾ ಕೋಚ್‌ಗಳ ಸೇವೆ ಖಾಯಂಗೊಂಡಿಲ್ಲ. ಆ ಎಲ್ಲರಿಗೂ ಸೇವಾ ಭದ್ರತೆ ಕಲ್ಪಿಸಬೇಕಿದೆ ಎಂದರು.
ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಿಇಟಿಯಲ್ಲಿ ಕ್ರೀಡಾ ಮೀಸಲಾತಿ ಇದೆ. ಶಾಲಾ - ಕಾಲೇಜು, ಇತರೆ ಕೋರ್ಸ್ ಪ್ರವೇಶಕ್ಕೂ ಅದನ್ನು ವಿಸ್ತರಿಸಿ ಕ್ರೀಡಾಪಟುಗಳಿಗೆ ವಾರ್ಷಿಕ ರು. 1 ಸಾವಿರ ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು ಹೆಚ್ಚಿಸಬೇಕು. ಆಯ್ದ ಕ್ರೀಡೆಗಳಿಗೆ ನೀಡಿದ ಮಹತ್ವವನ್ನು ಇತರೆ ಎಲ್ಲಾ ಕ್ರೀಡೆಗೂ ನೀಡಬೇಕು ಎಂದು ಕ್ರೀಡಾಪಟುಗಳು ಒತ್ತಾಯಿಸಿದರು.
ರೇಲ್ವೆ, ಪೊಲೀಸ್, ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಕ್ರೀಡಾ ಮೀಸಲಾತಿಯಡಿ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಇದನ್ನು ಪ್ರತಿ ಇಲಾಖೆಗೂ ವಿಸ್ತರಿಸಬೇಕು. ಪೊಲೀಸ್ ಇಲಾಖೆ ದೈಹಿಕ ಪರೀಕ್ಷೆ ನಡೆಸುವಂತೆ ದೈಹಿಕ ಶಿಕ್ಷಕರನ್ನು ನೇಮಿಸಿಕೊಳ್ಳುವಾಗಲೂ ದೈಹಿಕ ಪರೀಕ್ಷೆ ಕಡ್ಡಾಯ ಮಾಡಿ. ದೈಹಿಕ ಶಿಕ್ಷಣ ಕಲ್ಪಿಸಲು ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಿ ಎಂದು ದೈಹಿಕ ಶಿಕ್ಷಕರು ಮನವಿ ಮಾಡಿದರು.
ಪ್ರತಿ ಶಾಲಾ- ಕಾಲೇಜಿಗೂ ಮೈದಾನ ಒದಗಿಸಿ. ಮೈದಾನವಿಲ್ಲದ ಶಾಲೆ, ಕಾಲೇಜಿಗೆ ತಕ್ಷಣ ಮೈದಾನ ಕಲ್ಪಿಸಿ.  ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಬೇಕು. ಕ್ರೀಡಾ ಇಲಾಖೆಯಲ್ಲಿ ಅನೇಕ ಕ್ರೀಡೆಗಳಿಗೆ ಕೋಚ್‌ಗಳಿಲ್ಲ. ಮೊದಲು ಕೋಚ್ ನೇಮಿಸಬೇಕು ಎಂದು ಮತ್ತೆ ಕೆಲವರು ಆಗ್ರಹಿಸಿದರು.
ಅವಕಾಶ ಕಲ್ಪಿಸಿ: ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮೊದಲು ಪ್ರತ್ಯೇಕಿಸಬೇಕು. ಕ್ರೀಡೆಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು. ಕ್ರೀಡಾ ಇಲಾಖೆ, ಶಿಕ್ಷಣ  ಇಲಾಖೆ ಏಕಕಾಲಕ್ಕೆ, ಒಂದೇ ದಿನದಂದು ಕ್ರೀಡಾಕೂಟ ನಡೆಸುವುದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತದೆ.
ಮುಂದೆ ಹೀಗಾಗದಂತೆ ಎಚ್ಚರವಹಿಸಿರಿ. ಮೈಸೂರು ದಸರಾ ಕ್ರೀಡಾಕೂಟದಲ್ಲಿ ಬೆಂಗಳೂರಿನ ಕ್ರೀಡಾಪಟುಗಳೇ ಅನ್ಯ ಜಿಲ್ಲೆಯ ಹೆಸರಿನಿಂದ ಸ್ಪರ್ಧಿಸುವುದು ತಪ್ಪಲಿ. ಸ್ಥಳೀಯರಿಗೆ ಅವಕಾಶ ಕಲ್ಪಿಸಿ ಎಂದು ಮತ್ತೆ ಕೆಲವರು ಒತ್ತಾಯಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು, ಕ್ರೀಡಾ ನೀತಿ ಸದಸ್ಯ ಅರ್ಜುನ ದೇವಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಎ.ಬಿ. ಹೇಮಚಂದ್ರ,  ಉಪ ಕಾರ್ಯದರ್ಶಿ ಷಡಕ್ಷರಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನಾ ನೆಲವಗಿ,
ದಾವಣಗೆರೆ ವಿವಿ  ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್. ರಾಜಕುಮಾರ, ದೈಹಿಕ ಶಿಕ್ಷಣ ಅಧೀಕ್ಷಕ ತ್ರಿಲೋಕಸಿಂಗ್, ಕೋಚ್‌ಗಳಾದ ರಾಮಲಿಂಗಪ್ಪ, ಶ್ರೀಶೈಲ, ರಮೇಶ, ಬಾಸ್ಕೆಟ್‌ಬಾಲ್ ವೀರೇಶ, ಅಥ್ಲೀಟ್ ಪ್ರೇಮಚಂದ್, ನಟರಾಜ, ಸಾಹಸ ಕ್ರೀಡೆ ಎನ್.ಕೆ. ಕೊಟ್ರೇಶ, ಈಜುಪಟುಗಳ ಸಂಘದ ಪಿ.ಸಿ. ಶ್ರೀನಿವಾಸ, ಬ್ಯಾಡ್ಮಿಂಟನ್‌ಪಟು ಗಣೇಶ, ಬಾಲ್‌ಬ್ಯಾಡ್ಮಿಂಟನ್‌ಪಟು ಕುಮಾರ, ತಾಲೂಕು ದೈಹಿಕ ಶಿಕ್ಷಕರು, ಹಿರಿಯ- ಕಿರಿಯ ಕ್ರೀಡಾಪಟುಗಳು, ವಿವಿಧ ಸಂಘ- ಸಂಸ್ಥೆ ಪ್ರತಿನಿಧಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.