ಜನರಲ್ಲಿ ಕಾಣದ ಪ್ರಜ್ಞೆ
-ಸತೀಶ ಪಾಗಾದ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಆ. 26
ಹುಬ್ಬಳ್ಳಿ ನಗರವನ್ನು ಅತೀಯಾಗಿ ಕಾಡುತ್ತಿರುವ ಕಸದ ಸಮಸ್ಯೆಯಲ್ಲಿ ಜನರದ್ದು ಪಾಲಿದೆಯೇ?
ಹೌದು...! ತೂತು ಬಿದ್ದಿರುವ ಕಂಟೇನರ್ಗಳು, ಬೀದಿ ತುಂಬ ಹರಡಿದ ಕಸ, ಸುತ್ತಲಿನವರ ಪಾಲಿಗೆ ಗಾರ್ಬೇಜ್ ಯಾರ್ಡ್ ಆಗಿರುವ ಖಾಲಿ ನಿವೇಶನಗಳನ್ನು ನೋಡಿದ ಮೇಲೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ತಲೆ ಎತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯಲ್ಲಿ ಮಹಾನಗರ ಪಾಲಿಕೆಗಿಂತ ಜನರದ್ದೇ ಹೆಚ್ಚಿನ ಪಾಲು ಇದೆ ಎನ್ನುವುದು ಮನವರಿಕೆಯಾಗುತ್ತಿದೆ.
ಹುಬ್ಬಳ್ಳಿ ನಗರವೊಂದರಲ್ಲೇ ಸುಮಾರು 450 ತ್ಯಾಜ್ಯ ಕಂಟೇನರ್ಗಳಿದ್ದು ಬಹುತೇಕ ಈ ಕಂಟೇನರ್ಗಳಿಗೆ ಕನ್ನ ಹಾಕಲಾಗಿದೆ. ತೂತು ಬಿದ್ದಿರುವ ಈ ಕಂಟೇನರ್ಗಳಲ್ಲಿ ನಾಗರಿಕರು ಹಾಕುವ ಕಸ ಹಂದಿ ಹಾವಳಿಯಿಂದಾಗಿ ಬೀದಿ ತುಂಬ ಹರಡುತ್ತಿದೆ.
ಕಂಟೇನರ್ಗಳಿಗೆ ತೂತು ಕೊರೆಯುವ ಕೆಲಸವನ್ನು ನಗರದ ಹಂದಿ ಸಾಕಾಣಿಕೆದಾರರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ತಮ್ಮ ಹಂದಿಗಳಿಗೆ ಸುಲಭವಾಗಿ ಆಹಾರ ದೊರೆಯಲಿ ಎಂದು ಈ ಕೆಲಸ ಮಾಡುತ್ತಿದ್ದು, ಈ ತೂತು ಕೊರೆಯುವಿಕೆ ಕೆಲಸ ನಗರದ ಸ್ವಚ್ಛತೆ ಮತ್ತು ಸಮುದಾಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ನಾಗರಿಕರ ಜಿಪುಣತನ: ೆಡಾ. ಪಾಂಡುರಂಗ ಪಾಟೀಲ ಅವರು ಮೇಯರ್ ಆಗಿದ್ದ ವೇಳೆ ಅವಳಿ ನಗರದಲ್ಲಿ ಜಾರಿಗೆ ಬಂದ ಮನೆ ಮನೆ ಕಸ ಸಂಗ್ರಹ ಯೋಜನೆಗೆ ಇತಿಶ್ರೀ ಹಾಡಿದ್ದು ನಾಗರಿಕರೇ. ತಿಂಗಳಿಗೆ ಇಪ್ಪತ್ತು ರೂಪಾಯಿ ಕೊಡುವುದಕ್ಕೆ ಹಿಂದೇಟು ಹಾಕಿ ಇಂದು ಮಾಡುತ್ತಿರುವ ಕೆಲಸ ಹತ್ತಿರ ಇರುವ ಖಾಲಿ ನಿವೇಶನಗಳಲ್ಲಿ ತಮ್ಮ ಮನೆ ಕಸ ಎತ್ತಿ ಹಾಕುವುದು ಈ ಮೂಲಕ ನಗರದ ಕಸ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದ್ದಾರೆ.
ಎಲ್ಲಿ ಬೇಕೆಂದರಲ್ಲಿ ಬೀಳುತ್ತಿರುವ ಕಸದ ನಿರ್ವಹಣೆ ಕೂಡ ಅಷ್ಟೆ ಜಟೀಲವಾಗಿದ್ದು, ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಇರುವ 1700 ಪೌರ ಕಾರ್ಮಿಕರಿಂದ ಇಡೀ ನಗರದ ಸ್ವಚ್ಛತೆ ಕಾಪಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಸ ಎತ್ತುವಳಿಗೆ 67 ವಾರ್ಡ್ಗಳಿಗೂ ತಲಾ ಒಂದು ಟ್ರ್ಯಾಕ್ಟರ್ ಇದ್ದರೂ ಬೀದಿಯಲ್ಲಿ ಬೀಳುವ ಕಸದ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.
ಬೀದಿಗೆ ಬರುತ್ತಿರುವ ಕಸ: ಹಂದಿ ಸಾಕಾಣಿಕೆದಾರರು ತಮ್ಮ ಹಂದಿಗಳಿಗೆ ಆಹಾರ ಸಿಗಲಿ ಎಂದು ಕಂಟೈನರ್ಗಳಿಗೆ ಕನ್ನ ಹಾಕಿದರೆ, ಚಿಂದಿ ಆಯುವವರಿಂದ ಕಂಟೈನರ್ಗಳಲ್ಲಿರುವ ಕಸ ಬೀದಿಗೆ ಬರುತ್ತಿದೆ. ಗುಜರಿಯಲ್ಲಿ ಮಾರಲ್ಪಡುವ ವಸ್ತುಗಳನ್ನು ಮಾತ್ರ ಕಸದ ಡಬ್ಬಿಗಳಿಂದ ಕೆದಕಿ ಕೆದಕಿ ತೆಗೆದುಕೊಳ್ಳುವ ಇವರು, ತಮ್ಮ ಕೆಲಸ ಮುಗಿದ ಕೂಡಲೇ ಅಲ್ಲಿಂದ ಜಾಗ ಮಾಡುತ್ತಾರೆ. ಒಂದು ವೇಳೆ ನಾಗರಿಕರು ಕಂಟೈನರ್ಗಳಿಗೆ ಕಸ ಹಾಕಿದರೂ ಚಿಂದಿ ಆಯುವವರಿಂದಾಗಿ ಕಸ ಮತ್ತೆ ಬೀದಿಗೆ ಬರುತ್ತಿದೆ.
ಎಂಜಿನಿಯರ್ ಎನಂತಾರೆ?: ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಗಿರೀಶ ಅವರು, ಹಂದಿ ಸಾಕಾಣಿಕೆದಾರರು ಕಂಟೈನರ್ಗಳಿಗೆ ಕನ್ನ ಹಾಕಿ ಹಾಳು ಮಾಡುತ್ತಿರುವುದರಿಂದ ಬೀದಿಗೆ ಕಸ ಬಂದು ಬೀಳುತ್ತಿದೆ. ಕೆಲವೊಮ್ಮೆ ಸ್ಥಳದಲ್ಲಿರುವ ಪೌರ ಕಾರ್ಮಿಕರು ಮತ್ತೆ ಕಸವನ್ನು ಎತ್ತಿ ಕಂಟೈನರ್ಗೆ ಸುರಿಯುತ್ತಾರೆ.
ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಪಾಲಿಕೆಯ ವತಿಯಿಂದ 1ಘನ ಮೀಟರ್ ಸುತ್ತಳತೆಯ ಮತ್ತು ಗಾಲಿಗಳನ್ನು ಹೊಂದಿರುವ 93 ಕಂಟೈನರ್ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇವುಗಳನ್ನು ವೆಸ್ಟ್ ಕಾಂಪ್ಯಾಕ್ಟ್ ಗಾಡಿ ತಾನೇ ಅನಲೋಡ್ ಮಾಡಿಕೊಳ್ಳುತ್ತದೆ. ಕಸ ಎತ್ತಿ ಹಾಕುವುದಕ್ಕೆ ಪೌರ ಕಾರ್ಮಿಕರ ಅಗತ್ಯವಿಲ್ಲ. ಅಲ್ಲದೇ ಒಂದು ಕಾಂಪ್ಯಾಕ್ಟ್ ಮಷಿನ್ ಕನಿಷ್ಠ ಏನಿಲ್ಲವೆಂದರೂ 10 ಟನ್ ಕಸ ಸಂಗ್ರಹಿಸುತ್ತದೆ.
ಚಿಂದಿ ಆಯುವವರಿಂದ ಆಗುತ್ತಿರುವ ಕಸ ಹರಡುವ ಕೆಲಸಕ್ಕೆ ತಡೆ ಒಡ್ಡುವುದಕ್ಕೆ ಪಾಲಿಕೆಯಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಚಿಂದಿ ಆಯ್ದು ಜೀವನ ಸಾಗಿಸುತ್ತಿರುವ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲು ಸರಿ ಎನ್ನಿಸುವುದಿಲ್ಲ. ಹೀಗಾಗಿ ಆಯಾ ಪರಿಸರದಲ್ಲಿರುವ ಪೌರ ಕಾರ್ಮಿಕ ಬೀದಿಗೆ ಬಂದು ಬಿದ್ದ ಕಸ ಎತ್ತಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

