ಇತಿಹಾಸ ಅವಲೋಕನ ಅಗತ್ಯ
ಸಿದ್ದಾಪುರ: ಇತಿಹಾಸ ಮರೆತರೆ ಭವಿಷ್ಯ ಕಟ್ಟಲು ಸಾಧ್ಯವಿಲ್ಲ. ಇತಿಹಾಸವನ್ನು ಸಮರ್ಪಕವಾಗಿ ಅವಲೋಕಿಸುವುದು ಅಗತ್ಯವಾಗಿದೆ ಎಂದು ಸಮುದಾಯ ರಾಜ್ಯ ಕಾರ್ಯದರ್ಶಿ ಟಿ. ಸುರೇಂದ್ರರಾವ್ ಹೇಳಿದರು.
ಇಲ್ಲಿನ ಶೃಂಗೇರಿ ಶಂಕರಮಠದ ಸಭಾಭವನದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ ಉ.ಕ. ಆಯೋಜಿಸಿದ್ದ ಪುತ್ತಣ್ಣ ನಾಟಕೋತ್ಸವ-2014 ಮತ್ತು ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಂಗಭೂಮಿಯ ಕೆಲಸ ಜನರನ್ನು ಒಟ್ಟಿಗೆ ತರುವಂಥದ್ದು. ರಂಗಭೂಮಿಯಿಂದ ಹೃದಯ ಬೆಸೆಯುವ ಕೆಲಸವಾಗಬೇಕೇ ಹೊರತು ಅದನ್ನು ಮುರಿಯುವಂಥಾಗಬಾರದು. ಉತ್ತರ ಕನ್ನಡ ಜಿಲ್ಲೆ ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಇಲ್ಲಿ ಉತ್ತಮ ರಂಗಮಂದಿರದ ಕೊರತೆ ಎದ್ದು ಕಾಣುತ್ತಿರುವುದು ವಿಷಾದದ ಸಂಗತಿ. ಸೀತಾರಾಮ ಶಾಸ್ತ್ರಿ ಹುಲಿಮನೆಯವರ ಹೆಸರಲ್ಲಿ ಇಲ್ಲಿ ರಂಗಮಂದಿರವಾಗಬೇಕು ಎಂದ ಅವರು, ನೂರಾರು ಜನರಿಗೆ ಬಣ್ಣ ಬರೆದ ಪುತ್ತಣ್ಣ ಯಾವತ್ತೂ ಬಣ್ಣ ಬದಲಿಸಿದವರಲ್ಲ. ಅವರ ಹೆಸರಲ್ಲಿ ನಾಟಕೋತ್ಸವ ನಡೆದಿರುವುದು ಅರ್ಥಪೂರ್ಣ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಸ್ಕೃತಿ ಸಂಪದದ ವಿಜಯ ಹೆಗಡೆ ದೊಡ್ಮನೆ ಪ್ರಬಲ ಮಾಧ್ಯಮವಾದ ರಂಗಭೂಮಿ ಜಿಲ್ಲೆಯಲ್ಲಿ ಇನ್ನಷ್ಟು ವಿಸ್ತೃತವಾಗಿ ಬೆಳೆಯಲಿ ಎಂದರು.
ರಂಗ ನಿರ್ದೇಶಕ ರಂಗ ಸೌಗಂಧದ ಗಣಪತಿ ಹೆಗಡೆ ಹುಲಿಮನೆ ಮಾತನಾಡಿದರು.
ರಂಗ ನಿರ್ದೇಶಕ, ಕಲಾವಿದ ಒಡ್ಡೋಲಗ ಸಂಸ್ಥೆಯ ಗಣಪತಿ ಹೆಗಡೆ ಹಿತ್ಲಕೈ ಇದ್ದರು.
ಚಿಂತನ ರಂಗ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಶ್ರೀಪಾದ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಬಹು ಹಿಂದೆಯೇ ಹಿಂದಿ ಸಿನೆಮಾ ರಂಗದಲ್ಲಿ ಸಾಧನೆ ಮಾಡಿದ್ದ ಪುತ್ತು ಶಾನಭಾಗ ಶಿರಸಿಗೆ ಬಂದು ಇಲ್ಲಿಯ ರಂಗಭೂಮಿಗೆ ಹೆಚ್ಚಿನ ಕೊಡುಗೆ ನೀಡಿದವರು. ಅವರ ಹೆಸರಲ್ಲಿ ಪ್ರತಿವರ್ಷ ನಾಟಕೋತ್ಸವ ನಡೆಸುತ್ತಿದ್ದು, ಈ ಬಾರಿ ರಾಜ್ಯಮಟ್ಟದ ನಾಟಕೋತ್ಸವ ನಡೆಸಿದ್ದೇವೆ ಎಂದರು.
ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ವಿಠ್ಠಲ ಭಂಡಾರಿ ಸ್ವಾಗತಿಸಿ, ನಿರೂಪಿಸಿದರು. ಈ ಸಂದರ್ಭ ಡಾ. ಶ್ರೀಪಾದ ಭಟ್ ನಿರ್ದೇಶನದ ಕಾವ್ಯರಂಗ ಕಾರ್ಯಕ್ರಮ ನಡೆಯಿತು. ನಂತರ ಪ್ರಸನ್ನ ಹೆಗ್ಗೋಡು ನಿರ್ದೇಶನದ ಮಂಗಳೂರಿನ ತರಿಕಿಟ ಕಲಾಕಮ್ಮಟದವರು ಮೆಕ್ಕಾದಾರಿ ನಾಟಕ ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

