ದೋಣಿ ಸಂಚಾರಕ್ಕೆ ಯೋಗ್ಯ ಓಣಿಗಳು
ಉಪ್ಪಿನ ಬೆಟಗೇರಿ (ಧಾರವಾಡ): ಇದು ಮಾಜಿ ಶಾಸಕಿ ಸೀಮಾ ಮಸೂತಿ ಊರು. ಸುವರ್ಣ ಗ್ರಾಮ ಯೋಜನೆ ಸೌಲಭ್ಯ ಪಡೆದರೂ ಗ್ರಾಮ ಮಾತ್ರ ಒಂಚೂರು ಸುಧಾರಣೆಯಾಗಿಲ್ಲ ಎಂಬುದಕ್ಕೆ ಗ್ರಾಮದ ಅನೇಕ ಓಣಿಗಳಲ್ಲಿ ಮನೆ ಬಾಗಿಲ ತುಂಬ ನಿಂತಿರುವ ಮಳೆ ನೀರೇ ಸಾಕ್ಷಿ.
ಗ್ರಾಮದ ಎಲ್ಲ ಓಣಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಗಟಾರು ನಿರ್ಮಿಸದ ಕಾರಣ ರಸ್ತೆಗಳೆಲ್ಲ ನೀರಿನ ಹೊಂಡಗಳಾಗಿ ಮಾರ್ಪಟ್ಟಿವೆ. ಜೊತೆಗೆ ಮನೆಯ ಪಾತ್ರೆ, ಬಟ್ಟೆ ತೊಳೆದ ನೀರು ಗಟಾರಿಗೆ ಹರಿದು ಹೋಗುವ ಬದಲು ರಸ್ತೆಗೆ ಬರುತ್ತಿದೆ. ಇದರ ಜೊತೆಗೆ ಮಳೆ ನೀರೂ ಸೇರಿ ಕಾಂಕ್ರೀಟ್ ರಸ್ತೆಗಳು ನೀರಿನಿಂದ ತುಂಬಿಕೊಂಡಿವೆ. ರಸ್ತೆಯಗಲಕ್ಕೂ ಪಾಚಿ ಕಟ್ಟಿದ್ದು ಕಾಲಿಟ್ಟರೆ ಜರಿದು ಬೀಳುವುದು ಗ್ಯಾರಂಟಿ.
ಗ್ರಾಮದ ಹೊಸಪೇಟಮಠ ಓಣಿ, ಹದಿಮೂರಕೆರೆ ಓಣಿಗಳಲ್ಲಂತೂ ಜರಿದು ಬೀಳುವುದು ನಿಶ್ಚಿತ. ಆದರೂ ಅನಿವಾರ್ಯವಾಗಿ ಜನ ಎದ್ದುಬಿದ್ದು ಅಡ್ಡಾಡುತ್ತಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಅಂಗವಿಕಲರು, ವಯೋವೃದ್ಧರು ಸೇರಿದಂತೆ ಮೂಕ ಪ್ರಾಣಿಗಳೂ ಮುಗ್ಗರಿಸಿ ಬೀಳುತ್ತಿದ್ದು, ಜನ ಕೈಯಲ್ಲಿ ಜೀವ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಗ್ರಾಮ ಪಂಚಾಯಿತಿ ಮಾತ್ರ ಕಂಡರೂ ಕಾಣದಂತೆ ಜಾಣ ಕುರುಡ ಮೆರೆಯುತ್ತಿದೆ.
ಮಳೆಗಾಲದಲ್ಲಂತೂ ಗ್ರಾಮಸ್ಥರ ಗೋಳು ಹೇಳತೀರದು. ಗಟಾರುಗಳಿರದ ಕಾರಣ ಹರಿದು ಬರುವ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಆ ನೀರನ್ನು ಹೊರ ಹಾಕಿ ಬೇಸತ್ತ ಜನ, ತಮ್ಮ ಮನೆಗಳ ಮುಂದೆ ಮರ್ರಂ ಬಿಡಿಸಿಕೊಂಡಿದ್ದಾರೆ. ಹೀಗಾಗಿ ಓಣಿಯುದ್ದಕ್ಕೂ ಮೊಣಕಾಲುದ್ದ ನೀರು ನಿಂತಿದ್ದು, ರಸ್ತೆ ದೋಣಿ ವಿಹಾರಕ್ಕೆ ಸಿದ್ಧವಾದಂತಿದೆ. ಕತ್ತಲಾಗುತ್ತಿದ್ದಂತೆ ಮನೆಯಿಂದ ಜನ ಹೊರ ಹೋಗದಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಸಮಸ್ಯೆಗೆ ಸ್ಪಂದಿಸದಿರುವ ಗ್ರಾಮ ಪಂಚಾಯಿತಿಗೆ ಜನ ಹಿಡಿ ಶಾಪ ಹಾಕುತ್ತಿದ್ದಾರೆ.
ಗ್ರಾಮ ಪಂಚಾಯ್ತಿಯಲ್ಲಿ ಬಜೆಟ್ ಕೊರತೆಯಿದೆ. ಆದ್ದರಿಂದ ಹೊಸ ಕ್ರಿಯಾಯೋಜನೆ ಸಿದ್ದಪಡಿಸಿ ಅನುಮತಿ ದೊರೆತ ನಂತರವೇ ಈ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯ ಎನ್ನುತ್ತಾರೆ ಗ್ರಾಪಂ ಪಿಡಿಓ ಸಂಗಪ್ಪ ಕರಿಕಟ್ಟಿ. ಆದರೆ, ಗ್ರಾಮದ ಹಿರಿಯ ಕೃಷ್ಣಾ ಬುದ್ನಿ, ಗ್ರಾಮ ಪಂಚಾಯತಿ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಪ್ರತಿ ದಿನ ಸಾರ್ವಜನಿಕರು ರಸ್ತೆಗಳಲ್ಲಿ ಜರಿದು ಬೀಳುತ್ತಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಬೇಸರ ತಂದಿದೆ ಎನ್ನುತ್ತಾರೆ.
ಊರಿನ ಇಂತಹ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನರು ಪಡುತ್ತಿರುವ ತೊಂದರೆಗಳಿಗೆ ಮುಕ್ತಿ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ.
-ಪ್ರಕಾಶ ಹೂಗಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

