10ಕ್ಕೆ ಸುಬ್ರಮಣಿಯನ್ ಸ್ವಾಮಿ ಜತೆ ರಾಜಕೀಯ ಸಂವಾದ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 4
ಇಲ್ಲಿಯ ಸೃಜನಾ ರಂಗಮಂದಿರಲ್ಲಿ ಫೆ. 10ರಂದು ಸಂಜೆ 5.30ಕ್ಕೆ ಖ್ಯಾತ ಚಿಂತಕ, ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರೊಂದಿಗೆ ದೇಶದ ವರ್ತಮಾನ ಪರಿಸ್ಥಿತಿ ಕುರಿತು ಸಂವಾದ ನಡೆಯಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹದಗೆಟ್ಟಿರುವ ದೇಶದ ಸ್ಥಿತಿ ಕುರಿತು ಡಾ. ಸುಬ್ರಮಣಿಯನ್ ಅವರು ಸಾರ್ವಜನಿಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುವ ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ ಎಂದು ಜೋಶಿ ಹೇಳಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಕಳೆದ 10 ವರ್ಷಗಳ ಅಭಿವೃದ್ಧಿ ಕುರಿತ ಪ್ರಗತಿ ದರ್ಶನ ಕಿರುಹೊತ್ತಿಗೆ ಅಂದು ಬಿಡುಗಡೆ ಮಾಡಲಾಗುವುದು. ವಿದ್ವಾಂಸ ಡಾ. ವೃಷಭೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಅರವಿಂದ ಬೆಲ್ಲದ ಭಾಗವಹಿಸುವರು. ಡಾ. ಎಸ್.ಆರ್. ರಾಮನಗೌಡರ, ಜಿ.ಜಿ. ದೊಡವಾಡ, ಎನ್.ಎಫ್. ಶಿರಗುಪ್ಪಿ, ವಿ.ಡಿ. ನೀಲಣ್ಣವರ, ಪಂ.ಎಂ. ವೆಂಕಟೇಶಕುಮಾರ, ಡಾ. ಕೆ.ಆರ್. ಪಾಟೀಲ ಹಾಗೂ ಯಲ್ಲಪ್ಪಗೌಡ ಪಾಟೀಲ ಭಾಗವಹಿಸುವರು ಎಂದು ತಿಳಿಸಿದರು.
ನಿಮ್ಮ ದನಿ ನಮ್ಮ ಪ್ರಣಾಳಿಕೆ...: ದೇಶದ, ರಾಜ್ಯದ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ಮಾಡುವ ಮೂಲಕ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ನಿಮ್ಮ ದನಿ ಪ್ರಣಾಳಿಕೆಗಾಗಿ ರಾಜ್ಯಾದ್ಯಂತ ಸ್ಥಾಪಿಸಿರುವ 300ಕ್ಕೂ ಹೆಚ್ಚು ನಮೋ ಟೀ ಸ್ಟಾಲ್ಗಳ ಮುಖಾಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೇರವಾಗಿ ಎಲ್ಸಿಡಿ ಮೂಲಕ ಸಂವಾದ ಮಾಡಲಿದ್ದಾರೆ. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಚುನಾವಣೆ ಬಂದ ಕೂಡಲೇ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗುಲ್ಬರ್ಗ ಹಾಗೂ ಅಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುವುದು ನೆನಪಾಗಿದೆ. ಮುಖ್ಯಮಂತ್ರಿ ಸ್ಥಾನ ತಪ್ಪಿದ ದಿನದಿಂದ ಇತ್ತೀಚಿನ ವರೆಗೂ ಗುಲ್ಬರ್ಗ ಅವರಿಗೆ ನೆನಪಾಗಿರಲಿಲ್ಲ ಎಂದು ಜೋಶಿ ಖರ್ಗೆ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಮೋದಿ ಹಾಗೂ ಬಿಜೆಪಿ ಸರ್ಕಾರ ಬೆಂಬಲಿಸಿ ರಾಜ್ಯದ ಹಲವು ಸ್ವಾಮೀಜಿಗಳು ಸಹ ಬೆಂಬಲ ನೀಡಲು ಮುಂದಾಗಿದ್ದು, ಸಂತಸ ತಂದಿದೆ. ಅಲ್ಲದೇ, ಬಿಜೆಪಿಯಲ್ಲಿ ಕೆಜೆಪಿಯೂ ವಿಲೀನವಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಆಮ್ ಆದ್ಮಿ ಪಕ್ಷಕ್ಕೆ ಮುಂಚೆ ಇದ್ದ ವೇಗ ಈಗಿಲ್ಲ. ಪಕ್ಷದ ವೇಗ ಬರುವ ದಿನಗಳಲ್ಲಿ ಇನ್ನೂ ಕಮ್ಮಿಯಾಗಲಿದ್ದು, ಬಿಜೆಪಿಗೆ ಈ ಪಕ್ಷ ಯಾವ ಸ್ಪರ್ಧೆ ನೀಡಲಾರದು ಎಂದು ಪ್ರಹ್ಲಾದ ಜೋಶಿ ಹೇಳಿದರು. ಲೋಕಸಭಾ ಚುನಾವಣೆಯ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದು ಇನ್ನೂ ನಿರ್ಣಯವಾಗಿಲ್ಲ ಎಂದು ತಿಳಿಸಿದರು.
ರು. 40 ಲಕ್ಷ ಶುದ್ಧ ಕುಡಿಯುವ ನೀರು, ಶಿಗ್ಗಾಂವಿ ಬಳಿ ಗ್ರಾಮೀಣ ರಸ್ತೆ ನಿರ್ಮಾಣ, ಸಮುದಾಯ ಭವನ, ಹುಬ್ಬಳ್ಳಿ-ಧಾರವಾಡ ರಸ್ತೆ, ಉದ್ಯಾನವನ ಹೀಗೆ ಐದು ವರ್ಷಗಳ ತಮ್ಮ ಅನುದಾನ ಬಳಕೆ ಮಾಡಿಕೊಂಡಿದ್ದೇನೆ. ಒಟ್ಟು ರು. 23.34 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, ರು. 19 ಕೋಟಿ ಅನುದಾನ ಬರಬೇಕಿತ್ತು.ಈ ಪೈಕಿ ರು. 17.50 ಕೋಟಿ ಬಂದಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ, ಶಹರ ಬಿಜೆಪಿ ಅಧ್ಯಕ್ಷ ವಿಜಯಾನಂದ ಶೆಟ್ಟಿ, ರಾಜ್ಯ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸಂಜಯ ಕಪಟಕರ, ಪ್ರಕಾಶ ಗೋಡಬೋಲೆ, ಬಸವರಾಜ ಮುತ್ತಳ್ಳಿ, ಕಲಂದರ ಮುಲ್ಲಾ, ಟಿ.ಎಸ್. ಪಾಟೀಲ, ಸಂತೋಷ ದೇವರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

