ಎರಡನೇ ಮಹಿಳಾ ಅಧ್ಯಕ್ಷರಾಗಿ ಪ್ರೊ. ಮಾಲತಿ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 5
ಎಂಟು ಕವನ ಸಂಗ್ರಹ, ಮೂರು ಕಥಾ ಸಂಗ್ರಹ, ಎರಡು ವಿಮರ್ಶಾ ಗ್ರಂಥ, ಎರಡು ಮಕ್ಕಳ ಸಾಹಿತ್ಯ ಕೃತಿ, ನಾಲ್ಕು ಸಂಪಾದಿತ ಗ್ರಂಥಗಳ ರಚನೆ ಹಾಗೂ 34 ವರ್ಷಗಳ ಪ್ರಾಧ್ಯಾಪಕ ವೃತ್ತಿಯೊಂದಿಗೆ ಇಂದಿಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಇದೀಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ಸಾಹಿತ್ಯ ಅಕಾಡೆಮಿ ಇತಿಹಾಸದಲ್ಲಿ ಮೊದಲ ಬಾರಿ ಮಹಿಳಾ ಅಧ್ಯಕ್ಷರಾಗಿದ್ದು ಗೀತಾ ನಾಗಭೂಷಣ. ನಂತರದಲ್ಲಿ ಈ ಸ್ಥಾನ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರಿಗೆ ಲಭಿಸಿದೆ.
ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಖಾಲಿ ಉಳಿದಿದ್ದ ಸಾಹಿತ್ಯ ಅಕಾಡೆಮಿಯ ಜವಾಬ್ದಾರಿಯನ್ನು 3 ವರ್ಷಗಳ ಅವಧಿಯಲ್ಲಿ ಯಾವ ರೀತಿ ನಿಭಾಯಿಸುತ್ತಾರೆ? ಮುಂದಿನ ಯೋಜನೆಗಳಾವವು? ಹಾಗೂ ಅಕಾಡೆಮಿ ಮುಂದಿರುವ ಸವಾಲುಗಳ ಕುರಿತಾಗಿ ಪ್ರೊ. ಮಾಲತಿ ಪಟ್ಟಣಶೆಟ್ಟಿ 'ಕನ್ನಡಪ್ರಭ' ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಶ್ನೆ-ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ ನಿರೀಕ್ಷಿತವೇ?
ಪ್ರೊ. ಮಾಲತಿ- ಅನಿರೀಕ್ಷಿತ. ಆಶ್ಚರ್ಯ ಹಾಗೂ ಸಂತೋಷವನ್ನೂ ತಂದಿದೆ. ರಾಜ್ಯ ಸರ್ಕಾರ ನನ್ನಲ್ಲಿಟ್ಟಿದ್ದ ವಿಶ್ವಾಸ, 'ಇವಳು ಸಾಹಿತ್ಯ ಅಕಾಡೆಮಿಗೆ ಅರ್ಹಳು' ಎಂದು ಆಮಂತ್ರಿಸಿದ್ದು ನನಗೆ ಬಹುಮಾನ ನೀಡಿದಷ್ಟು ಸಂತಸ ತಂದಿದೆ. ಅಕಾಡೆಮಿಯ ಸಮಾರಂಭಗಳಲ್ಲಿ ಮಹಿಳೆಯರಿಗೆ ಹಾಗೂ ಯುವ ಸಾಹಿತಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೇನೆ. ಹಿರಿಯ ಸಾಹಿತಿಗಳ ಸೂಕ್ತ ಮಾರ್ಗದರ್ಶನದ ಮೇಲೆ ಅಕಾಡೆಮಿಯನ್ನು ಮುಂದುವರೆಸುತ್ತೇನೆ.
ಪ್ರಶ್ನೆ-ಸಾಹಿತ್ಯ ಅಕಾಡೆಮಿ ಮುಂದಿರುವ ಸವಾಲುಗಳು?
ಪ್ರೊ. ಮಾಲತಿ- ಕಳೆದ ಎರಡು ವರ್ಷಗಳಿಂದ ಅಕಾಡೆಮಿ ಅಧ್ಯಕ್ಷರ ನೇಮಕವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಬಾಕಿ ಕೆಲಸಗಳಿದ್ದು, ಅಕಾಡೆಮಿ ನೀಡುವ ಪ್ರಶಸ್ತಿ ವಿತರಣೆ, ನಿಧಾನಗತಿಯಲ್ಲಿ ಸಾಗುತ್ತಿರುವ ಅಕಾಡೆಮಿ ವೆಬ್ಸೈಟ್ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ, ಅಕಾಡೆಮಿ ಪ್ರಕಟಿಸುವ ನಿಯತಕಾಲಿಕೆಗಳ ಪ್ರಕಟಣೆ ಮಾಡಲಾಗುವುದು. ಮೂರು ವರ್ಷಗಳ ಅವಧಿಯಲ್ಲಿ ಅಕಾಡೆಮಿ ಮಾಡಬೇಕಾದ ಪ್ರಮುಖ ಕಾರ್ಯ ಯೋಜನೆಗಳ ಸಿದ್ಧಪಡಿಸುವುದೇ ನನ್ನ ಮುಂದಿನ ಪ್ರಮುಖ ಸವಾಲುಗಳು.
ಪ್ರಶ್ನೆ-ಅಕಾಡೆಮಿಗೆ ಹೆಚ್ಚಿನ ಸಂಖ್ಯೆ ಯುವ ಸಾಹಿತಿಗಳೇ ಸದಸ್ಯರಿದ್ದು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೀರಿ?
ಪ್ರೊ. ಮಾಲತಿ- 70ರ ಗಡಿ ದಾಟಿದರೂ ಇವತ್ತಿಗೂ ಕ್ರಿಯಾಶೀಲತೆಯಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದೇನೆ. ಕೆಲಸ ಮಾಡಬೇಕೆಂಬ ಮನಸ್ಸಿದ್ದರೆ ವಯಸ್ಸು ಅಡ್ಡಿಯಾಗಲ್ಲ. ನನ್ನ ಯೋಜನೆ, ಯೋಚನೆಗಳೊಂದಿಗೆ ಉತ್ಸಾಹಿ ಯುವ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಿ, ರಾಜ್ಯದ ಎಲ್ಲೆಡೆ ಯುವ ಸಮ್ಮೇಳನ ಮಾಡಬೇಕೆಂಬ ಕನಸಿದೆ.
ಪ್ರಶ್ನೆ-ಸಾಹಿತ್ಯ ಅಕಾಡೆಮಿ ಬೆಳವಣಿಗೆಗೆ ಹೇಗೆ ಯೋಜನೆ ರೂಪಿಸುತ್ತೀರಿ?
ಪ್ರೊ. ಮಾಲತಿ- ನನ್ನ ಯೋಚನೆಗಳೊಂದಿಗೆ ಅಕಾಡೆಮಿ ಸದಸ್ಯರು ಆಶಯಗಳನ್ನು ಕ್ರೋಡೀಕರಿಸಿ ಅವರ ಜೊತೆಗಿದ್ದು, ಯೋಜನೆಗಳನ್ನು ರೂಪಿಸುತ್ತೇನೆ. ಇದಕ್ಕಿಂತ ಮುಖ್ಯವಾಗಿ ರಾಜ್ಯದ ಎಲ್ಲ ಸಾಹಿತಿಗಳಿಗೆ ಪತ್ರ ಮುಖೇನ ಸಲಹೆ-ಸೂಚನೆ ಹಾಗೂ ಮಾರ್ಗದರ್ಶನ ಕೇಳಿ ಪಡೆಯುತ್ತೇನೆ. ಈಗಾಗಲೇ ನಮಗೆ ಹಿತಚಿಂತಕರು, ಸಾಹಿತಿಗಳು ಭರವಸೆ ನೀಡಿದ್ದು, ಅಕಾಡೆಮಿಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುವ ಆತ್ಮವಿಶ್ವಾಸ ನನಗಿದೆ.
ಪ್ರಶ್ನೆ-ಕನ್ನಡ ಇನ್ನಷ್ಟು ಬೆಳೆಸಲು ಅಕಾಡೆಮಿ ತೆಗೆದುಕೊಳ್ಳುವ ನಿಲುವೇನು?
ಪ್ರೊ. ಮಾಲತಿ- ಕನ್ನಡಕ್ಕಿರುವ ಜ್ವಲಂತ ಸಮಸ್ಯೆ ಇದು. ಗ್ರಾಮೀಣ ಪ್ರದೇಶದಲ್ಲಾದರೂ ಕನ್ನಡ ಉಳಿದೀತು ಅಂದುಕೊಂಡಿದ್ದೆ. ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿದ್ದು, ಗ್ರಾಮೀಣರು ಸಹ ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತ ಹೊರಳುತ್ತಿದ್ದಾರೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆಯಾಗಿದ್ದರೂ ಪಾಲಕರು ತಮ್ಮ ಮಕ್ಕಳಿಗೆ ಮೊದಲು ಕನ್ನಡ ಉಣಬಡಿಸಿ ನಂತರದಲ್ಲಿ ಇಂಗ್ಲಿಷ್ ಉಣಿಸಲಿ. ಈ ನಿಟ್ಟಿನಲ್ಲಿ ಅಕಾಡೆಮಿಯ ಕಾರ್ಯಕ್ರಮಗಳಿಗೆ ರಾಜ್ಯದ ವಿವಿಧೆಡೆ ಹೋದ ಸಂದರ್ಭ ಪಾಲಕರ ಜತೆ ಚರ್ಚೆ ನಡೆಸಿ ಆದಷ್ಟು ಮಟ್ಟಿಗೆ ಪಾಲಕರಿಗೆ ತಿಳಿವಳಿಕೆ, ಅರಿವು ಮೂಡಿಸುವ ಕೆಲಸ ಮಾಡಲಾಗುವುದು.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು 1940ರಲ್ಲಿ ಜನಿಸಿದ್ದು, ಧಾರವಾಡದಲ್ಲಿ ಶಿಕ್ಷಣ ಪೂರೈಸಿದರು. ಬಿಎ ಹಾಗೂ ಎಂಎ ಪದವಿಗಳನ್ನು ಆಂಗ್ಲ ಸಾಹಿತ್ಯದಲ್ಲಿ ಪೂರೈಸಿದರು. ರಾಜ್ಯದ ವಿವಿಧ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮುಗಿಸಿ ಧಾರವಾಡದ ಜೆಎಸ್ಸೆಸ್ ಕಾಲೇಜು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿಯಾದರು. 1975ರಿಂದ ಇವರ ಸಾಹಿತ್ಯ ಕೃಷಿ ಆರಂಭ. ಮೊದಲ ಕವನ ಸಂಕಲನ ಬಾ ಪರೀಕ್ಷೆಗೆ 1976ರಲ್ಲಿ ಪ್ರಕಟ. ಹೀಗೆ ಕಥೆ, ಸಂಪಾದನೆ, ವಿಮರ್ಶೆ ಹಾಗೂ ಮಕ್ಕಳ ಸಾಹಿತ್ಯವನ್ನೂ ಬರೆದಿದ್ದಾರೆ. ರಾಜ್ಯ ಅಕಾಡೆಮಿ ಗೌರವ ಪುರಸ್ಕಾರ, ರತ್ನಮ್ಮ ಹೆಗ್ಗಡೆ ಕಾವ್ಯ ಪುರಸ್ಕಾರ, ಗೋರೂರು ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಕೇಂದ್ರ, ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಾಧ್ಯಕ್ಷ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕರ್ನಾಟಕ ಸಾಹಿತ್ಯ ಅಕಾಡೆಮಿ ಎರಡನೆಯ ಮಹಿಳಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

