ಧಾರವಾಡ

ನೆಟ್ ಪರೀಕ್ಷೆ: ಅಭ್ಯರ್ಥಿಗಳ ಪರದಾಟ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 30
ಕರ್ನಾಟಕ ವಿಶ್ವವಿದ್ಯಾಲಯ ನಗರದ ವಿವಿಧ ಕೇಂದ್ರದಲ್ಲಿ ಭಾನುವಾರ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್)ಯಲ್ಲಿ ಪ್ರವೇಶ ಪತ್ರದಲ್ಲಿ ಉಂಟಾದ ಗೊಂದಲದಿಂದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆಯಿತು.
ಅಭ್ಯರ್ಥಿಯ ಹೆಸರು ಹಾಗೂ ಸೀಟ್ ನಂಬರ್ ಒಂದು ಕೇಂದ್ರದಲ್ಲಿದ್ದರೆ, ಪ್ರವೇಶ ಪತ್ರದಲ್ಲಿ ಇನ್ನೊಂದು ಕೇಂದ್ರದ ಹೆಸರು ನಮೂದಾಗಿತ್ತು. ಪರೀಕ್ಷೆಗೆ ಹಾಜರಾದ 10,530 ಅಭ್ಯರ್ಥಿಗಳ ಪೈಕಿ ಹಲವರು ಈ ಕಾರಣದಿಂದ ಪರದಾಡಬೇಕಾಯಿತು. ಹೂವಿನ ಹಡಗಲಿಯ ವೀರಭದ್ರಪ್ಪ ಹಾಗೂ ಗದಗನ ಶ್ವೇತಾ ಎಂಬುವರ ಪ್ರವೇಶ ಪತ್ರದಲ್ಲಿ ಕಿಟಲ್ ಕಾಲೇಜು ತಮ್ಮ ಪರೀಕ್ಷಾ ಕೇಂದ್ರ ಎಂದಿತ್ತು. ಅಂತೆಯೇ, ಅಭ್ಯರ್ಥಿಗಳು ಸರಿಯಾಗಿ ಬೆಳಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಬಂದರೆ, ಅಲ್ಲಿ ಅವರ ಹೆಸರು ಹಾಗೂ ನಂಬರ್ ಇರಲಿಲ್ಲ. ಬದಲಾಗಿ ಅವರ ಹೆಸರು ಹಾಗೂ ನಂಬರ್ ಕರ್ನಾಟಕ ಕಾಲೇಜಿನಲ್ಲಿತ್ತು. ಪರೀಕ್ಷಾ ಮೇಲ್ವಿಚಾರಕರಿಗೆ ಈ ಕುರಿತು ಪ್ರಶ್ನಿಸಿದರೆ ಈ ಕುರಿತು ವಿಶ್ವವಿದ್ಯಾಲಯಕ್ಕೆ ಕೇಳಬೇಕೆಂದು ತಿಳಿಸಿದ್ದಾರೆ. ತಮ್ಮ ನಂಬರ್ ಕರ್ನಾಟಕ ಕಾಲೇಜಿನಲ್ಲಿದೆ ಎಂದು ಗೊತ್ತಾಗುವಷ್ಟರಲ್ಲಿ ಸಮಯ 10.30 ಆಗಿತ್ತು. ಅಲ್ಲಿಂದ ವಿಶ್ವವಿದ್ಯಾಲಯಕ್ಕೆ ಹೋಗಿ ಸಂಬಂಧಿಸಿದ ಅಧಿಕಾರಿ ಡಾ. ಜಿ.ಎಂ. ನಾಗಯ್ಯ ಅವರನ್ನು ಅಭ್ಯರ್ಥಿಗಳು ಭೇಟಿಯಾಗಿ ಪ್ರಶ್ನಿಸಿದಾಗ, ಎಲ್ಲ ವಿದ್ಯಾರ್ಥಿಗಳ ಹೆಸರು, ಪ್ರವೇಶ ನಂಬರನ್ನು ವೆಬ್‌ಸೈಟ್‌ನಲ್ಲಿ ಬಿಡಲಾಗಿದೆ. ನೀವು ಕಳೆದ ವರ್ಷದ ಪ್ರವೇಶ ಪತ್ರ ತಂದಿದ್ದೀರಿ. ಈಗಾಗಲೇ ಪರೀಕ್ಷೆ ಸಮಯ ಮುಗಿದಿದ್ದು, ಏನೂ ಮಾಡಲಾಗುವುದಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡರು.
ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದಲೇ ಡೌನಲೋಡ್‌ಮಾಡಿಕೊಂಡ ಪ್ರವೇಶ ಪತ್ರವಿದು. ಯಾರೋ ಮಾಡಿದ ತಪ್ಪಿಗೆ ನಾವು ಪರೀಕ್ಷೆಯಿಂದ ವಂಚಿತವಾಗಬೇಕಾಯಿತು. ನಮಗೆ ನ್ಯಾಯ ಕೊಡಿಸಿ ಎಂದು ಕುಲಸಚಿವ ಡಾ. ಜಿ.ಬಿ. ನಂದನ ಅವರಿಗೆ ಅಭ್ಯರ್ಥಿಗಳು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೇ ರೀತಿ ಹತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಗೊಂದಲವಾಗಿದ್ದು, ವಿಶ್ವವಿದ್ಯಾಲಯದ ತಪ್ಪಿನಿಂದ ಪರೀಕ್ಷೆಯಿಂದ ವಂಚಿತವಾಗಬೇಕಾಯಿತು ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.