ಫಲಿತಾಂಶ ಚುನಾವಣೆ ದಿಕ್ಸೂಚಿಯಲ್ಲ
ಕ.ಪ್ರ ವಾರ್ತೆ, ದಾವಣಗೆರೆ, ಮಾ.11
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆ ಫಲಿತಾಂಶವಲ್ಲ. ಬಿಜೆಪಿಯಲ್ಲಿ ಇರುವ ಆಂತರಿಕ ಕಿತ್ತಾಟವನ್ನು ತಿದ್ದಿಕೊಳ್ಳುವುದಕ್ಕೆ ನಾಡಿನ ಮತದಾರರು ನೀಡಿರುವ ಸಂದೇಶ, ಸದಾವಕಾಶ ಇದಾಗಿದೆ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ತಮ್ಮ ಮೇಲಿರುವ ಅಕ್ರಮ ಸೀರೆಗಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹಾಜರಾಗಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಳಜಗಳ ಮರೆತು, ಉತ್ತಮವಾಗಿ ಕೆಲಸ ಮಾಡುವಂತೆ ಜನತೆಯು ಈ ಚುನಾವಣೆ ಮೂಲಕ ಸಂದೇಶ ನೀಡಿದ್ದಾರೆ ಎಂದರು.
ಒಳ ಜಗಳ ತಿದ್ದಿಕೊಳ್ಳಲು ಜನ ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ತಿಳಿ ಹೇಳಿದ್ದಾರೆ. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು, ಪಕ್ಷದ ಎಲ್ಲಾ ನಾಯಕರೂ ಹಿಂದೆ ಆಗಿರುವ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಅಂತಹ ತಪ್ಪುಗಳು ಮರುಕಳಿಸದಂತೆ ಜಾಗರೂಕರಾಗಿರಬೇಕು ಎಂದರು.
ಸೋಲಿಗೆ ಕಾರಣ ನನಗೆ ಗೊತ್ತಿಲ್ಲ: ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಪ್ರತಿಕ್ರಿಯಿಸಲು ನಾನೇನೂ ಜಿಲ್ಲಾ ಉಸ್ತುವಾರಿ ಸಚಿವನಲ್ಲ. ಭದ್ರವಾಗಿ ಇಲ್ಲಿ ನೆಲೆಯೂರಿದ್ದ ಬಿಜೆಪಿ ಇಂದು ಹೀನಾಯಕರ ಸೋಲನುಭವಿಸುವುದಕ್ಕೆ ಏನು ಕಾರಣವೆಂಬ ನಿಮ್ಮ ಪ್ರಶ್ನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೇಳಿದರೆ, ಸಮಂಜಸ ಉತ್ತರ ನಿಮಗೆ ಸಿಗಬಹುದು ಎಂದು ಅವರು ಹೇಳಿದರು.
ಎಲ್ಲಾ ಪಕ್ಷಗಳಿಗೂ, ನಾಯಕರಿಗೂ ಆತ್ಮಾವಲೋಕನ ಮಾಡಿಕೊಳ್ಳುವ ಅವಕಾಶವನ್ನು ಈ ಚುನಾವಣೆ ಫಲಿತಾಂಶ ನೀಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹೊನ್ನಾಳಿ ಕ್ಷೇತ್ರದ ಮತದಾರರು ನನ್ನನ್ನು ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನತೆ ಆಶೀರ್ವಾದದಿಂದಾಗಿ ಹೊನ್ನಾಳಿ ಪಪಂ ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನ ಗೆದ್ದಿದೆ. ನನ್ನ ಮತದಾರ ದೇವರು ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಇದೇ ರೀತಿ ಬೆಂಬಲ, ಪ್ರೋತ್ಸಾಹ, ಆಶೀರ್ವಾದವನ್ನು ನಮಗೆ ತೋರುತ್ತಾರೆ ಎಂಬ ವಿಶ್ವಾಸವಿದೆ ಎಂದು ರೇಣುಕಾಚಾರ್ಯ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

