ಧಾರವಾಡ

ಡಿ.14ರಿಂದ ರಣಜಿ ಕ್ರಿಕೆಟ್ ಪಂದ್ಯ

Published On :

ಹುಬ್ಬಳ್ಳಿ: ಇಲ್ಲಿಯ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಡಿ. 14ರಿಂದ 17ರ ವರೆಗೆ ಕರ್ನಾಟಕ ಮತ್ತು ಪಂಜಾಬ್ ತಂಡಗಳ ಮಧ್ಯೆ ರಣಜಿ ಕ್ರಿಕೆಟ್ ಪಂದ್ಯ ನಡೆಯಲಿದೆ.
ಅಂತಾರಾಷ್ಟ್ರೀಯ ಮಟ್ಟದ ಅನಧಿಕೃತ ಟೆಸ್ಟ್ ಪಂದ್ಯ ನಡೆದ ಎರಡೇ ತಿಂಗಳಲ್ಲಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ಮತ್ತೊಂದು ರಣಜಿ ಪಂದ್ಯ ನಡೆಯಲಿರುವುದು ಇಲ್ಲಿಯ ಕ್ರಿಕೆಟ್ ಪ್ರಿಯರಿಗೆ ದೀಪಾವಳಿಯ ಬಂಪರ್ ಕೊಡುಗೆ ನೀಡಿದಂತಾಗಿದೆ.
ಕಳೆದ ಅಕ್ಟೋಬರ್ ಎರಡನೇ ವಾರದಲ್ಲಿ (ಅ.9ರಿಂದ ಅ. 12) ಭಾರತ-ವೆಸ್ಟ್‌ಇಂಡೀಸ್ ಎ ತಂಡಗಳ ಮಧ್ಯೆ ಅನಧಿಕೃತ ಟೆಸ್ಟ್‌ನ ಮೂರನೇ ಹಾಗೂ ಅಂತಿಮ ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಎ ತಂಡದ ನಾಯಕ ಚೇತನ್ ಪೂಜಾರಿ ಮೂರು ಶತಕ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದರು.
ಭಾರತ ತಂಡದ ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಗೌತಮ್ ಗಂಭೀರ್ ಭಾರತ ಎ ತಂಡ ಪ್ರತಿನಿಧಿಸಿ ಹುಬ್ಬಳ್ಳಿಯಲ್ಲಿ ಆಡುವ ಮೂಲಕ ಹುಬ್ಬಳ್ಳಿ ಹಾಗೂ ಸುತ್ತಲಿನ ಕ್ರಿಕೆಟ್ ಪ್ರಿಯರು ತಮ್ಮ ನೆಚ್ಚಿನ ಆಟಗಾರರನ್ನು ನೇರವಾಗಿ ವೀಕ್ಷಿಸುವಂತಾಗಿತ್ತು. ಈ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 54 ರನ್‌ಗಳ ಜಯದ ಜೊತೆಗೆ ಇನ್ನಿಂಗ್ಸ್ ಜಯವನ್ನೂ ಪಡೆದಿತ್ತು. ಆ ಮೂಲಕ ಹುಬ್ಬಳ್ಳಿಯ ಕರ್ನಾಟಕ ಕ್ರಿಕೆಟ್ ಅಕಾಡೆಮಿ ಮೈದಾನ ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು.
ಇನ್ನೂ ಕಳೆದ 2012ರ ಡಿ. 22ರಿಂದ 25ರ ವರೆಗೆ ಇದೇ ಮೈದಾನದಲ್ಲಿ ಕರ್ನಾಟಕ ಹಾಗೂ ಹರ್ಯಾಣಾ ತಂಡಗಳ ಮಧ್ಯೆ ಮೊದಲ ರಣಜಿ ಪಂದ್ಯ ನಡೆದಿತ್ತು. ರಣಜಿ ಪಂದ್ಯ ನಡೆದ ಒಂದು ವರ್ಷದೊಳಗೆ ಮತ್ತೊಂದು ರಣಜಿ ಪಂದ್ಯ ನಡೆಸಲು ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನ ಸಿದ್ಧತೆಯಲ್ಲಿ ತೊಡಗಿದೆ.
ಭಾರತ ಹಾಗೂ ವೆಸ್ಟ್‌ಇಂಡೀಸ್ ಎ ತಂಡಗಳ ಮಧ್ಯೆ ಅನಧಿಕೃತ ಟೆಸ್ಟ್ ಪಂದ್ಯ ನಡೆದ ಎರಡೇ ತಿಂಗಳ ಅಂತರದಲ್ಲಿ ರಣಜಿ ಪಂದ್ಯ ನಡೆಯಲಿದೆ. ಡಿ. 14ರಿಂದ ನಡೆಯಲಿರುವ ಕರ್ನಾಟಕ, ಪಂಜಾಬ್ ತಂಡಗಳ ಮಧ್ಯದ ರಣಜಿ ಕ್ರಿಕೆಟ್ ಪಂದ್ಯಕ್ಕೆ ಇನ್ನೂ ಒಂದು ತಿಂಗಳಿಗೂ ಹೆಚ್ಚಿನ ಕಾಲಾವಕಾಶ ಇರುವುದರಿಂದ ಮೈದಾನದಲ್ಲಿ ಪೂರ್ವ ಸಿದ್ಧತೆ ನಡೆಸಲು ಸಾಕಷ್ಟು ಕಾಲಾವಕಾಶ ದೊರೆತಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.