ಧಾರವಾಡ

ಮಹಿಳೆ ತಾನಾಗೇ ಸಬಲೀಕರಣವಾಗಲಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 24
ಮಹಿಳೆ ಅಭಿವೃದ್ಧಿ ಮತ್ತು ಸಬಲೀಕರಣದ ಬಗ್ಗೆ ಪುರುಷರು ವಿಚಾರ ಮಾಡುವುದೂ ಇಲ್ಲ ಮತ್ತು ಮಹಿಳೆಯರು ಅಂತಹ ಅಪೇಕ್ಷೆ ಇರಿಸಿಕೊಳ್ಳುವುದು ಸೂಕ್ತವಲ್ಲ. ಮಹಿಳೆ ತಾನಾಗಿಯೇ ಸಬಲೀಕರಣಗೊಳ್ಳಬೇಕು. ಈ ನಿಟ್ಟಿನಲ್ಲಿ ಅವಳ ಪ್ರಯತ್ನ ನಿರಂತರವಾಗಿರಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದ ನಿವೃತ್ತ ಡೀನ್ ರಮಾ ನಾಯಕ್ ಹೇಳಿದರು.
ಶನಿವಾರ, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಮತ್ತು ಕೆಸಿಸಿಐ ಮಹಿಳಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಯಶಸ್ವಿ ಮಹಿಳಾ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಧನೆಯಲ್ಲಿ ತೃಪ್ತಿ ಎನ್ನುವುದು ಕಾಣಿಸಿಕೊಂಡರೆ ಅಲ್ಲಿಗೆ ಸಾಧನೆ ನಿಲ್ಲುತ್ತದೆ. ಉದ್ಯಮಿಯಾದವರಿಗೆ ಇಂತಹ ತೃಪ್ತ ಮನೋಭಾವ ಸರಿಯಲ್ಲ. ಉದ್ದಿಮೆ ಬೆಳೆಯಬೇಕು ಎಂಬ ಮನೋಭಾವ ನಮ್ಮಲ್ಲಿದ್ದರೆ ಅದಕ್ಕೆ ತಕ್ಕಂತೆ ಛಲ ಮತ್ತು ಎದೆಗಾರಿಕೆಯನ್ನು ಮಹಿಳಾ ಉದ್ಯಮಿಗಳು ಬೆಳೆಸಿಕೊಳ್ಳಬೇಕು. ಓರ್ವ ಮಹಿಳಾ ಉದ್ಯಮಿ ಯಶಸ್ವಿಯಾಗಲು ಸಂಸಾರದಲ್ಲಿನ ಸಹಕಾರವೂ ಮುಖ್ಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕೆಸಿಸಿಐ ಮಹಿಳಾ ಘಟಕ ಸಹ ಅಧ್ಯಕ್ಷೆ ದೇವಕಿ ಯೋಗಾನಂದ, ಆರ್ಥಿಕ ಸ್ವಾವಲಂಬನೆಯೇ ಮಹಿಳಾ ಸ್ವಾತಂತ್ರ್ಯಕ್ಕೆ ದಾರಿ. ಈ ನಿಟ್ಟಿನಲ್ಲಿ ಮಹಿಳೆಯರು ಸ್ವಂತ ಉದ್ಯೋಗ ಅಥವಾ ಉದ್ಯೋಗದತ್ತ ಗಮನ ಹರಿಸಿ ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಸಿಸಿಐ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ಸ್ವಯಂ ಉದ್ಯೋಗ ಮತ್ತು ಉದ್ದಿಮೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ 12 ಯಶಸ್ವಿ ಮಹಿಳೆಯರಿಗೆ ಕೆಸಿಸಿಐನಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶೋಷಣೆಯಿಂದ ಹೊರಬರುವ ನಿಟ್ಟಿನಲ್ಲಿ ರಷ್ಯಾದಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಈಗ ವಿಶ್ವಾದ್ಯಂತ ಸಂಯುಕ್ತ ರಾಷ್ಟ್ರ ಸಂಘದಿಂದ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಪಿ. ಜವಳಿ, ಮಹಿಳಾ ಘಟಕದ ಅಧ್ಯಕ್ಷೆ ರತಿ ಶ್ರೀನಿವಾಸನ್, ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ಕೆಸಿಸಿಐ ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ್, ಸಿ.ಎನ್. ಕರಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಉದ್ದಿಮೆ ಬೆಳೆಯಬೇಕೆಂಬ ಮನೋಭಾವ ನಮ್ಮಲ್ಲಿದ್ದರೆ ಅದಕ್ಕೆ ತಕ್ಕಂತೆ ಛಲ, ಎದೆಗಾರಿಕೆಯನ್ನು ಮಹಿಳಾ ಉದ್ಯಮಿಗಳು ಬೆಳೆಸಿಕೊಳ್ಳಬೇಕು. ಮಹಿಳಾ ಉದ್ಯಮಿ ಯಶಸ್ವಿಯಾಗಲು ಸಂಸಾರದಲ್ಲಿನ ಸಹಕಾರವೂ ಮುಖ್ಯ.
- ರಮಾ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.