ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ
ಹುಬ್ಬಳ್ಳಿ: ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಒಳ ಒಪ್ಪಂದ ವಿರೋಧಿಸಿ ಹಾಗೂ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ರಾತ್ರೋರಾತ್ರಿ ಅಕ್ರಮವಾಗಿ ಮೆಡಿಕಲ್ ಪಿಜಿಸಿಇಟಿ ನಡೆಸಿರುವ ಹಾಗೂ ಖಾಸಗಿ ಕಾಲೇಜುಗಳಿಗೆ ಅಮೂಲ್ಯ ಸೀಟುಗಳನ್ನು ಹಿಂದಿರುಗಿಸಿರುವ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕೊನೆಯ ಹಂತಕ್ಕೆ ಕೌನ್ಸೆಲಿಂಗ್ಗೆ ಬಂದರೂ ಕಳೆದ ಬಾರಿಗಿಂತ 1,650ಕ್ಕೂ ಹೆಚ್ಚಿನ ಮೆಡಿಕಲ್ ಸೀಟುಗಳು ಪ್ರಕ್ರಿಯೆಯಲ್ಲಿ ಬಂದಿಲ್ಲ. ಎಲ್ಲ ಮೆಡಿಕಲ್ ಸೀಟುಗಳನ್ನು ತಕ್ಷಣ ಸಿಇಟಿಯ ಜು. 17ರ ಸುತ್ತಿನಲ್ಲಿ ಸೇರಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಐಚ್ಛಿಕ ಪ್ರವೇಶಕ್ಕೆ ಹೆಚ್ಚಿನ ಅವಕಾಶ ಕೊಡಬೇಕು. ವಿದ್ಯಾರ್ಥಿಗಳ ಪರವಾದ ಆಫ್ಲೈನ್ ಕೌನ್ಸೆಲಿಂಗ್ ನಡೆಸಬೇಕು ಎಂದು ಮನವಿ ಮಾಡಿದರು. ಎಬಿವಿಪಿ ನಗರ ಕಾರ್ಯದರ್ಶಿ ಸಿದ್ದು ಸಾಲಿಮಠ, ತೇಜಸ್ ಗೋಕಾಕ, ಸುಚಿತ ಬುಳ್ಳಾನವರ, ಬಸವೇಶ ಕೋರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಿರಿಯ ನಾಗರಿಕರ ರಕ್ಷಣೆ ಸರ್ಕಾರದ ಹೊಣೆ: ಬಕ್ಕಾಯಿ
ಧಾರವಾಡ: ಹಿರಿಯ ನಾಗರಿಕರ ಸಂರಕ್ಷಣೆಯನ್ನು ಸರ್ಕಾರವೇ ಮಾಡಬೇಕೆಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಲಕ್ಷ್ಮಣ ಬಕ್ಕಾಯಿ ಹೇಳಿದರು. ನಿವೃತ್ತ ನೌಕರರ ಸಭಾಭವನದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ರೈಲ್ವೆ ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ಶೇ. 25ರಷ್ಟು ದರ ವಿನಾಯಿತಿ ನೀಡಲಾಗಿದೆ. ಎಲ್ಲ ರೈಲು ನಿಲ್ದಾಣಗಳಲ್ಲಿ ವೃದ್ಧರಿಗೆ ಹಾಗೂ ವಿಕಲಾಂಗರಿಗೆ ಉಪಯೋಗಿಸಲು ತ್ರಿಚಕ್ರ ವಾಹನವನ್ನು ಉಚಿತವಾಗಿ ನೀಡಲಾಗಿದೆ. ಸರ್ಕಾರ ವೃದ್ಧರಿಗೆ ಇನ್ನಷ್ಟು ಯೋಜನೆ ನೀಡಬೇಕೆಂದು ಬಕ್ಕಾಯಿ ಒತ್ತಾಯಿಸಿದರು. ಬೌದ್ಧಿಕ ಪಲಾಯನ, ವೃತ್ತಿ ಶಿಕ್ಷಣ ಮತ್ತು ಉತ್ಪಾದನೆಗೆ ಮರುಳಾದ ಯುವ ಜನಾಂಗ ವಿದೇಶಗಳಲ್ಲಿ ಉದ್ಯೋಗ ಅರಸುತ್ತಿದೆ. ಹೆತ್ತವರನ್ನು ಕಡೆಗಣಿಸುತ್ತಿದ್ದಾರೆ. ಇಳಿವಯಸ್ಸಿನಲ್ಲಿ ತಂದೆ-ತಾಯಿ ನಿರ್ಗತಿಕರಾಗಿ, ನಿಕೃಷ್ಟ ಜೀವನ ನಡೆಸುವ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವುದು ದುರಂತ ಎಂದರು.
ಗ್ರಂಥಾಲಯ ಸಹಾಯಕರ ಹುದ್ದೆಗೆ ಅರ್ಜಿ
ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರಿತ ಗ್ರಂಥಾಲಯ ಸಹಾಯಕರು 1 ವರ್ಷದ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಜು. 30ರಂದು ಮುಂಜಾನೆ 10ಕ್ಕೆ ಕೃಷಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳ ಮೂರು ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಬೇಕು. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು. ವಿಶ್ವವಿದ್ಯಾಲಯ ಮಟ್ಟದ ಗ್ರಂಥಾಲಯದಲ್ಲಿ ಕೆಲಸ ಮಾಡಿ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೃಷಿ ವಿ.ವಿ. ಗ್ರಂಥಪಾಲಕರು ತಿಳಿಸಿದ್ದಾರೆ.
ಪತ್ರಕರ್ತರ ಮೇಲೆ ಹಲ್ಲೆ: ಖಂಡನೆ
ಧಾರವಾಡ: ಖಾಸಗಿ ಸುದ್ದಿವಾಹಿನಿಯೊಂದರ ದಾವಣಗೆರೆ ವರದಿಗಾರ ಹಾಗೂ ಛಾಯಾಚಿತ್ರಗ್ರಾಹಕನ ಮೇಲೆ ನಡೆದ ಹಲ್ಲೆ ಖಂಡಿಸಿ ಧಾರವಾಡ ಪತ್ರಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸುದ್ದಿವಾಹಿನಿಯ ವರದಿಗಾರ, ಛಾಯಾಚಿತ್ರಗ್ರಾಹಕ ಶನಿವಾರ, ಖಾಸಗಿ ವಸತಿಯುತ ಶಾಲೆಗೆ ವರದಿಗೆ ತೆರಳಿದ್ದಾಗ ಆಡಳಿತ ಮಂಡಳಿಯ ಕೆಲವರು ಹಲ್ಲೆ ನಡೆಸಿ, ಕ್ಯಾಮೆರಾ ಜಖಂಗೊಳಿಸಿದ್ದಾರೆ. ಹಲ್ಲೆ ನಡೆಸಿದವರನ್ನು ಬಂಧಿಸಬೇಕು. ಹಾನಿಗೊಳಗಾದ ಕ್ಯಾಮೆರಾ ದುರಸ್ತಿ ವ್ಯವಸ್ಥೆ ಮಾಡಲು ಒತ್ತಡ ಹೇರಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆಯವರಿಗೆ ಸಲ್ಲಿಸಿದ ಮನವಿಯಲ್ಲಿ ಪತ್ರಕರ್ತರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

