ಧಾರವಾಡ

ಖಾತ್ರಿಯಲ್ಲಿ ಅವ್ಯವಹಾರ ಖಾತ್ರಿ

Published On :

-ಶೀತಲ ಎಸ್.ಮುರಗಿ
ಕನ್ನಡಪ್ರಭ ವಾರ್ತೆ, ಕುಂದಗೋಳ, ಮಾ. 20
ತಾಲೂಕಿನ ಕಳಸ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆದಿದ್ದು, ದುರ್ಬಳಕೆ ಮಾಡಿಕೊಂಡಿರುವ ರು. 11,64,400 ಹಣವನ್ನು 60 ದಿನಗಳಲ್ಲಿ ಮರಳಿಸಬೇಕು ಎಂದು ಒಂಬುಡ್ಸ್‌ಮನ್ ಕೋರ್ಟ್ ಆದೇಶಿಸಿದೆ.
ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಅವ್ಯವಹಾರದ ಬಗ್ಗೆ  ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದು ಜಿಲ್ಲಾ ಒಂಬುಡ್ಸಮನ್ ಕೋರ್ಟ್‌ಗೆ ದೂರು ದಾಖಲಿಸಲಾಗಿತ್ತು.
ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಪಿಡಿಒ ಹಾಗೂ ಗ್ರಾಪಂ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 60 ದಿನಗಳಲ್ಲಿ ದುರ್ಬಳಕೆಯಾಗಿರುವ ಹಣ ಮರುಪಾವತಿಸದಿದ್ದರೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶಿಸಿದೆ.
ಗ್ರಾಮದ ಸುರೇಶ ಕಳಸೂರ ಎಂಬುವವರು 2010-11 ಸಾಲಿನಲ್ಲಿ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಡಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಪಡೆದುಕೊಂಡಾಗ ಬಹುತೇಕ ಕಾಮಗಾರಿಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಣ ಲಪಟಾಯಿಸಿರುವುದು ಸಾಬೀತಾಗಿದೆ.
ಅವ್ಯವಹಾರದ ಕುರಿತು ಮೊದಲು ತಾಪಂ ಮತ್ತು ಜಿಪಂ ಅಧಿಕಾರಿಗಳು ಕಾಮಗಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವ್ಯವಹಾರ ನಡೆದಿರುವುದು ಸತ್ಯ ಎಂದು ಧಾರವಾಡದ ಒಂಬುಡ್ಸ್‌ಮನ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಒಟ್ಟು 55 ಕಾಮಗಾರಿಗಳ ಪೈಕಿ 38 ಕಾಮಗಾರಿಗಳು ಆಗದಿರುವುದು ಸಾಬೀತಾಗಿದೆ.  38 ಕಾಮಗಾರಿ ಹೆಸರಿನಲ್ಲಿ ಎತ್ತಿರುವ ಹಣವನ್ನು  ಆರೋಪಿಗಳಿಂದ ವಸೂಲಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಕಳಸದ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಉಡಾದಾರ ರು. 2,43,421,  ಮತ್ತೋರ್ವ ಅಧ್ಯಕ್ಷ ಎಚ್.ಕೆ.ಬಾವಿಕಟ್ಟಿ ರು. 86,116, ಬಿ.ವಿ. ತಳವಾರ ರು. 12,624, ಎನ್.ಎಂ. ಬಾರಕೇರ ರು. 43,650, ಅಂದಿನ ಪಿಡಿಓಗಳಾದ ಮಾಸಮಡ್ಡಿ (ಹಾಲಿ ಹುಬ್ಬಳ್ಳಿ ಗ್ರಾಮೀಣ ಪಿಡಿಓ) ರು. 12,601, ಎಸ್.ವಿ. ಕಾಯಕದ ರು. 3,81,879, ರತ್ನಾಕರ ರು. 17,533, ಕುಂದಗೋಳ ಸಹಾಯಕ ತೋಟಗಾರಿಕಾ ಅಧಿಕಾರಿ ವಿಜಯಕುಮಾರ ರು. 2,23,209, ಮತ್ತೋರ್ವ ಸಹಾಯಕ ತೋಟಗಾರಿಕಾ ಅಧಿಕಾರಿ ವಿನಾಯಕ ರೆಡ್ಡಿ ರು. 1,03,449 ಸಹಾಯಕ ಕೃಷಿ ಅಧಿಕಾರಿ ಎನ್.ಎಂ.ಯರಗಟ್ಟಿ ರು. 38,918 ಸೇರಿ ಒಟ್ಟು 11,64,400 ನಗದನ್ನು ನ್ಯಾಯಾಲಯದ ಆದೇಶದ 60 ದಿನಗಳೊಳಗೆ ಖಾತ್ರಿ ನಿಧಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಖಾಂತರ ಪಾವತಿಸಲು ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.