ಫಿಜನ್ ಐಲ್ಯಾಂಡ್ಗೆ ಕಂಟಕ
ಕನ್ನಡಪ್ರಭ ವಾರ್ತೆ, ಕಾರವಾರ, ಫೆ. 19
ಪರಿಸರ ಸೂಕ್ಷ್ಮ, ಜಲ, ಜೀವ ವೈವಿಧ್ಯತೆ ತಾಣ ನೇತ್ರಾಣಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ರಾಜ್ಯ ಸರ್ಕಾರದ ತೀರ್ಮಾನ ಈಗ ವಿವಾದಕ್ಕೆ ಕಾರಣವಾಗಿದೆ. ಪರಿಸರವಾದಿಗಳು ಹಾಗೂ ತಜ್ಞರು ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ನೇತ್ರಾಣಿಯಲ್ಲಿ ಕಡಲತೀರ ಉತ್ಸವ ಹಾಗೂ ಅಲ್ಲಿ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. 2014-15ನೇ ಸಾಲಿನಿಂದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಆರಂಭಿಸುವ ಬಗ್ಗೆ ಹಾಗೂ ಅಲ್ಲಿ ಬೀಚ್ ಫೆಸ್ಟಿವಲ್ ನಡೆಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.
ಭಟ್ಕಳದ ಮುರ್ಡೇಶ್ವರದಿಂದ ಸುಮಾರು 18 ಕಿಮೀ. ದೂರದ ಅರಬ್ಬಿ ಸಮುದ್ರದ ಈ ದ್ವೀಪದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುವುದರಿಂದ ಪರಿಸರ ಹಾಗೂ ಅಮೂಲ್ಯ ಜಲಚರಗಳು ನಾಶವಾಗಲಿದೆ ಎನ್ನುವುದು ಪರಿಸರವಾದಿಗಳು ಹಾಗೂ ಪರಿಸರ ತಜ್ಞರ ಅಭಿಪ್ರಾಯ. ಹೀಗಾಗಿ ಸರ್ಕಾರದ ಈ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜೀವ ವೈವಿಧ್ಯದ ತಾಣ: ನೇತ್ರಾಣಿ ಅಪರೂಪದ ಜೀವ ವೈವಿಧ್ಯತಾ ತಾಣ. ಅಲ್ಲಿ ಪಾರಿವಾಳಗಳು ಬಹು ಸಂಖ್ಯೆಯಲ್ಲಿರುವುದರಿಂದ ಅದನ್ನು ಫಿಜನ್ ಐಲ್ಯಾಂಡ್ ಎಂತಲೂ ಕರೆಯುತ್ತಾರೆ. ಅಪರೂಪದ ಸ್ವಿಫ್ಟ್ ಪಕ್ಷಿಗಳು ಗೂಡು ಕಟ್ಟುವ ಸ್ಥಳ. ಈ ಸ್ವಿಫ್ಟ್ ಪಕ್ಷಿಗಳ ಗೂಡಿನಿಂದ ಸೂಪ್ ತಯಾರಿಸಲಾಗುತ್ತದೆ. ಒಂದೊಂದು ಗೂಡು ಸಾವಿರಾರು ರುಪಾಯಿ ಬೆಲೆ ಬಾಳುತ್ತದೆ. ಅಸಂಖ್ಯಾತ ಜಲಚರಗಳಿವೆ. ಬಾರಾಕುಡಾ, ರಿಬ್ಬನ್ ಫಿಶ್ ಮತ್ತಿತರ ಮತ್ಸ್ಯ ಸಂತತಿ ಇದೆ.
ಹವಳದ ಬಂಡೆಗಳು: ಎಲ್ಲಕ್ಕಿಂತ ಮುಖ್ಯವಾಗಿ ನೇತ್ರಾಣಿ ದ್ವೀಪದಲ್ಲಿ ಹವಳದ ಬಂಡೆಗಳಿವೆ. ದೇಶದಲ್ಲಿ ಅಂಡಮಾನ್ ಹಾಗೂ ನಿಕೋಬಾರ್ ಬಿಟ್ಟರೆ ಹವಳದ ಬಂಡೆಗಳು ಹೆಚ್ಚಿರುವ ದ್ವೀಪ ಅಂದರೆ ನೇತ್ರಾಣಿ ಮಾತ್ರ. ಇನ್ನು ಆಫ್ರಿಕಾದಿಂದಲೂ ತಿಮಿಂಗಿಲಗಳು ಇಲ್ಲಿ ವಲಸೆ ಬರುತ್ತವೆ. ಹೀಗಾಗಿ ಇಂತಹ ಅಪರೂಪದ ಜೀವ ವೈವಿಧ್ಯತೆಯನ್ನು ರಕ್ಷಿಸಿಕೊಳ್ಳುವುದನ್ನು ಬಿಟ್ಟು ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸಿ ಅವುಗಳನ್ನೆಲ್ಲ ನಾಶ ಮಾಡುವುದು ಸರಿಯಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಹೋರಾಟ: ನೇತ್ರಾಣಿಯಲ್ಲಿ ಬಹು ಹಿಂದಿನಿಂದಲೂ ನಮ್ಮ ನೌಕಾಪಡೆ ಸಮರಾಭ್ಯಾಸ ನಡೆಸುತ್ತಿತ್ತು. ಈಗಲೂ ಅಲ್ಲಿ ಸಜೀವ ಬಾಂಬ್ಗಳು ಕಂಡುಬರುತ್ತವೆ. ಸಮರಾಭ್ಯಾಸದಲ್ಲಿ ನಡೆಸುವ ಗುಂಡಿನ ಮೊರೆತ, ಕ್ಷಿಪಣಿ, ಬಾಂಬ್ ದಾಳಿಯಿಂದ ಜೀವ ವೈವಿಧ್ಯತೆ ನಾಶವಾಗುವುದನ್ನು ಮನಗಂಡು ಪರಿಸರ ಸಂಘಟನೆಗಳು, ಜಿಲ್ಲಾ ವಿಜ್ಞಾನ ಕೇಂದ್ರ, ಮತ್ತಿತರರು ಸತತವಾಗಿ ಹೋರಾಡಿ ನೇತ್ರಾಣಿಯನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿ ಬಹುತೇಕ ಸಫಲರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಮತ್ತೆ ಪ್ರವಾಸೋದ್ಯಮ ಹೆಸರಿನಲ್ಲಿ ಜೀವ ವೈವಿಧ್ಯತೆಗೆ ಕುತ್ತು ತರುವ ಯೋಜನೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

