ದಾವಣಗೆರೆ

ಸಾಮರ್ಥ್ಯ ಭವನ ಉದ್ಘಾಟನೆ ಆಹ್ವಾನವಿಲ್ಲದ್ದಕ್ಕೆ ಆಕ್ರೋಶ

Published On :

ಹೊನ್ನಾಳಿ: ಇಲ್ಲಿನ ತಾಪಂ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಾಮರ್ಥ್ಯ ಭವನವನ್ನು ತಾಪಂ ಸದಸ್ಯರ ಗಮನಕ್ಕೆ ತಾರದೇ ಉದ್ಘಾಟಿಸಿರುವ ಕ್ರಮ ಖಂಡಿಸಿ ಗುರವಾರ ನಡೆದ ತಾಪಂ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷದ ಹಲವು ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದ ಘಟನೆ ಜರುಗಿತು.
ಸ್ಥಳೀಯ ಸಾಮರ್ಥ್ಯ ಭವನದಲ್ಲಿ ಸಾಮನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷದ ಸದಸ್ಯರು ಸಾಮರ್ಥ್ಯ ಭವನದ ಉದ್ಘಾಟನೆಗೆ ಸದಸ್ಯರನ್ನು ಕರೆಯದೇ ಇರುವ ಕ್ರಮ ಖಂಡಿಸಿ ಸಭೆ ಬಹಿಷ್ಕರಿಸಿ ಹೊರ ನಡೆದರು. ಆಗ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್. ಹುಲಿರಾಜ್ ಸದಸ್ಯರ ಮನವೊಲಿಸಿ, ಕೆಲ ಸಮಯದ ನಂತರ ಸಭೆ ನಡೆಯುವಂತೆ ಮಾಡುವಲ್ಲಿ ಸಫಲರಾದರು.
ನೆನೆಗುದಿಗೆ: ಪ್ರತಿಪಕ್ಷ ಸದಸ್ಯ ರಮೇಶ್ ದಾಸರಹಳ್ಳಿ ಮಾತನಾಡಿ, ಪಕ್ಕದ ತಾಲೂಕು ಹರಿಹರದಲ್ಲಿ ಬೈರನಪಾದ ಹನಿ ನೀರಾವರಿ ಯೋಜನೆ ಅನುಷ್ಠಾನಗೊಂಡು ಅಲ್ಲಿನ ರೈತರು ಅನುಕೂಲ ಪಡೆಯುತ್ತಿದ್ದಾರೆ. ಆದರೆ ಹೊನ್ನಾಳಿಯಲ್ಲಿ ಪ್ರಭಾವಿ ಸಚಿವರಿದ್ದರೂ, ಇಲ್ಲಿ ಹನಿನೀರಾವರಿ ಯೋಜನೆ ಜಾರಿಯಾಗದೇ ನೆನೆಗುದಿಗೆ ಬಿದ್ದ್ದಿರುವುದು ನಾಚಿಕಗೇಡಿನ ಸಂಗತಿ ಅಡಳಿತ ಪಕ್ಷದ ತಾಪಂ ಸದಸ್ಯರು ಈ ಬಗ್ಗೆ ಸಚಿವರ ಗಮನ ಸೆಳೆದು ತಾಲೂಕಿನಲ್ಲಿ ಹನಿ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಗೊಳಿಸುವ ಮೂಲಕ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.
ಸದಸ್ಯ ಆರ್. ನಾಗಪ್ಪ ಮಾತನಾಡಿ, ಪ್ರಸ್ತುತ ಪಟ್ಟಣದಲ್ಲಿ ನೂರು ಹಾಸಿಗೆ ಆಸ್ಪತ್ರೆ ಕಾಮಗಾರಿ ಮುಕ್ತಾಯವಾಗಿದ್ದು, ಹಾಲಿ ಇರುವ ಆಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದಂತೆಯೇ ಹಳೆ ಕಟ್ಟಡದಲ್ಲಿ ಸರ್ಕಾರಿ ಇಲಾಖೆಗಳಾದ ಶಿಶು ಅಭಿವೃದ್ಧಿ, ಜಲಾನಯನ, ಅಬಕಾರಿ, ಮೀನುಗಾರಿಕೆ ಇಲಾಖೆಗಳನ್ನು ಆಸ್ಪತ್ರೆಯ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದಎ ಹೇಳಿದರು.
ಚರ್ಚೆ ಇಲ್ಲ: ಕುಂಭಳೂರು ತಾಪಂ ಕ್ಷೇತ್ರದ ಸದಸ್ಯ ಕೃಷ್ಣಪ್ಪ ಹಾಗೂ ಕುಂದೂರು ಕ್ಷೇತ್ರದ ಸದಸ್ಯೆ  ದಾಕ್ಷಾಯಣಮ್ಮ ಮಾತನಾಡಿ, ತಾಪಂ ಆಯಾಯಾ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಅಥವಾ ಉದ್ಘಾಟನೆ ಸಂದರ್ಭಗಳಲ್ಲಿ ಆಯಾಯಾ ಕ್ಷೇತ್ರದ ತಾಪಂ ಸದಸ್ಯರೊಂದಿಗೆ ಅಧಿಕಾರಿಗಳು ಯಾವುದೇ ಚರ್ಚೆ ನಡೆಸದೇ ಹಲವಾರು ಬಾರಿ ಕಲ್ಲು ಮತ್ತು ಆಹ್ವಾನ ಪತ್ರಿಕೆಗಳಲ್ಲಿ ಸದಸ್ಯರ ಹೆಸರು ಕೈಬಿಟ್ಟಿದ್ದಾರೆ ಎಂದರು.
ಅಧಿಕಾರಿ ಕ್ಷಮೆ: ಅಗಿರುವ ತಪ್ಪಿಗೆ ಜಿಪಂ ಎಂಜಿನಿಯರಿಂಗ್ ಇಲಾಖೆ ಅಧಿಕಾರಿ ಕ್ಷಮೆಯಾಚಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್. ಹುಲಿರಾಜ್ ಅವರು ಇನ್ನು ಮುಂದೆ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಸದಸ್ಯರನ್ನು ಸಮಾಧಾನಪಡಿಸಿದರು.
ಜಿಪಂ ಎಂಜಿನಿಯರಿಂಗ್ ಇಲಾಖೆ ಅಧಿಕಾರಿ ಇಲಾಖೆ ಪ್ರಗತಿ ವರದಿಯನ್ನು ಸಭೆಯಲ್ಲಿ ತಿಳಿಸಿ ರಾಷ್ಟ್ರೀಯ ಗ್ರಾಮಾಂತರ ಕುಡಿಯುವ ನೀರಿನ ಯೋಜನೆಯಡಿಯಲ್ಲಿ  ಒಟ್ಟು 9 ಕಾಮಗಾರಿಗಳಲ್ಲಿ ಒಂದನ್ನು ಕೈ ಬಿಡಲಾಗಿದ್ದು, ಇನ್ನುಳಿದವುಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಈಗಾಗಲೇ ಚಾಲನೆ ನೀಡಲಾಗಿದ್ದು ಕೆಲಕಾರಣಗಳಿಂದ ಪ್ರಾರಂಭಿಸಿದ್ದಿಲ್ಲ ಇದೀಗ ಆರಂಭಗೊಳ್ಳುತ್ತಿದೆ ಎಂದು ಉತ್ತರಿಸಿದರು.
 ಸಭೆಯಲ್ಲಿ ಶಿಕ್ಷಣ, ಆರೋಗ್ಯ ಅಕ್ಷರ ದಾಸೋಹ, ಶಿಶು ಅಭಿವೃದ್ಧಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಜಲಾನಯನ, ಸಾಮಾಜಿಕ ಅರಣ್ಯ ಮುಂತಾದ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಪಟ್ಟಂತೆ ಪ್ರಗತಿ ವರದಿ ನೀಡಿದರು.
ತಾಪಂ ಉಪಾಧ್ಯಕ್ಷೆ ವಿಶಾಲಾಕ್ಷಮ್ಮ, ಸದಸ್ಯ ಕಾಂತರಾಜ್, ಸುರೇಶ್, ಉಮೇಶ್, ಚಂದ್ರಶೇಖರಪ್ಪ ಆನಂದಪ್ಪ ಸೇರಿದಂತೆ ಮಹಿಳಾ ಸದಸ್ಯೆಯರು ಹಾಗೂ ತಾಪಂ ಅಧಿಕಾರಿ ವರ್ಗ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.