ಖಾಸಗಿ ಎಪಿಎಂಸಿ; ರೈತರು, ಗ್ರಾಹಕರಿಗೆ ಕಸಿವಿಸಿ
-ಸತೀಶ ಪಾಗಾದ
ಕ.ಪ್ರ.ವಾರ್ತೆ ಹುಬ್ಬಳ್ಳಿ ಮಾ. 14
ಕೃಷಿ ಮಾರುಕಟ್ಟೆ ಕ್ಷೇತ್ರ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿರುವ ಕೃಷಿ ಉತ್ಪನ್ನ ಮಾರಾಟ ತಿದ್ದುಪಡಿ ಕಾಯ್ದೆ, ಒಂದು ಕಡೆ ರಾಜ್ಯದ ಎಪಿಎಂಸಿಗಳ ಮೇಲೆ ಗದಾಪ್ರಹಾರ ಮಾಡಲಿದ್ದು, ಇನ್ನೊಂದು ಕಡೆ ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಮುಂದಾಗಿದೆ.
ಕಳೆದ ಜನವರಿಯಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿದ ಕೃಷಿ ಉತ್ಪನ್ನ ಮಾರಾಟ ತಿದ್ದುಪಡಿ ಕಾಯ್ದೆಯಿಂದ ರಾಜ್ಯದಲ್ಲಿ ಎಲ್ಲಿ ಬೇಕಾದಲ್ಲಿ ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಹುಟ್ಟು ಹಾಕಲು ಅವಕಾಶ ಕಲ್ಪಿಸಲಾಗಿದೆ. ಈ ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಇಳಿಯುವ ವರ್ತಕರ ಮೇಲೆ ಸ್ಥಳೀಯ ಎಪಿಎಂಸಿಯ ಹಿಡಿತವಿಲ್ಲ. ಖಾಸಗಿ ಕೃಷಿ ಮಾರುಕಟ್ಟೆಯ ವರ್ತಕರು ಶೇ.2ರಷ್ಟು ಸೆಸ್ನ್ನು ಎಪಿಎಂಸಿಗೆ ಪಾವತಿಸಿದರೆ ಮುಗಿಯಿತು. ಒಟ್ಟಾರೆ ಖಾಸಗಿ ಕೃಷಿ ಮಾರುಕಟ್ಟೆಯಲ್ಲಿ ನಡೆಯುವ ವ್ಯವಹಾರದ ಮೇಲೆ ಎಪಿಎಂಸಿ ಕಣ್ಣಿಡುವಂತಿಲ್ಲ. ವ್ಯಾಪಾರ ಪರವಾನಗಿ, ಲೆಕ್ಕಪತ್ರ ಪರಿಶೋಧನೆ, ಗೋದಾಮು ಸಂಗ್ರಹ ಹಾಗೂ ವ್ಯಾಪಾರಿಗಳ ಮೇಲೆ ಕೃಷಿ ಇಲಾಖೆ ನಿರ್ದೇಶಕರ ಹಿಡಿತವಿರುತ್ತದೆ.
ಇಬ್ಬರಿಗೂ ಲಾಭವಾಗಲ್ಲ: ಸಾಂಪ್ರದಾಯಿಕವಾಗಿ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರೈತರಿಂದ ಕೃಷಿ ಉತ್ಪನ್ನ ಖರೀದಿಸಿ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ನಂತರ ಸಗಟು ವ್ಯಾಪಾರಿಗಳಿಂದ ಚಿಲ್ಲರೆ ವ್ಯಾಪಾರಸ್ಥರ ಮುಖಾಂತರ ಅದೇ ಉತ್ಪನ್ನ ಗ್ರಾಹಕರ ಕೈಸೇರುತ್ತದೆ. ಈ ವ್ಯವಸ್ಥೆಯಲ್ಲಿ ರೈತರು ಮತ್ತು ಗ್ರಾಹಕರು ಇಬ್ಬರಿಗೂ ಲಾಭವಾಗುವುದಿಲ್ಲ. ಈ ರೈತ, ವ್ಯಾಪಾರಿ, ಗ್ರಾಹಕ ವ್ಯವಸ್ಥೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿದ ತಿದ್ದುಪಡಿ ಕಾಯ್ದೆ ಇಡೀ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಖಾಸಗಿಗೆ ಹಸ್ತಾಂತರಿಸಲಿದೆ. ಮೇಲಾಗಿ ರೈತರ ಉತ್ಪನ್ನಗಳ ಬೆಲೆ ನಿಗದಿ, ತೂಕಕ್ಕೆ ಸಂಬಂಧಿಸಿ ಉದ್ಭವಿಸುವ ವಿವಾದಗಳನ್ನು ಪರಿಹರಿಸುವಲ್ಲಿ ಎಪಿಎಂಸಿಗೆ ಯಾವುದೇ ಅಧಿಕಾರ ಇಲ್ಲ!
ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಬದಲಿಗೆ ರೈತಾಪಿ ವರ್ಗ ಇನ್ನಷ್ಟು ಸಮಸ್ಯೆಗೆ ಸಿಲುಕಲಿದೆ. ತಿದ್ದುಪಡಿ ಕಾಯ್ದೆಯಲ್ಲಿ ಇನ್ನೂ ಅನೇಕ ಅಂಶಗಳಿದ್ದು, ಅವುಗಳ ಜಾರಿ ಕುರಿತು ಸರ್ಕಾರ ಸ್ಪಷ್ಟ ನೀತಿ ರೂಪಿಸಿಲ್ಲ. ಇದರಿಂದಾಗಿ ಕಾಯ್ದೆ ಕುರಿತು ಎಪಿಎಂಸಿ ಪ್ರತಿನಿಧಿಗಳಲ್ಲೂ ಗೊಂದಲವಿದೆ.
ಹೂವು, ಹಣ್ಣು ತರಕಾರಿಗೆ ವಿನಾಯಿತಿ: ಕೃಷಿ ಉತ್ಪನ್ನ ಮಾರಾಟ ತಿದ್ದುಪಡಿ ಕಾಯ್ದೆ 2013ರಲ್ಲಿ ಎಪಿಎಂಸಿ ಅಧಿಸೂಚಿತ ಪಟ್ಟಿಯಿಂದ ಹೂವು, ಹಣ್ಣು ಮತ್ತು ತರಕಾರಿಗಳನ್ನು ಕೈಬಿಡಲಾಗಿದೆ. ರೈತರು ಮತ್ತು ಗ್ರಾಹಕರ ಮಧ್ಯೆ ನೇರ ವಹಿವಾಟು ನಡೆಯಲಿ ಎನ್ನುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅಧಿಸೂಚಿತ ಪಟ್ಟಿಯಿಂದ ವಿನಾಯಿತಿ ಪಡೆದ ಸಾಮಗ್ರಿಗಳನ್ನು ಖರೀದಿಸುವ ವ್ಯಕ್ತಿಗಳಿಂದ ಬಳಕೆ ಶುಲ್ಕ ಆಕರಿಸಿ ಅದನ್ನು ಎಪಿಎಂಸಿಗೆ ಪಾವತಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಅನುಷ್ಠಾನದಲ್ಲಿ ಗೊಂದಲವಿದೆ. ರೈತನೊಬ್ಬ ತಾನು ಬೆಳೆದ ತರಕಾರಿಯನ್ನು ಬೇಕಾದಲ್ಲಿ ಮಾರುವುದಕ್ಕೆ ಕಾಯ್ದೆ ಅವಕಾಶ ನೀಡುತ್ತದೆ. ಆದರೆ ಬಳಕೆ ಶುಲ್ಕ ಪಾವತಿ ಹೇಗೆ?
ರೈತರ ಹಿತ ಗಮನದಲ್ಲಿಟ್ಟುಕೊಂಡು ಈ ಮಸೂದೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅದರ ಜಾರಿಗೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಹೂವು, ಹಣ್ಣು ಮತ್ತು ತರಕಾರಿ ಮೇಲೆ ವಿಧಿಸಿರುವ ಬಳಕೆ ಶುಲ್ಕ ಇನ್ನೂ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಬಳಕೆ ಶುಲ್ಕವನ್ನು ಶೇ.1.5ರಷ್ಟು ನಿಗದಿಯಾಗಬಹುದು. ಖಾಸಗಿ ಕೃಷಿ ಮಾರುಕಟ್ಟೆ ಸ್ಥಾಪನೆ ನಿರ್ವಹಣೆಗೆ ಸಂಬಂಧಿಸಿ ವಿಶೇಷಾಧಿಕಾರಿಯನ್ನು ನೇಮಕ ಮಾಡಿದೆ. ಅಲ್ಲಿಗೆ ಎಲ್ಲ ಪ್ರಕ್ರಿಯೆ ಸ್ಥಗಿತಗೊಂಡಿದೆ.
ಕಳೆದ ಜನವರಿಯಲ್ಲಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಉತ್ಪನ್ನ ಮಾರಾಟ ತಿದ್ದುಪಡಿ ಕಾಯ್ದೆಯಲ್ಲಿ ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಾಪಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಕೃಷಿ ಉತ್ಪನ್ನ ಮಾರುಕಟ್ಟೆಗಳ ಮೇಲೆ ಎಪಿಎಂಸಿ ನಿಯಂತ್ರಣ ಇರುವುದಿಲ್ಲ. ಅಲ್ಲಿ ನಡೆಯುವ ವ್ಯವಹಾರ, ರೈತರಿಗೆ ಆಗುವ ಮೋಸದ ಕುರಿತು ಎಪಿಎಂಸಿಗೆ ಮಾಹಿತಿಯೇ ಇರುವುದಿಲ್ಲ. ರೈತರು ಮತ್ತು ವ್ಯಾಪಾರಿಗಳ ಮಧ್ಯೆ ಕೃಷಿ ಉತ್ಪನ್ನಗಳ ಬೆಲೆಯ ಬಗ್ಗೆ ಸಮಸ್ಯೆಯಾದರೆ, ಅಧಿಕಾರಿಗಳೇ ಪರಿಹರಿಸಬೇಕು. ಪರವಾನಗಿ ನೀಡುವುದಕ್ಕೆ ಎಪಿಎಂಸಿಗೆ ಅಧಿಕಾರ ನೀಡಿಲ್ಲ.
-ಸುರೇಶ ದಾಸನೂರ, ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

