ಸೇವೆಗೆ ಸಿದ್ಧವಾಗಿದೆ ಇನ್ಫೋಸಿಸ್ ಧರ್ಮಶಾಲೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 24
ಕಿಮ್ಸ್ಗೆ ಬರುವವರೇ ಬಡ ರೋಗಿಗಳು. ಇನ್ನು ಅವರ ಆರೈಕೆಗೆ ಬರುವ ಸಂಬಂಧಿಕರ ಆರ್ಥಿಕ ಪರಿಸ್ಥಿತಿಯೂ ಅಷ್ಟಕಷ್ಟೆ. ಇಂತಹವರು ಹಣ ಖರ್ಚು ಮಾಡಿ ಲಾಡ್ಜ್ಗಳಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ಇಂತಹವರ ಪಾಲಿಗೆ ಕಿಮ್ಸ್ ಆವರಣವೇ ನೆರಳಿನಾಸರೆ.
ಆದರೆ ಇನ್ನು ಮುಂದೆ ಕಿಮ್ಸ್ನಲ್ಲಿ ಎಲ್ಲಿ ಬೇಕೆಂದರಲ್ಲಿ ನಿದ್ರೆ ಮಾಡುತ್ತಿರುವವರ ದೃಶ್ಯ ಕಾಣಸಿಗಲಾರದು. ಏಕೆಂದರೆ ಕಿಮ್ಸ್ನಲ್ಲಿ ಬಡವರಿಗಾಗಿಯೇ 'ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲೆ' ಸಿದ್ಧವಾಗಿ ನಿಂತಿದೆ.
ಹೌದು, ಕಿಮ್ಸ್ನಲ್ಲಿ ದಾಖಲಾಗಿರುವ ರೋಗಿಗಳೊಂದಿಗೆ ಬರುವ ಬಡ ಸಂಬಂಧಿಕರು ಕಿಮ್ಸ್ ಆವರಣದಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ನಿದ್ದೆ ಮಾಡಿ ರಾತ್ರಿ ಕಳೆಯುವುದು ಮಾಮೂಲಿ. ಇಂಥವರಿಗೆಗಾಗಿಯೇ ಇನ್ಫೋಸಿಸ್ ಧರ್ಮಶಾಲೆ ನಿರ್ಮಿಸಿದೆ.
ರು. 6 ಕೋಟಿ ಕಟ್ಟಡ: ಬೆಂಗಳೂರಿನ ಕಿದ್ವಾಯಿ ಹಾಗೂ ನಿಮಾನ್ಸ್ ಮಾದರಿಯಾಗಿಟ್ಟುಕೊಂಡು ಹುಬ್ಬಳ್ಳಿಯ ಕಿಮ್ಸ್ನಲ್ಲಿಯೂ ಇಂಥದೊಂದು ಧರ್ಮಶಾಲೆಯನ್ನು ಇನ್ಫೋಸಿಸ್ ನಿರ್ಮಿಸಿದೆ. ಕಳೆದ ಮೇ 2012ರಲ್ಲಿ ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಈ ಕಟ್ಟಡ 2013 ನವೆಂಬರ್ ತಿಂಗಳಲ್ಲೇ ಪೂರ್ಣಗೊಂಡಿದ್ದು, ಇನ್ಫೋಸಿಸ್ ಸಂಸ್ಥೆ ಕಟ್ಟಡವನ್ನು ಕಿಮ್ಸ್ ನಿರ್ದೇಶಕಿ ವಸಂತಾ ಕಾಮತ್ ಅವರಿಗೆ ಹಸ್ತಾಂತರಿಸಿದೆ. ರು. 6 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ.
ಏನೇನು ಸೌಲಭ್ಯಗಳು?: ಧರ್ಮಶಾಲೆ ರೋಗಿಗಳ ಸಂಬಂಧಿಕರಿಗೆ ಮಾತ್ರ ಮೀಸಲು. ಅನ್ಯರು ಈ ಧರ್ಮಶಾಲೆಯ ಸೌಲಭ್ಯಕ್ಕೆ ಅರ್ಹರಲ್ಲ. ಸುಮಾರು 180 ಜನರು ಈ ಧರ್ಮ ಶಾಲೆಯಲ್ಲಿ ಉಳಿದುಕೊಳ್ಳಬಹುದು. 10 ಡಾರ್ಮೆಟ್ರಿಗಳಿದ್ದು ಪ್ರತಿಯೊಂದು ಡಾರಮೆಟ್ರಿಗಳಲ್ಲಿ 8 ಮಂದಿ ಉಳಿದುಕೊಳ್ಳಬಹುದು. 20 ಡಬಲ್ ಬೆಡ್ ರೂಮ್ಗಳಿವೆ. ಇವುಗಳಲ್ಲಿ ಮಂಚ, ಹಾಸಿಗೆ ಹಾಗೂ ಲಾಕರ್ ಸೌಲಭ್ಯವಿದೆ. ಸುಸಜ್ಜಿತ ಸ್ನಾನ ಗೃಹ ಹೊಂದಿದ್ದು ಗೀಸರ್ ಅಳವಡಿಸಲಾಗಿದೆ.
ದಿನದ ಬಾಡಿಗೆ ೆ 25: ಧರ್ಮ ಶಾಲೆಯಲ್ಲಿ ತಂಗುವ ರೋಗಿಗಳ ಸಂಬಂಧಿಕರಿಂದ ಅತಿ ಕಡಿಮೆ ದಿನ ಬಾಡಿಗೆ ಆಕರಿಸಲಾಗುತ್ತದೆ. ಡಾರ್ಮೆಟ್ರಿಗಳಲ್ಲಿ ಉಳಿಯುವವರಿಗೆ ದಿನಕ್ಕೆ ರು. 20ರಿಂದ ರು. 25 ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇನ್ನು ಡಬಲ್ ಬೆಡ್ರೂಮ್ಗಳ ಬೆಲೆ ಸ್ವಲ್ಪ ಹೆಚ್ಚಾಗಿರುತ್ತದೆ. ಆದರೆ ಈ ದರ ಇನ್ನೂ ನಿಗದಿಯಾಗಿಲ್ಲ. ಕಡಿಮೆ ದರದಲ್ಲಿ ವಸತಿ ಸೌಲಭ್ಯ ಸಿಗುತ್ತದೆ ಎಂದ ಮೇಲೆ ರೋಗಿಗಳ ಸಂಬಂಧಿಕರಲ್ಲದವರೂ ಇದರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹೀಗಾಗಿ ರೋಗಿಯ ಜೊತೆ ಬರುವ ಸಂಬಂಧಿಕರಿಗೆ ಈಗಾಗಲೇ ಕಿಮ್ಸ್ನಲ್ಲಿ ನೀಡಲಾಗುತ್ತಿರುವ ಪಾಸ್ ತೋರಿಸಿದರೆ ಮಾತ್ರ ವಸತಿ ಕಲ್ಪಿಸಲಾಗುವುದು. ರೋಗಿಯ ಸಂಬಂಧಿಕರು ಮೂರು ದಿನ ಮಾತ್ರ ಇಲ್ಲಿ ಉಳಿದುಕೊಳ್ಳಬಹುದು. ಆ ಬಳಿಕ ವಸತಿ ಸೌಲಭ್ಯ ನವೀಕರಣ ಮಾಡಿಸಿಕೊಳ್ಳಬೇಕು. ರೋಗಿಯ ಆರೋಗ್ಯ ಸ್ಥಿತಿ ಗಮನಿಸಿದ ಬಳಿಕ ನವೀಕರಣ ಮಾಡಲಾಗುತ್ತದೆ. ಧರ್ಮಶಾಲೆ ನಿರ್ಮಾಣಗೊಂಡು ಅದನ್ನು ಜನರಿಗೆ ಉಪಯೋಗಕ್ಕಾಗಿ ನೀಡಿದ ಮಾತ್ರಕ್ಕೆ ಮುಗಿಯಿತು ಎಂದಲ್ಲ. ಇದರ ನಿರ್ವಹಣೆ ಸವಾಲಿನ ಮಾತೇ ಸರಿ. ನಿರ್ವಹಣೆಯ ಜವಾಬ್ದಾರಿಗಾಗಿ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯಲ್ಲಿ ಇನ್ಫೋಸಿಸ್ನ ಮೂವರು ಅಧಿಕಾರಿಗಳು, ಕಿಮ್ಸ್ ನಿರ್ದೇಶಕಿ, ಮೆಡಿಕಲ್ ಸೂಪರಿಟೆಂಡೆಂಟ್, ಸ್ಥಾನಿಕ ವೈದ್ಯಾಧಿಕಾರಿ, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪ್ರತಿಷ್ಠಿತ ಮೂವರು ಸಮಿತಿಯಲ್ಲಿರುತ್ತಾರೆ. ಇಷ್ಟರಲ್ಲಿಯೇ ಸಮಿತಿ ರಚನೆಯಾಗಲಿದೆ. ಬಡವರ ಪಾಲಿಗೆ ಸಂಜೀವಿನಿಯಾಗಿರುವ ಕಿಮ್ಸ್ ಇದೀಗ ರೋಗಿಗಳ ಸಂಬಂಧಿಕರಿಗೂ ಅನುಕೂಲವಾಗಲಿದೆ. ಕಿಮ್ಸ್ಗೆ ಬರುವ ರೋಗಿಗಳ ಸಂಬಂಧಿಕರು ಸುಸಜ್ಜಿತ ವ್ಯವಸ್ಥೆಯಲ್ಲಿ ಕೈಗೆಟಕುವ ದರದಲ್ಲಿ ಈ ಧರ್ಮಶಾಲೆಯಲ್ಲಿ ಉಳಿದುಕೊಳ್ಳಲಿದ್ದಾರೆ.
ಶೀಘ್ರ ಉದ್ಘಾಟನೆ
ಸಕಲ ವ್ಯವಸ್ಥೆಯೊಂದಿಗೆ ಧರ್ಮ ಶಾಲೆ ಸೇವೆಗೆ ಸಿದ್ಧವಾಗಿ ನಿಂತಿದೆ. ಇದರ ಉದ್ಘಾಟನಾ ಸಮಾರಂಭವೊಂದೇ ಬಾಕಿ ಉಳಿದುಕೊಂಡಿದೆ. ಸುಧಾಮೂರ್ತಿಯವರನ್ನು ಉದ್ಘಾಟನೆಗೆ ಆಹ್ವಾನಿಸಲಾಗುತ್ತಿದೆ. ಒಂದೊಮ್ಮೆ ಅವರು ಅನುಮತಿ ನೀಡಿದಲ್ಲಿ ಜನರಿಗೆ ಸೇವೆ ಕಲ್ಪಿಸುವ ಕಾರ್ಯ ತಕ್ಷಣವೇ ಆರಂಭಿಸಿ, ಆ ಬಳಿಕ ಉದ್ಘಾಟನಾ ಸಮಾರಂಭ ನೆರವೇರಿಸಲಾಗುವುದು. ಯಾವುದಕ್ಕೂ ಇಷ್ಟರಲ್ಲಿಯೇ ಉದ್ಘಾಟನಾ ದಿನಾಂಕ ನಿರ್ಧಾರವಾಗಲಿದೆ.
ಊಟವೂ ಸಿಗಲಿದೆ...
ಕಡಿಮೆ ದರದಲ್ಲಿ ವಸತಿ ವ್ಯವಸ್ಥೆ ನೀಡಲು ಮುಂದಾಗಿರುವ ಕಿಮ್ಸ್ ಹಾಗೂ ಇನ್ಫೋಸಿಸ್, ರೋಗಿಗಳ ಸಂಬಂಧಿಕರಿಗೆ ಕಡಿಮೆ ದರದಲ್ಲಿ ಆಹಾರ ನೀಡುವ ಕುರಿತು ಚಿಂತನೆ ನಡೆಸಿದೆ. ಈಗಾಗಲೇ ಧರ್ಮಶಾಲೆ ಆವರಣದಲ್ಲಿ ಅಡುಗೆ ಮನೆ ನಿರ್ಮಿಸಲಾಗಿದೆ. ಅಲ್ಲದೇ ಹಸಿದವರಿಗೆ ಆಹಾರ ನೀಡುವ ಸೇವೆ ಕಾರ್ಯ ಮಾಡುತ್ತಿರುವ ಜೈನ್ ಅಸೋಸಿಯೇಶನ್ಗೆ ಊಟ ನೀಡುವ ಜವಾಬ್ದಾರಿ ವಹಿಸಿಕೊಳ್ಳುವಂತೆ ಕಿಮ್ಸ್ ನಿರ್ದೇಶಕಿ ಡಾ. ಕಾಮತ್ ಕೋರಿದ್ದಾರೆ. ಇಷ್ಟರಲ್ಲಿಯೇ ಜೈನ್ ಅಸೋಸಿಯೇಶನ್ ತನ್ನ ನಿರ್ಧಾರ ತಿಳಿಸಲಿದೆ.
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

