ಧಾರವಾಡ

ನನಸಾಗುವುದೇ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ?

Published On :

ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾಗಿದ್ದರಿಂದ ಈ ಬಾರಿ ಮಂಡನೆಯಾಗಲಿರುವ ರೇಲ್ವೆ ಬಜೆಟ್‌ನಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಹಸಿರು ನಿಶಾನೆ ಸಿಗಬಹುದೆಂಬ ಆಶಾವಾದ ಇತ್ತು. ಸುಪ್ರೀಂ ಕೋರ್ಟ್‌ನ ಹಸಿರು ಪೀಠದಲ್ಲಿರುವ ತಡೆಯಾಜ್ಞೆ ಇನ್ನೂ ತೆರವುಗೊಳ್ಳದ ಕಾರಣ ಯೋಜನೆ ಜಾರಿ ಬಗ್ಗೆ ಯಾವುದೇ ಆಶಾವಾದ ಮೂಡದಂಥ ಪರಿಸ್ಥಿತಿ ಉದ್ಭವಿಸಿದೆ. ಆದರೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸರ್ಕಾರದ ಅವಧಿ ಪೂರ್ಣಗೊಳ್ಳುವ ಮೊದಲು ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಿದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ದಾರಿ ಸುಗಮಗೊಳ್ಳುತ್ತದೆ.

-ಆನಂದ ಅಂಗಡಿ
ಕ.ಪ್ರ.ವಾರ್ತೆ ಹುಬ್ಬಳ್ಳಿ ಫೆ. 8
ಯುಪಿಎ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ರೇಲ್ವೆ ಬಜೆಟ್ ಮಂಡಿಸಲಿರುವ ಕನ್ನಡಿಗ, ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಾದರೂ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಇರುವ ಅಡಚಣೆ ನಿವಾರಿಸಲು ಯತ್ನಿಸುವರೇ?
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್‌ನ ಹಸಿರು ಪೀಠದಲ್ಲಿರುವ ತಡೆಯಾಜ್ಞೆ ತೆರವುಗೊಳಿಸದ ಹೊರತು, ಯೋಜನೆ ಪ್ರಗತಿ ಅಸಾಧ್ಯ. ಹೀಗಾಗಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ತಡೆಯಾಜ್ಞೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ತೆರವುಗೊಳಿಸಲು ಮುಂದಾಗಬೇಕಿದೆ.
ಆದರೆ ಫೆ. 12ಕ್ಕೆ ರೇಲ್ವೆ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದ್ದು, ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಬಗ್ಗೆ ಈ ಬಾರಿಯೂ ಯಾವುದೇ ಆಶಾಭಾವ ವ್ಯಕ್ತವಾಗುವ ಸಾಧ್ಯತೆ ಇಲ್ಲ. ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗುವುದೆಂದು ಹಸಿರುಪೀಠ ತಡೆಯಾಜ್ಞೆ ವಿಧಿಸಿದೆ.
ಈ ತಡೆಯಾಜ್ಞೆ ತೆರವುಗೊಳಿಸದ ಹೊರತು ಯೋಜನೆಗೆ ಚಾಲನೆ ನೀಡುವುದು ಅಸಾಧ್ಯ. ಹಸಿರು ಪೀಠದ ನಿಯೋಗ ಕಳೆದ ಡಿಸೆಂಬರ್‌ನಲ್ಲಿ ಕಾರವಾರಕ್ಕೆ ಭೇಟಿ ನೀಡಿ, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಪರ್ಯಾಯ ಮಾರ್ಗ ರಚಿಸುವಂತೆ ರೇಲ್ವೆ ಇಲಾಖೆಗೆ ಸೂಚಿಸಿದೆ. ರಾ.ಹೆ. 63ರ ಸಮೀಪದಿಂದ ರೈಲು ಮಾರ್ಗ ನಿರ್ಮಿಸುವುದರಿಂದ ಅರಣ್ಯ ಸಂಪತ್ತು ಹಾಳಾಗುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವನ್ನು ಈ ನಿಯೋಗ ವ್ಯಕ್ತಪಡಿಸಿತ್ತು.
ಭಾರತೀಯ ವಿಜ್ಞಾನ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಟಿ.ವಿ.ರಾಮಚಂದ್ರನ್ ಅವರು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲೂ ಯೋಜನೆ ಜಾರಿಯ ಮಹತ್ವದ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ತಮ್ಮ ವಿವರವಾದ ವರದಿಯಲ್ಲಿ ಈ ಯೋಜನೆಗೆ 800 ಹೆಕ್ಟೇರ್‌ಗಿಂತಲೂ ಕಡಿಮೆ ಅರಣ್ಯ ಪ್ರದೇಶ ಬೇಕಾಗಿದ್ದು ಈ ದೃಷ್ಟಿಯಿಂದ ಇದು ಯೋಗ್ಯ ಯೋಜನೆ ಎಂದು ಅಭಿಪ್ರಾಯ ನೀಡಿದ್ದಾರೆ. ಈ ವಿಷಯವನ್ನು ಸೂಕ್ತವಾಗಿ ಹಸಿರು ಪೀಠದ ಮುಂದೆ ಮಂಡಿಸಿ ಪ್ರಕರಣದಲ್ಲಿನ ತಡೆಯಾಜ್ಞೆ ತೆರವುಗೊಳಿಸುವಂತೆ ಕರ್ನಾಟಕ ಸರ್ಕಾರ ಈಗಾಗಲೇ ಹಲವು ಬಾರಿ ಪೀಠದ ಕಾರ್ಯದರ್ಶಿಗೆ ನಿವೇದನೆ ಮಾಡಿದೆ.
ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕಾಗಿ ಈಗಾಗಲೇ ಕಲಘಟಗಿ ತಾಲೂಕಿನ ದೇವಿಕೊಪ್ಪವರೆಗಿನ 35 ಕಿ.ಮೀ. ಉದ್ದ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪೂರ್ಣಗೊಂಡಿದೆ. ಇದಕ್ಕಾಗಿ 85 ಕೋಟಿಗೂ ಹೆಚ್ಚಿನ ಹಣ ವೆಚ್ಚವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.