ಮಳೆ: ರಾಟ್ಸನ್ ಅಪಾರ್ಟ್ಮೆಂಟ್, ಮನೆಯೊಳಗೆ ನುಗ್ಗಿದ ನೀರು
ಧಾರವಾಡ: ಕಳೆದ ನಾಲ್ಕೈದು ದಿನಗಳಿಂದ ನಿತ್ಯ ಸಂಜೆ ಸುರಿಯುತ್ತಿರುವ ಮಳೆ ಶನಿವಾರ ಮಧ್ಯಾಹ್ನದ ಹೊತ್ತಿಗೆ ಆರಂಭವಾಗಿದ್ದು, ಸಂಜೆವರೆಗೂ ಸುರಿಯಿತು.
ಮಧ್ಯಾಹ್ನ 2ರ ಸುಮಾರಿಗೆ ಆರಂಭವಾಗಿ ಒಂದು ಗಂಟೆ ಉತ್ತಮವಾಗಿ ಬಂತು. ತದನಂತರ ಜಿಟಿಜಿಟಿಯಾಗಿ ಸಂಜೆ 5ರ ವರೆಗೂ ಇತ್ತು. ನಗರದ ಪ್ರಮುಖ ರಸ್ತೆಗಳು ನೀರಿನಿಂದ ತುಂಬಿದ್ದವು. ಒಳಚರಂಡಿ ಹಾಗೂ ಚರಂಡಿಗಳು ಪೂರ್ತಿ ತುಂಬಿ ನೀರು ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಗಣೇಶನ ಮೂರ್ತಿ ಪ್ರತಿಷ್ಟಾಪನೆ ದಿನದಿಂದ ಆರಂಭವಾದ ಮಳೆ ಗಣೇಶನ ವಿಸರ್ಜನೆ ವೇಳೆ ಶುಕ್ರವಾರ ಗಣೇಶನ ವಿಸರ್ಜನೆಗೂ ತೀವ್ರ ಅಡ್ಡಿ ಮಾಡಿತು.
ಉಕ್ಕಿದ ಒಳಚರಂಡಿ: ಇಲ್ಲಿನ ಕೆ.ಸಿ. ಪಾರ್ಕ್ ಹಿಂದುಗಡೆಯ ರಾಟ್ಸನ್ ಅಪಾರ್ಟ್ಮೆಂಟ್ ಎದುರಿನ ರಸ್ತೆಯಲ್ಲಿರುವ ಒಳಚರಂಡಿಯನ್ನು ಸ್ವಚ್ಛಗೊಳಿಸದ ಕಾರಣ ಕೊಳಚೆ ನೀರು ಮಳೆಯೊಂದಿಗೆ ಸೇರಿ ರಸ್ತೆ ತುಂಬೆಲ್ಲಾ ಹರಿಯಿತು. ಅಲ್ಲದೆ, ತಗ್ಗು ಪ್ರದೇಶದಲ್ಲಿನ ಅನೇಕ ಮನೆಗಳ ಬಾಗಿಲಿಗೂ ಕೊಳಚೆ ನೀರು ನುಗ್ಗಿದ್ದು, ಸ್ಥಳೀಯರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದರು.
ಮಳೆ ಬಂದಾಗೊಮ್ಮೆ ಒಳಚರಂಡಿ ನೀರು ಹರಿದು ಮನೆ ಬಾಗಿಲಿಗೆ ಬರುತ್ತದೆ. ಅಲ್ಲದೆ, ಈ ರಸ್ತೆ 12 ಹಾಗೂ 13ನೇ ವಾರ್ಡ್ಗೆ ಸಂಬಂಧಿಸಿದ್ದು ಇಬ್ಬರೂ ಪಾಲಿಕೆ ಸದಸ್ಯರು ಕಾಳಜಿ ತೋರುತ್ತಿಲ್ಲ. ಮಳೆ ಬಂದಾಗ ಕಸವೆಲ್ಲಾ ಗಟಾರು ಸೇರಿ ನೀರು ಸರಾಗವಾಗಿ ಹರಿಯದೇ ಮನೆಗಳಿಗೆ ನುಗ್ಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ಅಂತೆಯೇ, ಸಿವಿಲ್ ಆಸ್ಪತ್ರೆ ಬಳಿ 5ನೇ ಕ್ರಾಸ್, ನವಲೂರು ಜನತಾ ಪ್ಲಾಟ್, ಜನ್ನತನಗರ, ಶ್ರೀನಗರದ ಭಾವಿಕಟ್ಟಿ ಪ್ಲಾಟ್, ಲಕ್ಷ್ಮಿಸಿಂಗನಕೇರಿಯ ತಗ್ಗು ಪ್ರದೇಶದಲ್ಲಿ ಗಟಾರು ನೀರು ಮನೆಯೊಳಗೆ ಪ್ರವೇಶಿಸಿ ಜನತೆಗೆ ತೀವ್ರ ತೊಂದರೆಯಾಗಿದೆ. ಸೆ. 9ರಿಂದ 13ರ ವರೆಗೆ ಜಿಲ್ಲೆಯಲ್ಲಿ ಸರಾಸರಿ 70 ಮಿ.ಮೀ.ನಷ್ಟು ಮಳೆಯಾಗಿದ್ದು, ಈ ಪೈಕಿ ಕುಂದಗೋಳದಲ್ಲಿ 95 ಮಿ.ಮೀ., ಧಾರವಾಡದಲ್ಲಿ 42, ಹುಬ್ಬಳ್ಳಿಯಲ್ಲಿ 68, ಕಲಘಟಗಿಯಲ್ಲಿ 38 ಹಾಗೂ ನವಲಗುಂದದಲ್ಲಿ 45 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಮಳೆಯಿಂದ ಹೆಸರು ಬೆಳೆ ತೆಗೆದ ರೈತರಿಗೆ ಹಿಂಗಾರು ಬಿತ್ತನೆಗೆ ಅನುಕೂಲವಾಗಲಿದೆ. ಆದರೆ, ಈಗಾಗಲೇ ಕಟಾವಿಗೆ ಬಂದಿರುವ ಕೆಲವು ಬೆಳೆಗಳಿಗೆ ಮಳೆ ತೊಂದರೆ ತರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

