ಬೆಳೆವಿಮೆ ನ್ಯೂನತೆ ಸರಿಪಡಿಸಿ
ಕನ್ನಡಪ್ರಭ ವಾರ್ತೆ, ನವಲಗುಂದ, ಆ. 17
ಸರ್ಕಾರ ಜಾರಿಗೊಳಿಸಿರುವ ಬೆಳೆವಿಮೆಯಲ್ಲಿ ಹಲವಾರು ನಿಯಮಾವಳಿಗಳು ಹಾಗೂ ಲೋಪದೋಷಗಳಿಂದಾಗಿ ರೈತರಿಗೆ ಬೆಳೆವಿಮೆಯ ಲಾಭ ದೊರಕುತ್ತಿಲ್ಲ. ಕಾರಣ ನಿಯಮ ಸಡಿಲಿಕೆ ಮಾಡಿ ನ್ಯೂನತೆ ಸರಿಪಡಿಸಿ ರೈತರಿಗೆ ಪರಿಹಾರ ಸಿಗುವಂತೆ ಮಾಡಬೇಕೆಂದು ಪಕ್ಷಾತೀತ ರೈತರ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪಕ್ಷಾತೀತ ರೈತ ಹಿತ ರಕ್ಷಣಾ ಸಮಿತಿಯವರು ಶುಕ್ರವಾರ ಇಲ್ಲಿಯ ಲಾಲಗಡಿ ಮಾರುತಿ ದೇವಸ್ಥಾನದಲ್ಲಿ ಏರ್ಪಡಿಸಿದ ಸಭೆಯಲ್ಲಿ ಬೆಳೆವಿಮೆ ಕುರಿತು ರೈತರು ಚರ್ಚೆ ನಡೆಸಿ ಹಲವಾರು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರೈತರ ನಿರ್ಣಯಗಳು: ಬೆಳೆವಿಮೆಯ ಸಮಗ್ರ ಮಾಹಿತಿಯನ್ನು ಕಡ್ಡಾಯವಾಗಿ ಪ್ರತಿ ಗ್ರಾಮದ ರೈತರಿಗೆ ತಿಳಿಯುವಂತೆ ಮಾಹಿತಿ ಒದಗಿಸುವುದು, ಕಂತು ಭರಿಸಲು ನಿಗದಿಪಡಿಸುವ ಕೊನೆ ಕೊನೆ ದಿನಾಂಕದಂತೆಯೇ ಸಮೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಮುನ್ನ ಕೊನೆಯ ದಿನಾಂಕ ನಿಗದಿಪಡಿಸಬೇಕು.
ಪ್ರಾಯೋಗಿಕವಾಗಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಗುಲ್ಬರ್ಗಾ, ಶಿವಮೊಗ್ಗ, ತುಮಕೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಮಾತ್ರ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುವ ಯೋಜನೆ ಹಾಕಿಕೊಂಡಿದೆ.
ಈ ಯೋಜನೆಯನ್ನು ಧಾರವಾಡ ಜಿಲ್ಲೆಗೂ ಅನ್ವಯಿಸಬೇಕು.
ಹುಬ್ಬಳ್ಳಿಯಲ್ಲಿರುವ ಬೆಳೆವಿಮೆ ಕಾರ್ಯಾಲಯಕ್ಕೆ ಪೂರ್ಣ ಪ್ರಮಾಣದ ಸಿಬ್ಬಂದಿ ಒದಗಿಸಿ ಈ ಭಾಗದ ರೈತ ವರ್ಗದ ಸೇವೆಗೆ ಅನುಕೂಲವಾಗುವಂತೆ ಮಾಡಬೇಕು. ಈ ಹಿಂದೆಯಿರುವ ಕೇಂದ್ರ ಸರ್ಕಾರದ ವಿಪತ್ತು ಪರಿಹಾರ ಯೋಜನೆ (ಸಿಆರ್ಎಫ್)ಯಲ್ಲಿರುವ ಓಬೆರಾಯನ ಕಾಲದ ನಿಯಮ ಬದಲಿಸಬೇಕು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದಾಗ ಮಾತ್ರ ಕೇಂದ್ರ ಸರ್ಕಾರ ಗಮನಹರಿಸಲು ಸಾಧ್ಯವಾಗುತ್ತದೆ.
ಈ ಕುರಿತು ರೈತರನ್ನು ಜಾಗ್ರತಗೊಳಿಸಿ ಕನಿಷ್ಠ ದೊಡ್ಡ ಗ್ರಾಮಗಳಿಗೆ ಪ್ರವಾಸ ತಂಡಗಳನ್ನು ರಚಿಸಿ ತಿಳಿವಳಿಕೆ ಕೊಟ್ಟು ಸ್ಥಳೀಯ ಸಂಸ್ಥೆಯ ಚುನಾವಣೆ ಮುಗಿದ ನಂತರ ಬೃಹತ್ ಸಂಖ್ಯೆಯಲ್ಲಿ ರೈತರನ್ನು ಒಗ್ಗೂಡಿಸಿ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗುವುದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಬಿ.ಎಚ್. ದೇವರಡ್ಡಿ, ಸುರೇಶ ಕುಲಕರ್ಣಿ, ಕೊಟ್ರೇಶ ಶಿರೂರ, ಎಚ್.ಪಿ. ನಾಗರಳ್ಳಿ, ಬಿ.ಎಂ. ಹನಸಿ, ಹನಮಂತಪ್ಪ ಲಕ್ಕಣ್ಣವರ, ಸಹದೇವಪ್ಪ ಶಿರೋಳ, ಲೋಕನಾಥ ಹೆಬಸೂರ, ಶಂಕ್ರಣ್ಣ ಅವರಾಧಿ, ಶಿದ್ಲಿಂಗಪ್ಪ ಕುಲಕರ್ಣಿ, ಬಸವರಾಜ ಹರಿವಾಳದ, ಜಿ.ಪಿ. ಕೆಂಚನಗೌಡ್ರ, ದೇವೆಂದ್ರಪ್ಪ ಹಳ್ಳದ, ಪರಮೇಶ್ವರ ಹೊಸವಾಳ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

