ಧಾರವಾಡ

ಕಾರಿಗೆ ಗುಂಡಿಕ್ಕಿದ ಪೊಲೀಸರು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 4
ಗಸ್ತು ಪೊಲೀಸರ ಆದೇಶ ಧಿಕ್ಕರಿಸಿ ಅತಿವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದ ಕಾರಿನ ಟೈರ್‌ಗೆ ಮೂರು ಸುತ್ತು ಗುಂಡು ಹಾರಿಸಿದ ಪೊಲೀಸರು, ವಾಹನ ಸಮೇತ ಇಬ್ಬರನ್ನು ಬಂಧಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ರೇಲ್ವೆ ನಿಲ್ದಾಣದ ಅಂಡರ್ ಬ್ರಿಡ್ಜ್ ಬಳಿ ನಡೆದಿದೆ.
ಗೋಕುಲ ರಸ್ತೆ ಅಕ್ಷಯ ಕಾಲೋನಿ ನಿವಾಸಿ ಅಖಿಲ ಜಗದೀಶ ಡಂಬಳ (19) ಹಾಗೂ ರಾಯಚೂರಿನ ಮಾನ್ವಿ ಮೂಲದ ಶೋಯಬ್ ಅಬ್ದುಲ್ ರಹುಪ (21) ಎಂಬುವವರೇ ಬಂಧಿತರು.
ಸೋಮವಾರ ರಾತ್ರಿ ಗಸ್ತನಲ್ಲಿದ್ದ ಡಿಸಿಪಿ (ಅಪರಾಧ ಮತ್ತು ಸಂಚಾರ ) ಶ್ರೀನಾಥ ಜೋಶಿ, ರೋಟರಿ ಶಾಲೆಯ ಹತ್ತಿರದ ಸಿಲ್ಲಿ ಪಾಯಿಂಟ್ ಬಳಿಯಿಂದ ಆರೋಪಿ ಅಖಿಲ ಅತಿವೇಗವಾಗಿ, ನಿರ್ಲಕ್ಷ್ಯದಿಂದ ಸ್ವಿಫ್ಟ್ ಡಿಸೈರ್ ಕಾರು (ಕೆಎ 35, ಎಂ 554) ನ್ನು ಚಲಾಯಿಸಿಕೊಂಡು ಹೊರಟಿದ್ದನ್ನು ನೋಡಿ ಸಂಶಯಗೊಂಡು ನಿಲ್ಲಿಸುವಂತೆ ಸೂಚನೆ ನೀಡಿದ್ದರು.
ಆದಾಗ್ಯೂ, ಕಾರು ನಿಲ್ಲಿಸದೆ ಮತ್ತಷ್ಟು ವೇಗವಾಗಿ ವಾಹನ ತೆಗೆದುಕೊಂಡು ಆರೋಪಿತರು ಪರಾರಿಯಾಗಿದ್ದರಿಂದ, ಅಪರಾಧವೆಸಗಿರಬಹುದು ಎಂಬ ಸಂಶಯದಿಂದ ಡಿಸಿಪಿ ಜೋಶಿ, ಕಾರನ್ನು ವಶಕ್ಕೆ ತೆಗೆದುಕೊಳ್ಳಲು ಎಲ್ಲೆಡೆ ನಾಕಾಬಂದಿ ಹಾಕುವಂತೆ ಸೂಚನೆ ನೀಡಿದರು.
ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಕಾರು, ಮತ್ತೆ ಗದಗ ರಸ್ತೆ ಮಾರ್ಗವಾಗಿ ಹಿಂದಿರುಗಿ ಬರುವಾಗ ರೇಲ್ವೆ ನಿಲ್ದಾಣದ ಅಂಡರ್ ಬ್ರಿಡ್ಜ್ ಬಳಿ ಬೆಳಗಿನ ಜಾವ 2.15ರ ಹೊತ್ತಿಗೆ ಕೇಶ್ವಾಪುರ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಹಿರೇಗೌಡರ ಬ್ಯಾರಿಕೆಡ್‌ನ್ನು ರಸ್ತೆಗೆ ಅಡ್ಡಲಾಗಿ ಹಾಕುವಂತೆ ಸಹ ಸಿಬ್ಬಂದಿಗೆ ಆದೇಶಿಸಿದರು.
ಬ್ಯಾರಿಕೇಡ್‌ನ್ನು ಮುರಿದು ವಾಹನ ಚಲಾಯಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಡಿಸಿಪಿ ಜೋಶಿ ಅವರ ಆದೇಶದ ಮೇರೆಗೆ ಕಾರಿನ ಬಲಭಾಗದ ಚಕ್ರಕ್ಕೆ ಇನ್‌ಸ್ಪೆಕ್ಟರ್ ಹಿರೇಗೌಡರ ಸರ್ವಿಸ್ ರಿವಾಲ್ವರ್‌ನಿಂದ 3 ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ.
ಅಲ್ಲಿಂದಲೂ ತಪ್ಪಿಸಿಕೊಂಡು ಪರಾರಿಯಾದ ಆರೋಪಿತರು, ಕೆ.ಸಿ. ಸರ್ಕಲ್ ಬಳಿಯಿಂದ ಹಾದು ಹೋಗಲು ಯತ್ನಿಸಿದಾಗ ಅಲ್ಲಿನ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ನಿಂತಿದೆ. ತಕ್ಷಣ ಅದರಿಂದ ಇಳಿದು ಓಡಿ ಹೋಗಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿ ವಾಹನ ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ನಿರ್ಲಕ್ಷ್ಯತನದ ವಾಹನ ಚಾಲನೆ ಐಪಿಸಿ 279 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.