ಧಾರವಾಡ

ಇದ್ದೂ ಇಲ್ಲದಂತಿರುವ ಪಶ್ಚಿಮ ಸಂಚಾರ ಪೊಲೀಸ್ ಠಾಣೆ!

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 3
ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸರ ಕಾರ್ಯ ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲಷ್ಟೇ ಸಿಮೀತವಾಗಿದೆಯೋ ಅಥವಾ ಸುರಕ್ಷಿತ ಸಂಚಾರ ವ್ಯವಸ್ಥೆಯನ್ನೂ ಒದಗಿಸಿಕೊಡುವುದಾಗಿದೆಯೋ..? ಇಂತಹದೊಂದು ಪ್ರಶ್ನೆ ಅವಳಿನಗರದ ವಾಹನಗಳ ಮಾಲೀಕರಿಗೆ ಕಾಡತೊಡಗಿದೆ.
ಸರ್ವೋಚ್ಚ ನ್ಯಾಯಾಲಯ 'ಹೆಲ್ಮೆಟ್ ಕಡ್ಡಾಯ' ಎಂಬ ತೀರ್ಪುನ್ನು ಕಟ್ಟುನಿಟ್ಟಾಗಿ ಮಹಾನಗರದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಹಿರಿಯ ಅಧಿಕಾರಿಗಳು ಕಮೀಷ್ನರೇಟ್‌ಗೆ ಸೂಚನೆ ನೀಡಿದ್ದು ಇಲ್ಲಿನ ಕೆಲ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ 'ಕರ್ತವ್ಯ ಪ್ರಜ್ಞೆ' ಕಡಿಮೆ ಮಾಡಿದೆ...!
ಜನಸಾಮಾನ್ಯರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದಕ್ಕಿಂತಲೂ ಹೆಚ್ಚಾಗಿ ಆಯಾ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಸಿಬ್ಬಂದಿ ದಂಡ ವಸೂಲಿ ಕಾಯಕದಲ್ಲೇ ಹೆಚ್ಚಾಗಿ ಗಮನ ಹರಿಸುತ್ತಿರುವುದು ಕಂಡುಬರತೊಡಗಿದೆ.
ಇನ್ನೂ ಕೆಲ ಸಿಬ್ಬಂದಿಯಂತೂ ತಮ್ಮ ಮುಂದೆ ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ವಾಹನ ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದು ಟ್ರಾಫಿಕ್ ಜಾಮ್ ಆದರೂ ಅದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಮತ್ತ್ಯಾರಿಗೆ ದಂಡ ವಿಧಿಸಬೇಕು ಎಂಬ ಕಾತುರದಲ್ಲಿ ನಿಂತುಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಫಲಿಸದ ಉದ್ದೇಶ: ಅವಳಿನಗರದಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗಿದೆ. ಸುಗಮ ವಾಹನ ಸಂಚಾರಕ್ಕೆ ಇನ್ನೊಂದು ಸಂಚಾರ ಠಾಣೆ ಅತಿ ಅವಶ್ಯಕವಾಗಿದೆ ಎಂಬ ಬೇಡಿಕೆ ಹೆಚ್ಚಾಗಿದ್ದರಿಂದ ರಾಜ್ಯ ಸರ್ಕಾರ, 2011ರ ಮೇ 31ರಂದು ಕೇಶ್ವಾಪುರದಲ್ಲಿ 'ಪಶ್ಚಿಮ ಸಂಚಾರ' ಠಾಣೆ ಆರಂಭಿಸಿತು. ಈ ಠಾಣೆಗೆ ಸಾಕಷ್ಟು ಸಿಬ್ಬಂದಿಯನ್ನೂ ಕಲ್ಪಿಸಿಕೊಟ್ಟಿದೆ.
ಠಾಣೆಯ ಸರಹದ್ದು: ರೇಲ್ವೆ ಸ್ಟೇಶನ್, ಪಿಂಟೋ ಸರ್ಕಲ್ (ದಕ್ಷಿಣ ಮತ್ತು ಉತ್ತರ ವಿಭಾಗ), ಲ್ಯಾಮಿಂಗ್ಟನ್ ರಸ್ತೆ, ಗದಗ ರಸ್ತೆ, ಬೃಂದಾವನ ಸರ್ಕಲ್, ನಗರದ ಹೃದಯ ಭಾಗವಾಗಿರುವ ಕಿತ್ತೂರ ಚೆನ್ನಮ್ಮ ಸರ್ಕಲ್, ಕಮರಿಪೇಟ ಪೊಲೀಸ್ ಠಾಣೆ ಎದುರಿನ ರಸ್ತೆ, ಮೂರುಸಾವಿರ ಮಠ ರಸ್ತೆ, ದಾಜಿಬಾನಪೇಟದಲ್ಲಿರುವ ಎಸ್.ಟಿ. ಭಂಡಾರಿ ಅಂಗಡಿವರೆಗೆ, ನೈಋತ್ಯ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ಕಚೇರಿ ರಸ್ತೆ, ನವಲಗುಂದ ರಸ್ತೆ-ಕೇಶ್ವಾಪುರ ಸರ್ಕಲ್-ಸುಳ್ಳ ರಸ್ತೆ, ಬಾದಾಮಿ ನಗರ, ಬೆಂಗೇರಿ ಅಕ್ಕಪಕ್ಕದ ರಸ್ತೆ, ದೇಸಾಯಿ ಸರ್ಕಲ್, ಕೋರ್ಟ್ ಸರ್ಕಲ್, ರೇವಣಕರ ಕಲ್ಯಾಣ ಮಂಟಪ ರಸ್ತೆ, ಸರ್ಕ್ಯೂಟ್ ಹೌಸ್‌ನಿಂದ ಕೋರ್ಟ್ ಸರ್ಕಲ್‌ವರೆಗೆ, ಬಾಳಿಗಾ ಕ್ರಾಸ್‌ನಿಂದ ಅಶೋಕ ನಗರವರೆಗೆ, ವಿಜಯನಗರ, ದೇವಾಂಗಪೇಟನಿಂದ ಗೋಪನಕೊಪ್ಪ ರಸ್ತೆಯವರೆಗಿನ ಪ್ರದೇಶಗಳು ಪಶ್ಚಿಮ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿವೆ.
ಅಳವಡಿಕೆ: ಈ ಎಲ್ಲ ಪ್ರದೇಶಗಳಲ್ಲಿ 24 ಗಂಟೆಗಳ ಕಾಲವೂ ವಾಹನ ಸಂಚಾರ ಇರುವುದರಿಂದ ಪೊಲೀಸ್ ಇಲಾಖೆ ಎಲ್ಲ ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳು, ಬ್ಯಾರಿಕೇಡ್‌ಗಳನ್ನು ಹಾಕಿದೆ. ಅಲ್ಲದೇ, 12 ಗಂಟೆಗಳ ಕಾಲ ಸಂಚಾರ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದೆ. ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡಾಗಲೂ ಸಂಚಾರಿ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಂಡಿಲ್ಲ ಎಂಬುದು ಮಾತ್ರ ನಿರ್ವಿವಾದ.
ಎಲ್ಲೆಂದರಲ್ಲೇ: ಕಿತ್ತೂರು ಚೆನ್ನಮ್ಮ ವರ್ತುಳದಿಂದ ಪಿ.ಬಿ. ರಸ್ತೆಗೆ ಹೋಗುವ ಮಾರ್ಗದ ತಿರುವಿನಲ್ಲಿ ಬರುವ ಗಣೇಶ ಹೊಟೇಲ್ ಬಳಿ ಮ್ಯಾಕ್ಸಿಕ್ಯಾಬ್‌ಗಳು ಸಾಲುಗಟ್ಟಿ ರಸ್ತೆಯ ಮೇಲೆಯೇ ನಿಂತುಕೊಂಡಿರುತ್ತವೆ. ಅಲ್ಲದೇ, ಪ್ರತಿನಿತ್ಯ ಅಲ್ಲಿ ಒಬ್ಬ ಎಎಸ್‌ಐ ಹಾಗೂ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ!
ಕೆ.ಸಿ. ವೃತ್ತದಿಂದ ಕಾರವಾರ ರಸ್ತೆಗೆ ತೆರಳುವವರು ಹಾಗೂ ಕಾರವಾರ ರಸ್ತೆಯಿಂದ ಕೆ.ಸಿ. ವೃತ್ತದ ಮುಖಾಂತರ ಜನತಾ ಬಜಾರ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳುವವರು ಈ ಗಣೇಶ ಹೊಟೇಲ್‌ನ ತಿರುವಿನ ಮಾರ್ಗವನ್ನೇ ಅನುಸರಿಸುತ್ತಾರೆ. ಈ ವೇಳೆಯಲ್ಲಿ ವಾಹನ ಸಂಚಾರವೂ ಹೆಚ್ಚಾಗಿರುತ್ತದೆ. ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ತೆರಳಲು ಸ್ವಲ್ವವೂ ವಿಳಂಬವಾದರೂ ಅನಾಹುತ ಕಟ್ಟಿಟ್ಟ ಬುತ್ತಿ. ಈ ಮಧ್ಯೆಯೇ ಮ್ಯಾಕ್ಸಿಕ್ಯಾಬ್ ವಾಹನಗಳು ಎಲ್ಲೆಂದರಲ್ಲಿ ನಿಂತುಕೊಂಡಿರುತ್ತವೆ. ಅವೆಲ್ಲವುಗಳನ್ನು ದಾಟುತ್ತ ಜನತೆ ತೆರಳಬೇಕಾದ ಆಂತಕ ಜನತೆ ಎದುರಿಸುತ್ತಿದ್ದಾರೆ.
ಇದೇ ರೀತಿ ರೇಲ್ವೆ ಸ್ಟೇಶನ್ ರಸ್ತೆ, ಗದಗ ರಸ್ತೆ, ದೇಸಾಯಿ ಸರ್ಕಲ್ ಕಡೆಗಳಲ್ಲಿ ಪ್ರಯಾಣಿಕರನ್ನು ಕೊಂಡ್ಯೊಯುವ ವಾಹನಗಳನ್ನು ನಿಲ್ಲಿಸಲಾಗಿದ್ದರೂ ಅವುಗಳ ಬಗ್ಗೆ ಸಂಚಾರ ಸಿಬ್ಬಂದಿ ಯಾವುದೇ ಕ್ರಮಕ್ಕೆ ಮುಂದಾಗದೇ ಕೇವಲ ಹೆಲ್ಮೆಟ್ ಕಾರ್ಯಾಚರಣೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಕಾಯಕಕ್ಕೆ ಮಾತ್ರ ಪಶ್ಚಿಮ ಸಂಚಾರಿ ಠಾಣೆ ಸಿಬ್ಬಂದಿ ತಮ್ಮನ್ನು ಮೀಸಲಾಗಿರಿಸಿಕೊಳ್ಳದೆ ಜನಸಾಮಾನ್ಯರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿಯೂ ನಿಗಾವಹಿಸಬೇಕಿದೆ.
- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.