ಧಾರವಾಡ

ಪ್ರಾದೇಶಿಕ ವಿಜ್ಞಾನ ದಾಹ ತೀರಿಸುತ್ತಿರುವ ಕೇಂದ್ರ

Published On :

ಧಾರವಾಡ: ಅನೇಕ ನಿರೀಕ್ಷೆಗಳನ್ನಿಟ್ಟು ಒಂದು ವರ್ಷದ ಹಿಂದೆ ಶುರುವಾಗಿದ್ದ ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರ ಉತ್ತರ ಕರ್ನಾಟಕ ಭಾಗದ ಶಾಲಾ ಮಕ್ಕಳ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ವಿಜ್ಞಾನದ ದಾಹ ತೀರಿಸುವಲ್ಲಿ ಯಶಸ್ವಿಯಾಗಿದೆ.
2012ರ ಫೆಬ್ರುವರಿ ಅಂತ್ಯದಲ್ಲಿ ಆರಂಭವಾದ ಈ ಕೇಂದ್ರಕ್ಕೆ ಒಂದು ವರ್ಷದಲ್ಲಿ 74,104 ಜನ ಭೇಟಿ ನೀಡಿ ಕೇಂದ್ರದ ಪ್ರಯೋಜನ ಪಡೆದಿದ್ದಾರೆ. ಈ ಪೈಕಿ 32,706 ಸಾರ್ವಜನಿಕರು, 10,645 ಮಕ್ಕಳು-ವಿದ್ಯಾರ್ಥಿಗಳು ಹಾಗೂ 30,753 ಸಂಘಟನಾತ್ಮಕ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ಇನ್ನು ಕೇಂದ್ರದಲ್ಲಿನ ಪ್ರಮುಖ ಆಕರ್ಷಣೆಗಳಾದ ತ್ರೀ ಡಿ ಪ್ರದರ್ಶನಕ್ಕೆ 42,004 ಜನರು ಭೇಟಿ ನೀಡಿದ್ದು, 14,111 ಸಾರ್ವಜನಿಕರು, 6,250 ಮಕ್ಕಳು-ವಿದ್ಯಾರ್ಥಿಗಳು, 22043 ಸಂಘಟನಾತ್ಮಕ ವಿದ್ಯಾರ್ಥಿಗಳು ಪ್ರಯೋಜನೆ ಪಡೆದಿದ್ದಾರೆ.
ತಾರಾ ಮಂಡಲಕ್ಕೆ 21,543 ಜನ ಭೇಟಿ ನೀಡಿದ್ದು, 5037 ಸಾರ್ವಜನಿಕರು, 2,203 ವಿದ್ಯಾರ್ಥಿಗಳು, 14,213 ಸಂಘಟನಾತ್ಮಕ ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ. ಅಲ್ಲದೇ, ಒಟ್ಟು 43,060 ಜನರು ಅಲ್ಲಿನ ವಿಜ್ಞಾನ ಪ್ರದರ್ಶನ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದು, 9,661 ಸಾರ್ವಜನಿಕರು, 5,234 ಮಕ್ಕಳ-ವಿದ್ಯಾರ್ಥಿಗಳು ಹಾಗೂ 28,165 ಸಂಘಟನಾತ್ಮಕ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಕೇಂದ್ರದ ನಿರ್ದೇಶಕ ಡಾ. ಯು.ಎಸ್. ರಾಯ್ಕರ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಅಂದಾಜು ರು. 9 ಕೋಟಿ ವೆಚ್ಚದಲ್ಲಿ ಕವಿವಿ ಆರವರಣದಲ್ಲಿನ 12 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ಈ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಾಲ್ಕು ಗ್ಯಾಲರಿಗಳಿದ್ದು, ವಿಜ್ಞಾನ ಉದ್ಯಾನವನ ಸಹ ಹೊಂದಿದೆ. ಕೇಂದ್ರದ ಒಳ ಪ್ರವೇಶಕ್ಕೆ ನಿರ್ದಿಷ್ಟ ಶುಲ್ಕ ಭರಿಸಬೇಕಿದ್ದು, ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೆಕ ಪ್ರವೇಶ ಶುಲ್ಕ ಇದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗಿದ್ದರೂ ಈ ಕೇಂದ್ರ ಸ್ವತಂತ್ರ ಸಂಸ್ಥೆಯಾಗಿದೆ. ಕೇಂದ್ರ ಭಾರತದ ಐದು ಸಾವಿರ ವರ್ಷಗಳ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತಿಹಾಸ ಮತ್ತು ಸಾಧನೆಗಳನ್ನು ಸ್ತಬ್ದ ಚಿತ್ರಗಳ ಮೂಲಕ ತೆರೆಟ್ಟಿದ್ದು, ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪರಂಪರೆ ಗ್ಯಾಲರಿ, ಬಯೋ ಮಶಿನ್ ಗ್ಯಾಲರಿ, ವಿನೋದ ವಿಜ್ಞಾನ ಗ್ಯಾಲರಿ ಹಾಗೂ ತಾತ್ಕಾಲಿಕ ಪ್ರದರ್ಶನ ಗ್ಯಾಲರಿಗಳೆಂಬ ನಾಲ್ಕು ಪ್ರಮುಖ ಗ್ಯಾಲರಿಗಳಿವೆ. ವಿನೋದ ವಿಜ್ಞಾನ ಗ್ಯಾಲರಿಯಲ್ಲಿ ಒಂದು ತಾರಾ ಮಂಡಲ ಹಾಗೂ ತ್ರೀಡಿ ತಂತ್ರಜ್ಞಾನ ಅಳವಡಿಸಲಾಗಿದ್ದು, ಪ್ರಮುಖವಾಗಿ ಇಲ್ಲಿ ಮಕ್ಕಳಿಗೆ ಮನರಂಜನೆಗೆ ಅವಕಾಶ ನೀಡಲಾಗಿದೆ.
ಈ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಿಂಧೂ ನದಿ ಕಣಿವೆಯ ನಗರ ಯೋಜನೆ ಹಾಗೂ ಒಳಚರಂಡಿ ವ್ಯವಸ್ಥೆ, ಗುಪ್ತರ ಕಾಲದ ಗಣಿಗಾರಿಕೆ ತಂತ್ರಜ್ಞಾನ, ಆಧುನಿಕ ತಂತ್ರಜ್ಞಾನವನ್ನು ನಾಚಿಸುವ ಬಿದರಿ ಕಲೆ, ಪ್ರಾಚೀನ ಶಿಲ್ಪಕಲಾ ವೈಭವ ಮತ್ತು ಕಟ್ಟಡ ನಿರ್ಮಾಣ ತಂತ್ರಜ್ಞಾನ ಹೀಗೆ ಹತ್ತಾರು ಸಂಗತಿಗಳ ಬಗ್ಗೆ ಸಾರ್ವಜನಿಕರಿಗೆ ಇಲ್ಲಿ ಹೆಚ್ಚಿನ ಮಾಹಿತಿಗಳು ದೊರಕುತ್ತಿದೆ. ಹೀಗಾಗಿ ಅನೇಕರು ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಹೆಚ್ಚಿನ ಮಾಹಿತಿ ಪಡೆಯುತ್ತಿರುವುದು ಇಲ್ಲಿನ ವಿಶೇಷ.
ಇನ್ನು ತಾರಾ ಮಂಡಲದಲ್ಲಿ ಸ್ಟಾರ್ ಶೋ ಸಹ ನಡೆಯುತ್ತದೆ. ವಿಶಾಲವಾದ ವಿಜ್ಞಾನ ಉದ್ಯಾನವನ ಹಾಗೂ ಕ್ಯಾಂಟಿನ್ ವ್ಯವಸ್ಥೆಯೂ ಇಲ್ಲಿದೆ. ಕೇಂದ್ರದ ಪ್ರತಿಯೊಂದು ಕೌಂಟರ್ನಲ್ಲಿ ಟಿವಿ ಅಳವಡಿಸಿಲಾಗಿದ್ದು, ವಿವಿಧ ವಿಷಯಗಳ ಬಗ್ಗೆ ಆಯ್ದ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿಜ್ಞಾನ ಹಾಗೂ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.
ಈ ಕೇಂದ್ರದಲ್ಲಿ ನಿರಂತರವಾಗಿ ವಿಶ್ವ ಆರೋಗ್ಯ ದಿನಾಚರಣೆ, ಕಂಪ್ಯೂಟರ್ ಕುರಿತು ಜಾಗೃತಿ, ಅಂತಾರಾಷ್ಟ್ರೀಯ ತಂತ್ರಜ್ಞಾನ ದಿನ, ಜನಸಂಖ್ಯಾ ನಿಯಂತ್ರಣದ ಕುರಿತು ವಿಶೇಷ ಉಪನ್ಯಾಸ, ವಿಶ್ವ ವಿಜ್ಞಾನ ದಿನ ಹಾಗೂ ರಾಜ್ಯ ಮಟ್ಟದ ವಿಜ್ಞಾನ ಬರಹಗಾರರ ಕಮ್ಮಟ ಹೀಗೆ ಅನೇಕ ಕಾರ್ಯಕ್ರಮಗಳು ಈ ಕೇಂದ್ರದಲ್ಲಿ ನಡೆದಿವೆ. ಇಂತಹ ಕಾರ್ಯಕ್ರಮಗಳು ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮತ್ತಷ್ಟು ವಿಶೇಷ ಅನುಭವ ನೀಡುತ್ತಿದ್ದು, ಸಾಕಷ್ಟು ಜನತೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

-ಕಲ್ಮೇಶ ಪಟ್ಟಣದವರ

ಉ-ಕದಲ್ಲಿ ಪ್ರಥಮ
ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತಿನಡಿ ದೇಶದ ವಿವಿಧ ರಾಜ್ಯಗಳಲ್ಲಿ 25 ವಿಜ್ಞಾನ ವಸ್ತು ಸಂಗ್ರಹಾಲಯಗಳು ಸ್ಥಾಪನೆಯಾಗಿವೆ. ಪರಿಷತ್ತು ಜಗತ್ತಿನಲ್ಲಿಯೇ ದೊಡ್ಡ ಸಂಪರ್ಕ ಜಾಲ ಹೊಂದಿದೆ. ಈ ಎಲ್ಲ ವಿಜ್ಞಾನ ಕೇಂದ್ರಗಳಲ್ಲಿ ಆಯಾ ರಾಜ್ಯಗಳ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆ ಹಿನ್ನೆಲೆಯಲ್ಲಿ ವಸ್ತು ಸಂಗ್ರಹಾಲಯಗಳನ್ನು ತರಹೇವಾರಿಯಾಗಿ ಸಿದ್ಧಪಡಿಸಲಾಗಿದೆ. ಧಾರವಾಡದ ಈ ಪ್ರಾದೇಶಿಕ ಕೇಂದ್ರ ಉತ್ತರ ಕರ್ನಾಟಕದಲ್ಲಿ ಎರಡನೆಯದ್ದಾಗಿದ್ದು, ರಾಜ್ಯದಲ್ಲಿ ನಾಲ್ಕನೆಯದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.