ಗಮನ ಸೆಳೆದ ಮಕ್ಕಳ ಹಬ್ಬ
ಧಾರವಾಡ: ಕರಾವಳಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ, ಮೈಸೂರು ಕರ್ನಾಟಕ ಜಿಲ್ಲೆಗಳ ಕಲೆ, ಸಂಸ್ಕೃತಿ ಒಂದೇ ವೇದಿಕೆಯಲ್ಲಿ ನೋಡಬೇಕೆಂಬ ಹಲವಾರು ಕನ್ನಡ ರಸಿಕರ ಆಸೆ ಈಡೇರಿದ್ದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ. ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಸ್ಕೂಲ್ನಲ್ಲಿ ಈ ಮಕ್ಕಳ ಹಬ್ಬದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳು ತಮ್ಮ ತಮ್ಮ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ದ್ಯೋತಕವಾಗಿರುವ ಕ್ರೀಡೆ, ಜಾನಪದ ಕಲೆಗಳನ್ನು ಪ್ರದರ್ಶಿಸಿದರು. ಹಾಸನ ಜಿಲ್ಲೆಯ ಆನಂದ ಭಾರತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ತ್ಯಾಗವೀರ ಬಾಹುಬಲಿ ನಾಟಕ ಹಾಗೂ ಗದಗ ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಕಂಸಾಳೆ ನೃತ್ಯ, ಹುಬ್ಬಳ್ಳಿಯ ಬಾಲಕಿಯರ ಬಾಲ ಮಂದಿರದ ಬಾಲಕಿಯರು ಪ್ರದರ್ಶಿಸಿದ ಪಪ್ಪೆಟ ಶೋ ಎಲ್ಲರ ಗಮನ ಸೆಳೆದವು. ಪಟ ಕುಣಿತ, ಬೊಳಕಾಟ ನೃತ್ಯ, ಭರತನಾಟ್ಯ, ಕಾಡಿನ ಜಾನಪದ ನೃತ್ಯ, ಹಾವು-ಮುಂಗುಸಿ ರೂಪಕ ನೃತ್ಯ, ಕಂಸಾಳೆ, ಕೊಳಲು ಪ್ರದರ್ಶನಗೊಂಡವು. ನವಲಗುಂದದ ಶೆಲವಡಿ, ಧಾರವಾಡದ ಹರ್ಲಾಪುರ ತಂಡದಿಂದ ಮಲ್ಲಗಂಬ, ರೋಪ ಹಾಗೂ ಹಿರೇಹರ್ಕುಣಿಯಿಂದ ಮಲ್ಲಗಂಬ, ಹ್ಯಾಂಗಿಂಗ್ ರೋಪ್ ಸಾಹಸಮಯ ಪ್ರದರ್ಶನ ರೋಮಾಂಚನಗೊಳಿಸಿದವು. ಮಾದರಿಯಲ್ಲಿ ಪವಾಡ ಬಯಲು, ಪೊಲೀಸ್ ಇಲಾಖೆಯಿಂದ ಡಾಗ್ ಶೋ, ಅಗ್ನಿ ಶಾಮಕದಳದಿಂದ ಫೈರ್ ಶೋ ನಡೆದವು.
ಅವಳಿನಗರದ ಕೀರ್ತಿ ಹೆಚ್ಚಿಸಿ
ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಕಾಲೇಜ್ ಹಾಗೂ ದೇಶಪಾಂಡೆ ಫೌಂಡೇಶನ್ನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಇನ್ಸ್ಪೀರೋ-2013 ಸ್ಪರ್ಧೆಯ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ವಿವಿಧ ಕಾಲೇಜ್ಗಳಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಆನಂದ ವಡ್ಡೀನ್, ಪ್ರೊ. ಶಿರೇಲಿ ಬೆನ್ನಿ, ಕೌಶಿಕ್ ಶೆಟ್ಟಿ ಮತ್ತಿತರರಿದ್ದರು.
ಅಪನಾ ಹುಬ್ಳಿ: ಇದೇ ಸಂದರ್ಭದಲ್ಲಿ ಅಪನಾ ಹುಬ್ಳಿ ವೆಬ್ಸೈಟ್ನ್ನು ಉದ್ಘಾಟಿಸಲಾಯಿತು. ವೆಬ್ಸೈಟ್ನ ಸಹ ಸಂಸ್ಥಾಪಕ ಮಂಜುನಾಥ ಬನಶಂಕರಿ ಮಾತನಾಡಿದರು. ಕಿರುತೆರೆ ನಟ ರಾಜ್ ಪುರೋಹಿತ, ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದು ಹುಬ್ಬಳ್ಳಿ-ಧಾರವಾಡದ ಕೀರ್ತಿ ಹೆಚ್ಚಿಸಬೇಕೆಂದರು.
ಮಕ್ಕಳಿಗೆ ಸೈಕಲ್ ವಿತರಣೆ
ನವಲಗುಂದ: ಸ್ಥಳೀಯ ಮಾಡೆಲ್ ಹೈಸ್ಕೂಲ್ನಲ್ಲಿ ಬಡ ಮಕ್ಕಳಿಗೆ ಸರ್ಕಾರದಿಂದ ಕೊಡ ಮಾಡುವ ಸೈಕಲ್ಗಳನ್ನು ಸಂಸ್ಥೆ ಕಾರ್ಯದರ್ಶಿ ವಿ.ಪಿ. ಪಾಟೀಲ ವಿತರಿಸಿದರು. ಸಂಸ್ಥೆ ನಿರ್ದೇಶಕ ಅಣ್ಣಪ್ಪ ಬಾಗಿ, ಎಸ್.ಎಂ. ಪಟ್ಟಣಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಬಿ.ಜಿ. ತೊಗರಿ, ಮುಖ್ಯಾಧ್ಯಾಪಕಿ ಎಸ್.ಎಂ. ಕೊಪ್ಪದ ಅಧ್ಯಕ್ಷತೆ ವಹಿಸಿದ್ದರು.
ಜಿಗುಪ್ಸೆ: ವಿಶ್ರಾಂತಿ ಕೊಠಡಿಯಲ್ಲಿ ವೈದ್ಯ ಆತ್ಮಹತ್ಯೆ
ಕುಂದಗೋಳ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖ್ಯಾತ ವೈದ್ಯ ಡಾ. ಸದಾನಂದ ಚವಡಿ (62) ಅವರು ಆಸ್ಪತ್ರೆಯ ವೈದ್ಯರ ವಿಶ್ರಾಂತಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ.
ಘಟನೆ ವಿವರ: ಡಾ. ಚವಡಿ ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 3-4 ತಿಂಗಳಿಂದ ಎಲುಬು-ಕೀಲು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಬುಧವಾರ ರಾತ್ರಿ ಪಾಳೆ ಇದ್ದರೂ ಮಧ್ಯಾಹ್ನ ಆಸ್ಪತ್ರೆಗೆ ಬಂದು ಒಪಿಡಿಯಲ್ಲಿ 2 ಗಂಟೆಗಳ ಕಾಲ ರೋಗಿಗಳನ್ನು ಪರೀಕ್ಷಿಸಿ, ನಂತರ ವೈದ್ಯರ ವಿಶ್ರಾಂತಿ ಕೊಠಡಿಗೆ ತೆರಳಿ ಬಾಗಿಲು ಭದ್ರಪಡಿಸಿಕೊಂಡು ಕೊಠಡಿಯಲ್ಲಿನ ಫ್ಯಾನ್ಗೆ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಪಾಳೆಯ ವೈದ್ಯರು ಸೇವೆ ಮುಗಿಸಿ ಚವಡಿ ಅವರು ಇದ್ದ ವಿಶ್ರಾಂತಿ ಕೊಠಡಿಗೆ ಹೋಗಿ ಬೇಕಾದಷ್ಟು ಬಾಗಿಲು ಬಡೆದರೂ ಬಾಗಿಲು ತೆರೆಯಲಿಲ್ಲ. ನಂತರ ಗಾಬರಿಗೊಂಡ ವೈದ್ಯರು ಸಿಬ್ಬಂದಿ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಡಾ. ಸದಾನಂದ ಚವಡಿ ಫ್ಯಾನಿಗೆ ನೇತಾಡುತ್ತಿದ್ದರು. ಇದರಿಂದ ತಬ್ಬಿಬ್ಬಾದ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದಾಗ ಸಿಪಿಐ ಮುತ್ತಪ್ಪ ಪಾಟೀಲ ಘಟನಾ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಅವರ ಕೈಬರಹದ ಪತ್ರವು ಸಿಕ್ಕಿದೆ ಎಂದು ಡಿಎಚ್ಒ ಡಾ. ಎನ್.ಎಂ. ಅಂಗಡಿ ತಿಳಿಸಿದರು.
ಸಾವಿಗೆ ನಾನೇ ಕಾರಣ: ಡಾ. ಚವಡಿ ಅವರ ಕೈ ಬರಹದ ಪತ್ರದಲ್ಲಿ ನನ್ನ ಸಾವಿಗೆ ನಾನೇ ಕಾರಣ. ಯಾರೂ ಹೊಣೆಯಲ್ಲ. ನನ್ನ ವೈಯಕ್ತಿಕ ತೊಂದರೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ದೇಹವನ್ನು ಯಾರಿಗೂ ನೀಡದೇ ಯಲ್ಲಾಪುರದ ಅರಣ್ಯದಲ್ಲಿ ಎಸೆಯಿರಿ ಎಂದು ಬರೆಯಲಾಗಿದೆ ಎಂದು ಡಿಎಚ್ಒ ಡಾ. ಅಂಗಡಿ ಹೇಳಿದ್ದಾರೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಸಿಪಿಐ ಮುತ್ತಪ್ಪ ಪಾಟೀಲ ತಿಳಿಸಿದರು. ಮೃತರಿಗೆ ಪತ್ನಿ, ಪುತ್ರರು, ಓರ್ವ ಪುತ್ರಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

