ಧಾರವಾಡ

ಬಿಜೆಪಿಗೆ ಮತ ನೀಡಿದ್ದಕ್ಕೆ ಜನರಿಂದ ಪಶ್ಚಾತ್ತಾಪ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 26
'ಕಳೆದ ಐದು ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯವೂ ನಡೆದಿಲ್ಲ. ಕಳೆದ ಬಾರಿ ಬಿಜೆಪಿಗೆ ಮತ ನೀಡಿದ್ದಕ್ಕೆ ಕ್ಷೇತ್ರದ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಮತ ನೀಡುವ ಭರವಸೆ ಮತದಾರರು ನೀಡುತ್ತಿದ್ದಾರೆ.'
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಹೇಳಿದ ಮಾತಿದು. 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಚಾರಕ್ಕೆ ತೆರಳಿದಾಗ ಕ್ಷೇತ್ರದಲ್ಲಿ ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
2008ರ ಚುನಾವಣೆ ಪೂರ್ವದಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿದರೆ, ಕಳೆದ ಅವಧಿಯಲ್ಲಿ ಜನೋಪಯೋಗಿ ಕಾರ್ಯಗಳು  ನಡೆದಿಲ್ಲವೆಂದು ದೂರಿದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಅವರ ಸಂದರ್ಶನದ ಪೂರ್ಣ ಪಾಠ ಹೀಗಿದೆ.
ಬಿಜೆಪಿ ಶಾಸಕ ವೀರಭದ್ರಪ್ಪ ಹಾಲಹರವಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಕ್ಕೆ ಕಾಲೇ ಇಟ್ಟಿಲ್ಲ. ಇದು ತಾವು ಮಾಡುತ್ತಿರುವ ಆರೋಪವಲ್ಲ. ಸ್ವತಃ ಈ ಕ್ಷೇತ್ರದ ಜನರಿಗೆ ಹಾಲಹರವಿ ಬಗ್ಗೆ ಇರುವ ಅಸಮಾಧಾನವಿದು. ಹಾಲಹರವಿ ಅವರು ಚುನಾಯಿತರಾದ ನಂತರ ಕ್ಷೇತ್ರದಲ್ಲಿನ ಯಾವುದೇ ವಾರ್ಡ್‌ಗೆ ಕಾಲಿಟ್ಟಲ್ಲ. ಹಲವೆಡೆಯಂತೂ ಮತದಾರರು ಹಾಲಹರವಿಗೆ ಮತ ಕೇಳಲೂ ಬಾರದಂತೆ ನೇರವಾಗಿ ಹೇಳಿಕಳಿಸಿದ್ದಾರಂತೆ. ಕಳೆದ 5 ವರ್ಷದ ಅವಧಿಯಲ್ಲಿ ಜನಸಾಮಾನ್ಯರತ್ತ ನೋಡದ ವೀರಭದ್ರಪ್ಪ ಹಾಲಹರವಿ, ಈಗ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ತೆರಳಿದ್ದು ಮತದಾರರನ್ನು ಕೆರಳಿಸಿದೆ.
ನೀರಿಗಾಗಿ ನಿತ್ಯ ಹೋರಾಡುವ ಸ್ಥಿತಿ: ಕ್ಷೇತ್ರದಲ್ಲಿನ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರ ಪಾಡಂತೂ ನೋಡಲಾಗದು. ಕುಡಿಯಲು ನೀರಿಲ್ಲ. ಕೆಲವೆಡೆ ಒಳ ರಸ್ತೆಗಳು ನಿರ್ಮಾಣವಾಗಿದ್ದನ್ನು ಹೊರತುಪಡಿಸಿದರೆ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ಗುಣಮಟ್ಟದ ರಸ್ತೆಗಳೇ ಕಾಣಿಸುವುದಿಲ್ಲ.
ಈ ಕ್ಷೇತ್ರದ ಯಾವುದೇ ಬಡಾವಣೆ ನಿರಂತರ ಕುಡಿಯುವ ನೀರು ಯೋಜನೆ ವ್ಯಾಪ್ತಿಗೆ ಒಳಪಟ್ಟಿಲ್ಲ. ಶುದ್ಧ ಕುಡಿಯುವ ನೀರಿಗಾಗಿ ಇಲ್ಲಿನ ಜನತೆ ನಿತ್ಯ ಹೋರಾಡುವ ಸ್ಥಿತಿ ಇದೆ. ಗುಣಮಟ್ಟದ ರಸ್ತೆ, ಗಟಾರುಗಳಂತೂ ಕಾಣುವುದೇ ಇಲ್ಲ. ಕಳೆದ 5 ವರ್ಷದ ಅವಧಿಯಲ್ಲಿ ಒಂದೇ ಒಂದು ಆಶ್ರಯ ಮನೆ ನಿರ್ಮಾಣಗೊಂಡಿಲ್ಲ. 2008ರ ಚುನಾವಣೆ ಪೂರ್ವದಲ್ಲಿ ಈ ಕ್ಷೇತ್ರದ ಬಡ ಜನರಿಗೆ ಸಾವಿರಾರು ಆಶ್ರಯ ಮನೆಗಳನ್ನು ನಿರ್ಮಿಸಿ, ವಿತರಿಸಲಾಗಿತ್ತು. ಇನ್ನೂ ಪಡಿತರ ಚೀಟಿ ವ್ಯವಸ್ಥೆಯಂತೂ ಸಂಪೂರ್ಣ ಹಾಳಾಗಿದೆ. ಬಿಪಿಎಲ್-ಎಪಿಎಲ್ ಪಡಿತರ ಚೀಟಿಯ ಗೊಂದಲ ಸೃಷ್ಟಿಸಿ, ಇದ್ದ ವ್ಯವಸ್ಥೆಯನ್ನೂ ಹದಗೆಡಿಸಲಾಗಿದೆ. ಪಡಿತರ ಧಾನ್ಯವಿಲ್ಲದೇ ಬಡವರು ಗೋಳಾಡುತ್ತಿದ್ದಾರೆ.
ಕೊಳಚೆ ಪ್ರದೇಶಗಳಲ್ಲಂತೂ ಮನೆಗಳ ಚಾವಣಿ ಕುಸಿದು, ತಾಡಪತ್ರಿಗಳನ್ನು ಮನೆ ಮೇಲೆ ಹಾಕಿ ಜನರು ವಾಸಿಸುತ್ತಿದ್ದಾರೆ. ನಾವೇನೂ ಕಾರು-ಬಂಗಲೆ ಕೇಳುತ್ತಿಲ್ಲ. ವಾಸಿಸಲು ಒಂದು ಮನೆ, ಎರಡು ಹೊತ್ತು ಊಟವಷ್ಟೇ ಸಾಕು ಎಂದು ಪ್ರಚಾರಕ್ಕೆ ಹೋದಾಗ ಜನರಿಂದ ಕೇಳಿಬರುತ್ತಿರುವ ಈ ವೇದನೆಗೆ ಕಾರಣರು ಯಾರೆಂಬುದು ಮತದಾರರಿಗೆ ತಿಳಿದಿದೆ.
ಚುನಾಯಿತನಾದರೆ ಮಾಡುವ ಕಾರ್ಯ: ಈ ಕ್ಷೇತ್ರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಮೂಲ ಸೌಕರ್ಯಗಳೇ ಇಲ್ಲಿ ಕಾಣಿಸುವುದಿಲ್ಲ. ತಾವೇನಾದರೂ ಚುನಾಯಿತರಾದಲ್ಲಿ ಮೂಲ ಸೌಕರ್ಯ ಒದಗಿಸುವುದು ಮೊದಲ ಆದ್ಯತೆ. ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುತ್ತೇನೆ. ಶಾಲಾ-ಕಾಲೇಜುಗಳು ಇಲ್ಲದಿರುವ ಪ್ರದೇಶದಲ್ಲಿ ಶಾಲಾ-ಕಾಲೇಜುಗಳನ್ನು ನಿರ್ಮಿಸುತ್ತೇನೆ. ಕಳೆದ ಐದು ವರ್ಷದಲ್ಲಿ ಒಂದೇ ಒಂದು ಹೊಸ ಶಾಲೆ ಈ ಕ್ಷೇತ್ರದಲ್ಲಿ ಪ್ರಾರಂಭಗೊಂಡಿಲ್ಲ.
ಸ್ತ್ರೀ ಶಕ್ತಿಗಳ ಸಹಾಯದಿಂದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಸಬಲವಾಗುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕ ವಿವಿಧ ಬಡಾವಣೆಗಳಲ್ಲಿ ಸಣ್ಣಪುಟ್ಟ ಕೈಗಾರಿಕೆಗಳನ್ನು ನಿರ್ಮಿಸಿ, ಸ್ಥಳೀಯವಾಗಿ ಉದ್ಯೋಗ ಕಲ್ಪಿಸುತ್ತೇನೆ. ಕೇಂದ್ರ ಸರ್ಕಾರದಲ್ಲಿರುವ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ, ಸಣ್ಣಪುಟ್ಟ ಕೈಗಾರಿಕೆ ನಿರ್ಮಿಸುವ ಮೂಲಕ ಸ್ಥಳೀಯರು ಮತ್ತಷ್ಟು ಅರ್ಥಿಕವಾಗಿ ಸಬಲರಾಗಲು ಪ್ರಯತ್ನಿಸುತ್ತೇನೆ.
ಪ್ರಚಾರಕ್ಕೆ ಕ್ಷೇತ್ರದಲ್ಲಿ ಹೋದಾಗ ಮತದಾರರು ಆತ್ಮೀಯವಾಗಿ ಮಾತನಾಡಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಐದು ವರ್ಷಗಳ ಹಿಂದೆ ಸುಖವಾಗಿದ್ದೇವು. ಮತ್ತೆ ಕಾಂಗ್ರೆಸ್ ಅಭ್ಯರ್ಥಿಯೇ ಚುನಾಯಿತರಾಗಬೇಕೆಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ.
ಈಗ ಎಲ್ಲೆಡೆ ಕಾಂಗ್ರೆಸ್ ಅಲೆ ಇದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳು, ಮುಖ್ಯಮಂತ್ರಿಗಳ ಬದಲಾವಣೆಗಳಿಂದ ಜನರು ಬೇಸತ್ತಿದ್ದಾರೆ. ಸ್ಥಿರ ಹಾಗೂ ಪಾರದರ್ಶಕ ಸರ್ಕಾರ ಬೇಕೆಂದರೆ ಕಾಂಗ್ರೆಸ್ ಅಭ್ಯರ್ಥಿಗಳಿಗೇ ಮತ ನೀಡಬೇಕೆಂಬ ಸತ್ಯ ಮತದಾರರ ಅರಿವಿಗೆ ಬಂದಿದೆ.
ಪರಸ್ಪರ ಕಾಲೆಳೆಯುವ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡದೇ, ಕಾಂಗ್ರೆಸ್‌ಗೆ ಮತ ನೀಡಿದರೆ ಮಾತ್ರ ಅಭಿವೃದ್ಧಿ ಕಾರ್ಯಗಳಾಗುತ್ತವೆ ಎಂಬುದು ಸಾರ್ವಜನಿಕರಿಗೆ ತಿಳಿದಿದೆ. ಹೀಗಾಗಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.