ವೆಬ್ಸೈಟ್ ಉದ್ಘಾಟನೆ
ಧಾರವಾಡ: ಅಂತರ್ಜಾಲ ತಂತ್ರಜ್ಞಾನ ವ್ಯವಸ್ಥೆ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಪರಿವರ್ತನೆ ಹೊಂದುತ್ತಿದೆ. ಈ ತಂತ್ರಜ್ಞಾನವನ್ನು ಎಲ್ಲ ತರಹದ ಗ್ರಾಹಕರು, ಎಲ್ಲ ತರಹದ ವ್ಯಾಪಾರಸ್ಥರು ಇದರ ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದು ವ್ಯೆದ್ಯ ಡಾ. ಎಂ.ವಿ. ಕಾನೇಟ್ಕರ ಹೇಳಿದರು. ಸೌರ್ಹಾದ ಸಹಕಾರಿಯಲ್ಲೊಂದಾದ ಧಾರವಾಡ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಅಧ್ಯಕ್ಷ ಚಂದ್ರಕಾಂತ ಪಡಚಣ್ಣವರ ಮಾತನಾಡಿ, ಈ ರೀತಿಯ ಯೋಜನೆಗಳನ್ನು ಯುವ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಂಟರ್ನೆಟ್ನ್ನು ನಮ್ಮ ಗುರಿಯ ದಾರಿಯನ್ನಾಗಿಸಿಕೊಂಡಿದ್ದೇವೆ ಎಂದರು. ಸಂಸ್ಥೆ ಸದಸ್ಯ ವಿಜಯಾನಂದ ಶೆಟ್ಟಿ, ಪ್ರವೀಣಕುಮಾರ ಪೋಳ ಇದ್ದರು.
ಪದವೀಧರರಿಗೆ ತರಬೇತಿ
ಧಾರವಾಡ: ಕೈಗಾರಿಕೆ ಇಲಾಖೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಎಂಜಿನೀಯರಿಂಗ್ ಪದವಿ ಪಡೆದು ಹೊರಬರುತ್ತಿರುವ ಅಭ್ಯರ್ಥಿಗಳು ತಂತ್ರಜ್ಞಾನ ವೃತ್ತಿ ಕೌಶಲ್ಯ ಹೆಚ್ಚಿಸಿ ತಾಂತ್ರಿಕ ಉದ್ಯಮಕ್ಕೆ ಸೂಕ್ತವಾಗಿ ತಯಾರುಗೊಳಿಸಲು ಆರು ತಿಂಗಳ ಇಂಟರ್ನ್ಶಿಪ್ ಹಾಗೂ ತರಬೇತಿಗೆ ಮೈಸೂರಿನ ರಾಮನ್ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಜೊತೆ ವಿನೂತನ ಮಾರ್ಗದರ್ಶನ ಕಾರ್ಯಕ್ರಮ ರೂಪಿಸಿವೆ. ಆಸಕ್ತ ಅರ್ಹ ಎಂಜಿನಿಯರಿಂಗ್ ಹಾಗೂ ಇತರೆ ಪದವೀಧರರು ಹೆಚ್ಚಿನ ಮಾಹಿತಿಗೆ www.riit.com ಮೂಲಕ ಸಂಪರ್ಕಿಸಲು ತಿಳಿಸಲಾಗಿದೆ.
ಡಿ.ಇಡಿ., ಡಿ.ಪಿ.ಇಡಿ. ಅರ್ಜಿ ಆಹ್ವಾನ
ಧಾರವಾಡ: ಪ್ರಸಕ್ತ ಸಾಲಿನ ಡಿ.ಇಡಿ/ಡಿ.ಪಿ.ಇಡಿ ಕೋರ್ಸ್ಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ-ಶಿಕ್ಷಕಿಯರ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳು ದಾಖಲಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿ.ಇಡಿ. ಕೋರ್ಸ್ಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಸ್ಸಿ-ಎಸ್ಟಿ, ಪ್ರವರ್ಗ-1 ಅಂಗವಿಕಲ ಅಭ್ಯರ್ರ್ಥಿ ಗಳು ಕನಿಷ್ಠ ಶೇ. 45 ಮತ್ತು ಇತರೆ ಅಭ್ಯರ್ಥಿಗಳು ಕನಿಷ್ಠ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕು. ಡಿ.ಪಿ.ಇಡಿ. ಕೋರ್ಸ್ಗೆ ಸೇರುವ ಎಲ್ಲ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ. 50 ಅಂಕಗಳನ್ನು ಹಾಗೂ ಎಸ್ಸಿ-ಎಸ್ಟಿ, ಪ್ರವರ್ಗ-1 ಮತ್ತು ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ ಶೇ. 45 ಪಡೆದಿರಬೇಕು. ಜೂ. 6ರಿಂದ 20ರ ರವಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಮೀಸಲಾತಿ ವಿವರ, ಇತರೆ ಸೂಚನೆಗಳನ್ನು ಶಿಕ್ಷಣ ಇಲಾಖೆ ವೆಬ್ಸೈಟ್ www.schooleducation.kar.nic.in ನಲ್ಲಿ ಪ್ರಕಟಿಸಿದೆ. ಮಾಹಿತಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕಚೇರಿ ಸಂಪರ್ಕಿಸಬೇಕೆಂದು ಪ್ರಾಚಾರ್ಯ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.
ವೈದ್ಯರ ಮೇಲೆ ಕ್ರಮಕ್ಕೆ ಆಗ್ರಹ
ಧಾರವಾಡ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಧಾರವಾಡ ತಾಲೂಕಿನ ಲಕಮಾಪುರದ 6 ವರ್ಷದ ಬಾಲಕಿ ಮೇಘಾ ಹಾದಿಮನಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ತಪ್ಪಿತಸ್ಥ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಜನತಾದಳ (ಸಂಯುಕ್ತ) ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸೋಮವಾರ ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಪಕ್ಷದ ಶ್ರೀಶೈಲಗೌಡ ಕಮತರ, ಐ.ಎಂ. ಪೀರಜಾದೆ, ಸೋಮಣ್ಣ ಬೆನಕಟ್ಟಿ, ಪ್ರವೀಣ ಪಾಟೀಲ ಹಾಗೂ ಹನುಮಂತಸಾ ನಿರಂಜನ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ಪ್ರೀತಿಯಿಂದ ನೋಡದೆ ಅವರ ಬಗ್ಗೆ ತೀರಾ ಬೇಜವಾಬ್ದಾರಿತನದಿಂದ ವರ್ತಿಸುತ್ತಾರೆ. ಇದರಿಂದ ರೋಗಿಗಳು ಗುಣಮುಖವಾಗುವುದಿಲ್ಲ. ಈ ವ್ಯವಸ್ಥೆ ಬದಲಾಗಬೇಕು. ಅಲ್ಲದೇ, ಮೃತಪಟ್ಟ ಬಾಲಕಿ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿ ಕೊಲೆ
ಧಾರವಾಡ: ಇಲ್ಲಿನ ಹೊಸಯಲ್ಲಾಪುರ ರುದ್ರಭೂಮಿ ಸಮೀಪದ ಪಾಳು ಬಿದ್ದ ವಸತಿ ಶಾಲೆಯ ಆವರಣದಲ್ಲಿ ವ್ಯಕ್ತಿಯೋರ್ವನ ಕೊಲೆಯಾದ ಘಟನೆ ನಡೆದಿದೆ.
ಜುಮ್ಮಾ ಮಸಜಿದ ನಿವಾಸಿ ಹಣ್ಣು ವ್ಯಾಪಾರಿ ಇಮ್ತಿಯಾಜ್ ತಂಬೂಲಿ(30) ಎಂಬಾತನೇ ಮೃತನಾಗಿದ್ದು, ಭಾನುವಾರ ರಾತ್ರಿ ದುಷ್ಕರ್ಮಿಗಳು ಈತನ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಎಸೆದು ಹೋಗಿದ್ದಾರೆ. ಕೊಲೆ ಆರೋಪಿ ಸ್ವಯಂ ಪ್ರೇರಣೆಯಿಂದ ಪೊಲೀಸರಿಗೆ ಶರಣಾಗಿದ್ದಾನೆಂದು ತಿಳಿದು ಬಂದಿದೆ. ಆದರೆ, ಈ ಬಗ್ಗೆ ಪೊಲೀಸರು ಹೆಚ್ಚಿನ ವಿವರ ನೀಡಿಲ್ಲ. ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತೋಟಗಾರಿಕೆ: ವಿವಿಧ ಸಸಿಗಳು ಮಾರಾಟಕ್ಕೆ ಲಭ್ಯ
ಧಾರವಾಡ: ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ವಿವಿಧ ಸಸಿಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಧಾರವಾಡ ಸ್ಟೇಶನ್ ರಸೆಯಲ್ಲಿನ ಜಿಲ್ಲಾ ನರ್ಸರಿಯಲ್ಲಿ ಆಪೂಸ್ ಮಾವು, ಅಲಂಕಾರಿಕ ಗಿಡಗಳು, ಕಣವಿ ಹೊನ್ನಾಪುರದ ತೋಟಗಾರಿಕಾ ಕ್ಷೇತ್ರದಲ್ಲಿ ತೆಂಗು, ನಿಂಬೆ, ದಾಸ್ತಿಕೊಪ್ಪದಲ್ಲಿ ತೆಂಗು, ದುಮ್ಮವಾಡದಲ್ಲಿ ಆಪೂಸ ಮಾವು, ಚಿಕ್ಕು, ಪೇರಲ ಹಾಗೂ ಜಿಗಳೂರು ತೋಟಗಾರಿಕಾ ಕ್ಷೇತ್ರದಲ್ಲಿ ಚಿಕ್ಕು ಸಸಿಗಳು ಲಭ್ಯವಿರುತ್ತವೆ. ಆಸಕ್ತ ರೈತರು, ಸಾರ್ವಜನಿಕರು ನಿಗದಿತ ದರ ಪಾವತಿಸಿ ಸಸಿಗಳನ್ನು ಖರೀದಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

