ಧಾರವಾಡ

ಡಾ. ಹೆಗ್ಗಡೆ ಮೇಲೆ ಆರೋಪ: ಖಂಡನೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 17
ಬೆಳ್ತಂಗಡಿಯ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕುಟುಂಬವನ್ನು ವ್ಯವಸ್ಥಿತವಾಗಿ ಥಳಕು ಹಾಕುತ್ತಿರುವುದು ಖಂಡನೀಯ ಎಂದು ಧಾರವಾಡದ ಬುದ್ಧಿಜೀವಿಗಳು ಅಭಿಪ್ರಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ವಿದ್ವಾಂಸ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ, ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಸಾಹಿತಿ ಮೋಹನ ನಾಗಮ್ಮನವರ, ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರಡ್ಡಿ, ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರು, ಸರ್ವಧರ್ಮ ಸ್ಥಳ ಧರ್ಮಸ್ಥಳ. ಅಲ್ಲಿನ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿರುವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ವ್ಯವಸ್ಥಿತ ಸಂಚು ಹೂಡಿ ಸೌಜನ್ಯಾ ಕೊಲೆ ಪ್ರಕರಣವನ್ನು ಒಂದು ವರ್ಷದ ಬಳಿಕ ಮತ್ತೆ ಕೆದಕಲಾಗಿದೆ ಎಂದು ಹೇಳಿದರು.
ಆಧಾರ ರಹಿತ ಆರೋಪ ಇದಾಗಿದ್ದು, ಈ ಕೊಲೆ ಸಂದರ್ಭದಲ್ಲಿ ಹೆಗ್ಗಡೆ ಅವರ ತಮ್ಮನ ಮಗ ಅಮೆರಿಕದಲ್ಲಿದ್ದ ಎಂಬುದಕ್ಕೆ ಸಾಕ್ಷಿ ಸಹ ತೋರಿಸಲಾಗಿದೆ. ಸೌಜನ್ಯಾ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ನಮಗೂ ಬೇಸರ ಮೂಡಿಸಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದೇ ನಮ್ಮೆಲ್ಲರ ಅಭಿಲಾಷೆ. ಆದರೆ, ಸುಖಾಸುಮ್ಮನೆ ಹೆಗ್ಗಡೆ ಅವರ ಮನಸ್ಸಿಗೆ ನೋವುಂಟಾಗುವ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭ ಸಮಾಜ ಸೇವಕ ಬಿ.ಎಲ್. ಪಾಟೀಲ ಮಾತನಾಡಿ, ನಾವ್ಯಾರು ಡಾ. ವೀರೇಂದ್ರೆ ಹೆಗ್ಗಡೆ ಅವರನ್ನು ಸಮರ್ಥಿಸಿಕೊಳ್ಳಲು ಇಲ್ಲಿ ಸೇರಿಲ್ಲ. ತಮ್ಮ ತಪ್ಪಿಲ್ಲ ಎಂಬುದನ್ನು ಅವರೇ ಸಮರ್ಥಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ತಪ್ಪು ಮಾಡಿದರೆ ಅವರನ್ನೂ ಸಹ ನಮ್ಮ ಕಾನೂನು ಬಿಟ್ಟಿಲ್ಲ. ಈ ಸಂದರ್ಭದಲ್ಲಿ ತಪ್ಪು ಮಾಡಿದವರಿಗೆ ತನಿಖೆ ಮೂಲಕ ಶಿಕ್ಷೆ ಆಗುತ್ತದೆ. ಆದರೆ, ಮಾಧ್ಯಮಗಳು ತೀವ್ರ ಚುರುಕಾಗಿದ್ದು, ಈ ರೀತಿ ಸೇವಾ ಕ್ಷೇತ್ರದ ಗೌರವ ಕಡಿಮೆ ಆಗುವ ರೀತಿಯಲ್ಲಿ ಅತಿ ರಂಜನೆಯಿಂದ ಸುದ್ದಿ ಮಾಡುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಚಾರ್ಯ ಶಶಿಧರ ತೋಡ್ಕರ, ಡಾ. ದಿಲೀಪ ದೇಶಪಾಂಡೆ, ಶಿವಶಂಕರ ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.