ಗಣಿ ಪರವಾನಗಿ ರದ್ದುಮಾಡಿದರೆ ಸಾಲದು, ದಂಡ ವಸೂಲಿ ಮಾಡಲಿ
ಧಾರವಾಡ: ಗಂಭೀರ ಅಪರಾಧ ಎಸಗಿರುವ ಎ, ಬಿ, ಸಿ ವಿಭಾಗದ ಗಣಿಗಳ ವಿರುದ್ಧ ತುಸು ಮಟ್ಟದ ಕ್ರಮ ತೆಗೆದುಕೊಳ್ಳುವುದಕ್ಕಿಂತ ಕಠಿಣ ಕ್ರಮ ಜರುಗಿಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ ವಿಭಾಗದ 51 ಗಣಿ ಕಂಪನಿ ಪರವಾನಗಿ ರದ್ದುಗೊಳಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ರಮಕ್ಕೆ ಸ್ವಾಗತ. ಆದರೆ, ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಗಣಿ ಮಾಲೀಕರಿಂದ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ವೆಚ್ಚವನ್ನು ವಸೂಲಿ ಮಾಡಬೇಕಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸುಪ್ರೀಂ ಕೋರ್ಟ್ ಈ ಗಣಿ ಮಾಲೀಕರಿಂದ ಬಾಕಿ ಇರುವ ಬಾಡಿಗೆ, ರಾಯಲ್ಟಿ, ದಂಡ, ಅರಣ್ಯ ಅಭಿವೃದ್ಧಿ ಕರ ಸೇರಿದಂತೆ ಸರ್ಕಾರಕ್ಕೆ ಬರಬೇಕಿರುವ ಎಲ್ಲ ಹಣ ವಸೂಲಿ ಮಾಡುವಂತೆ ನಿರ್ದೇಶನ ನೀಡಿತ್ತು. ಈ ಎಲ್ಲವುಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಿ ವಸೂಲಿ ಮಾಡಬೇಕೆಂದು ಹಿರೇಮಠ ಸರ್ಕಾರಕ್ಕೆ ಒತ್ತಾಯಿಸಿದರು. ಈಗ ರದ್ದುಗೊಳಿಸಲಾಗಿರುವ 51 ಗಣಿ ಕಂಪನಿಗಳ ಲೀಜ್ನ್ನು ಹರಾಜಿಗಿಡದೆ ಕಾಯಂ ಆಗಿ ಸ್ಥಗಿತಗೊಳಿಸಬೇಕು. ಕೆಲವು ಎ ಮತ್ತು ಬಿ ವಿಭಾಗದ ಗಣಿ ಮಾಲೀಕರು ಗಂಭೀರ ಅಪರಾಧಗಳಲ್ಲಿ ತೊಡಗಿದ್ದು ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಅಕ್ರಮವಾಗಿ ಸಂಪಾದಿಸಿದ ಹಣವನ್ನು ವಸೂಲಿ ಮಾಡಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸಹ ದಾಖಲಿಬೇಕು. ಈ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವರದಿಯನುಸಾರ ಗಣಿ ಹಗರಣದಲ್ಲಿರುವ ಎಲ್ಲ ಹಿರಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದರು. ಗಣಿ ಹಗರಣದಲ್ಲಿ ತಾವು ಸಂಭಾವಿತರೆಂದು ತೋರಿಸಿಕೊಳ್ಳುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಇಲಾಖೆ ಸಚಿವ ಸಂತೋಷ್ ಲಾಡ್ ಸಹ ತಪ್ಪು ಮಾಡಿದ್ದಾರೆ. ಇದಲ್ಲದೇ, ಪ್ರಮುಖ ರಾಜಕೀಯ ಮುಖಂಡರಾದ ವಿ. ಸೋಮಣ್ಣ, ದೇವೇಗೌಡರ ಪುತ್ರ ಡಾ. ರಮೇಶ, ಅನಿಲ್ ಲಾಡ್, ಸಂತೋಷ್ ಲಾಡ್, ಡಿ.ಕೆ. ಸುರೇಶ ಇವರೆಲ್ಲ ಅಕ್ರಮ ಗಣಿಗಾರಿಕೆಯಲ್ಲಿ ಪಾಲುಗಾರರಿದ್ದು, ಇಷ್ಟರಲ್ಲೇ ದಾಖಲೆ ಸಹಿತ ಇವರ ನಿಜಬಣ್ಣ ಸಹ ಬಯಲು ಮಾಡುತ್ತೇನೆಂದು ಪ್ರತಿಪಾದಿಸಿದರು.
ಚಂದ್ರಶೇಖರಯ್ಯ ಹಿರೇಮಠ
ಹುಬ್ಬಳ್ಳಿ: ಗಣೇಶಪೇಠ ಕುಲಕರ್ಣಿ ಹಕ್ಕಲ ನಿವಾಸಿ ಲಿಂಗಾಯತ ಸಮಾಜದ ಪ್ರಮುಖ ಚಂದ್ರಶೇಖರಯ್ಯ ಶಿವಯ್ಯ ಹಿರೇಮಠ (62) ಶನಿವಾರ ನಿಧನರಾದರು. ಮೃತರು ಪತ್ನಿ, ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನಗಲಿದ್ದಾರೆ.
ಉಣಕಲ್ ಕೆರೆಗೆ ಕೋಡಿ ಬಿತ್ತು
ಹುಬ್ಬಳ್ಳಿ: ವಾರದಿಂದ ಸುರಿಯುತ್ತಿರುವ ಹುಬ್ಬಿ ಮಳೆಗೆ ಮೂರು ವರ್ಷಗಳ ನಂತರ ಹುಬ್ಬಳ್ಳಿ ನಗರದ ಪ್ರಮುಖ ಆಕರ್ಷಣೆ ಉಣಕಲ್ ಕೆರೆ ಕೋಡಿ ಹರಿದಿದೆ.
ಒಂದು ವಾರದ ಹಿಂದೆ ಕೋಡಿ ಹರಿಯುವುದಕ್ಕೆ ಒಂದು ಅಡಿ ಮಾತ್ರ ಬಾಕಿ ಇದ್ದ ಉಣಕಲ್ ಕೆರೆ ಶನಿವಾರ ಮಧ್ಯಾಹ್ನ ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಕೋಡಿ ಹರಿದಿದ್ದು, ಕೆರೆ ತುಂಬಿದ ವಿಷಯ ತಿಳಿಯುತ್ತಿದ್ದಂತೆಯೇ ಕೋಡಿ ಹರಿಯುವ ಜಾಗದಲ್ಲಿ ಬೆಳೆದಿದ್ದ ಕಸವನ್ನು ಮಹಾನಗರ ಪಾಲಿಕೆ ಕಾರ್ಮಿಕರು ಸ್ವಚ್ಛಗೊಳಿಸುವ ಕೆಲಸವನ್ನು ತುರ್ತಾಗಿ ಕೈಗೊಂಡು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದ್ದಾರೆ.
ಹಳ್ಳಿಕೇರಿ: ಇಂದು, ನಾಳೆ ಕೇರಂ ಸ್ಪರ್ಧೆ
ಅಣ್ಣಿಗೇರಿ: ಸಮೀಪದ ಹಳ್ಳಿಕೇರಿ ಗ್ರಾಮದಲ್ಲಿ ಗಜಾನನ ಉತ್ಸವ ನಿಮಿತ್ತ ಗುರು ಕೊಟ್ಟೂರು ಬಸವೇಶ್ವರ ಯುವಕ ಮಂಡಳ ಆಶ್ರಯದಲ್ಲಿ ಸೆ.15ರಂದು ಕೇರಂ ಸ್ಪರ್ಧೆ ಮತ್ತು ಸೆ.16ರಂದು ಉಸುಕಿನ ಟ್ರ್ಯಾಕ್ಟರ್ ರಿವರ್ಸ್ ಹೊಡೆಯುವ ಸ್ಫರ್ಧೆ ಆಯೋಜಿಸಲಾಗಿದೆ. ಕೇರಂ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನ ರು. 1001 ನಗದು, ದ್ವಿತೀಯ ರು. 501 ನಗದು ಬಹುಮಾನ ನೀಡಲಾಗುವುದು. ಉಸುಕಿನ ಟ್ರ್ಯಾಕ್ಟರ್ ರಿವರ್ಸ್ ಸ್ಫರ್ಧೆಯಲ್ಲಿ ಪ್ರಥಮ ಬಂದ ವಿಜೇತರಿಗೆ ರು. 2501 ನಗದು ಬಹುಮಾನ ನೀಡಲಾಗುವುದು. ಹಳ್ಳಿಕೇರಿ ಗ್ರಾಪಂ ಆವರಣದಲ್ಲಿ ಬೆಳಿಗ್ಗೆ 9.30 ಗಂಟೆಗೆ ಭಾಗವಹಿಸಲು ಸೂಚಿಸಲಾಗಿದೆ.
ಮನೆಗಳಿಗೆ ನುಗ್ಗಿದ ನೀರು: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 14
ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಸುರಿದ ಮಳೆಯಿಂದ ಸಮೀಪದ ನೆಹರು ನಗರದ ಗೌಡರ ಓಣಿಯಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ಹೊಕ್ಕಿರುವ ಘಟನೆ ನಡೆದಿದೆ.
ಚರಂಡಿ ನಿರ್ಮಿಸದ ಹಿನ್ನೆಲೆಯಲ್ಲಿ ಮಳೆ ನೀರು ಏಕಾಏಕಿ ನುಗ್ಗಿ ಬಂದಿದ್ದು, ಇದರಿಂದ ರೋಸಿ ಹೋದ ಸ್ಥಳೀಯರು ಕೆಲ ಹೊತ್ತು ಹಳಿಯಾಳ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಕೂಡಲೇ ಚರಂಡಿ ನಿರ್ಮಿಸಬೇಕು ಹಾಗೂ ಮಳೆ ನೀರು ಮನೆಗಳಿಗೆ ನುಗ್ಗದಂತೆ ಪಾಲಿಕೆ ಎಚ್ಚರ ವಹಿಸಬೇಕೆಂದು ನಾಗರಾಜ ಗೌಡರ, ಮಾದಯ್ಯ ಮರೆನ್ನವರ ಹಾಗೂ ಬಸಯ್ಯ ಹಿರೇಮಠ, ಶಿವು ಹಲಗಿ ಇದ್ದರು.
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 14
ಶನಿವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಸುರಿದ ಮಳೆಯಿಂದ ಸಮೀಪದ ನೆಹರು ನಗರದ ಗೌಡರ ಓಣಿಯಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ಹೊಕ್ಕಿರುವ ಘಟನೆ ನಡೆದಿದೆ.
ಚರಂಡಿ ನಿರ್ಮಿಸದ ಹಿನ್ನೆಲೆಯಲ್ಲಿ ಮಳೆ ನೀರು ಏಕಾಏಕಿ ನುಗ್ಗಿ ಬಂದಿದ್ದು, ಇದರಿಂದ ರೋಸಿ ಹೋದ ಸ್ಥಳೀಯರು ಕೆಲ ಹೊತ್ತು ಹಳಿಯಾಳ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು. ಕೂಡಲೇ ಚರಂಡಿ ನಿರ್ಮಿಸಬೇಕು ಹಾಗೂ ಮಳೆ ನೀರು ಮನೆಗಳಿಗೆ ನುಗ್ಗದಂತೆ ಪಾಲಿಕೆ ಎಚ್ಚರ ವಹಿಸಬೇಕೆಂದು ನಾಗರಾಜ ಗೌಡರ, ಮಾದಯ್ಯ ಮರೆನ್ನವರ ಹಾಗೂ ಬಸಯ್ಯ ಹಿರೇಮಠ, ಶಿವು ಹಲಗಿ ಇದ್ದರು.
ಶಾರದಾ ಶಾಲ್ಮಲಾ ಪ್ರಶಸ್ತಿ ಪ್ರದಾನ
ಧಾರವಾಡ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಪ್ರತಿ ವರ್ಷ ಅವರಿಗೆ ಶಾರದಾ ಶಾಲ್ಮಲಾ ಪ್ರಶಸ್ತಿ ವಿತರಿಸುವ ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಮಹಾ ಮಂಡಳ ಪ್ರಸಕ್ತ ಬಾರಿ ಮೂವರು ಸಾಧಕರಿಗೆ ಪ್ರಶಸ್ತಿ ವಿತರಿಸಿತು. ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮಹಾಮಂಡಳದ ಅಧ್ಯಕ್ಷ ಪ್ರಕಾಶ ಘಾಟಗೆ, ಸಲಹಾ ಸಮಿತಿ ಅಧ್ಯಕ್ಷ ಸುಭಾಸ ಶಿಂಧೆ, ಕಾರ್ಯಾಧ್ಯಕ್ಷ ವಸಂತ ಅರ್ಕಾಚಾರ್, ಪ್ರಧಾನ ಕಾರ್ಯದರ್ಶಿ ಆನಂದ ಜಾಧವ, ಗೌರವ ಉಪಾಧ್ಯಕ್ಷರಾದ ಯಾಸೀನ್ ಹಾವೇರಿಪೇಟ, ಅನೇಕ ಶಿಕ್ಷಣ ತಜ್ಞ ಡಾ. ಅಜಿತ ಪ್ರಸಾದ, ಹಿರಿಯ ವೈದ್ಯ ಇಕ್ಬಾಲ್ ಅಹ್ಮದ ಶೇಖ್ ಹಾಗೂ ಪತ್ರಕರ್ತ ನಾಗರಾಜ ಕಿರಣಗಿ ಅವರಿಗೆ ಶಾರದಾ ಶಾಲ್ಮಲಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಮುರುಘಾಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿಕ್ಷಣ ತಜ್ಞ ಡಾ. ಅಜಿತ ಪ್ರಸಾದ, ಮಹಾಮಂಡಳದ ಗೌರವ ಉಪಾಧ್ಯಕ್ಷರಾದ ಆನಂದ ಗಂಭೀರ, ಈರಪ್ಪ ಕಿತ್ತೂರು, ಬಸವರಾಜ ಮಟ್ಟಿ, ಮನೋಜ ಕರ್ಜಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಆನಂದ ಸಿಂಗನಾಥ, ಮೆಹಬೂಬ್ ಮುಲ್ಲಾನವರ, ನಿಜಾಮ ರಾಹಿ, ಆನಂದ ಮೂಶಣ್ಣವರ, ಮಹ್ಮದ ಅಲಿ ಬಡಬಡೆ, ಶ್ರೀಧರ ಶೇಟ್, ಟೆರೆನ್ಸ ಪಾಲ, ರವಿ ಲೊಲೆ ಇದ್ದರು.
ಆಕಸ್ಮಿಕ ಘಟನೆಯಲ್ಲಿ ಕಾರ್ಮಿಕ ಸಾವು
ಧಾರವಾಡ: ಯಂತ್ರದಲ್ಲಿ ಸಿಲುಕಿ ಕಾಲು ತುಂಡಾದ ಪರಿಣಾಮ ಕಾರ್ಮಿಕನೊಬ್ಬ ಸಾವಿಗೀಡಾದ ಘಟನೆ ಬೇಲೂರು ಬಳಿಯ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಹರಿಹರ ಬಳಿಯ ಬನ್ನಿಕೋಡ ಗ್ರಾಮದ ಆನಂದ ಮಂಜುನಾಥ ಆಚಾರ ಎಂಬುವರೇ ಸಾವಿಗೀಡಾದ ಕಾರ್ಮಿಕ ಎಂದು ಪ್ರಕರಣ ದಾಖಲಿಸಿದ ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿನ ಎಲ್.ಎನ್. ಆಯಿಲ್ ಕಂಪನಿಯಲ್ಲಿ ಈ ದುರ್ಘಟನೆ ನಡೆದಿದೆ. ಕಂಪನಿಯಲ್ಲಿ ಕಾರ್ಮಿಕನಾಗಿದ್ದ ಈತ ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಯಂತ್ರಕ್ಕೆ ಸಿಲುಕಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆತನನ್ನು ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳಕ್ಕೆ ಗರಗ ಠಾಣಾ ಪಿಎಸ್ಐ ಟಿ. ವೆಂಕಟಸ್ವಾಮಿ ಭೇಟಿ ನೀಡಿದ್ದರು.
ಅಣ್ಣಿಗೇರಿ: ಮಹಿಳೆ ಕಾಣೆ
ಅಣ್ಣಿಗೇರಿ: ಸಮೀಪದ ಕೊಂಡಿಕೊಪ್ಪ ಗ್ರಾಮದ ಶಿವಪ್ಪ ಫಕ್ಕೀರಪ್ಪ ನೇಕಾರ ಪತ್ನಿ ನೀಲವ್ವ ಶಿವಪ್ಪ ನೇಕಾರ (51) ಗಂಡನ ಜೊತೆ ಜಗಳ ಮಾಡಿ ಜೂನ್ 3, 2013ರಂದು ಮನೆಯಿಂದ ತೆರಳಿದವರು ಪತ್ತೆಯಾಗಿಲ್ಲ. 5 ಅಡಿ 2 ಅಂಗುಲ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಗೆಂಪು ಮೈಬಣ್ಣ, ದುಂಡ ಮುಖ, ಎಡಗೈ ರೆಟ್ಟೆಯ ಮೇಲೆ ಎರಡು ಮೈಲಿ ಕಲೆ ಇದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಸ್ಥಳೀಯ ಆರಕ್ಷಕ ಠಾಣೆಗೆ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದು, ಮಹಿಳೆ ಪತ್ತೆ ಗುರುತು ಕಂಡಲ್ಲಿ ಆರಕ್ಷಕ ಠಾಣಾಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

