ಪ್ರಶಸ್ತಿಗಳಿಂದ ನೈತಿಕ ಬೆಂಬಲ: ಡಾ. ತರೀಕೆರೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 23
ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಬರಹಗಾರರು ಅತ್ಯುತ್ತಮ ಸಾಹಿತ್ಯ ರಚಿಸುತ್ತಿದ್ದಾರೆ ಎಂದು ಲೇಖಕ ಡಾ. ರಹಮತ್ ತರೀಕೆರೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಹಾನಗಲ್‌ನ ಕನ್ನಡ ಯುವಜನ ಕ್ರಿಯಾ ಸಮಿತಿ ಏರ್ಪಡಿಸಿದ್ದ 2013ನೇ ಸಾಲಿನ ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಹಾಗೂ ನಾ.ಡಿಸೋಜ- ಎಚ್.ಎಸ್. ವೆಂಕಟೇಶಮೂರ್ತಿ ಪುಟಾಣಿ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಯುವ ಕಥೆಗಾರರ ಎದುರು ಹೊಸ ಕಥನ ಕ್ರಮಗಳನ್ನು ಹುಡುಕಿಕೊಳ್ಳುವುದು ಸವಾಲಿದೆ. ಪ್ರಶಸ್ತಿಗಳು ಲೇಖಕರಿಗೆ ನೈತಿಕ ಬೆಂಬಲವನ್ನು ನೀಡುತ್ತವೆ. ಬರಹಗಾರನನ್ನು ನಾಶ ಮಾಡುವ ಶಕ್ತಿಯೂ ಅವುಗಳಿಗೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ಲೇಖಕನಿಗೆ ಎಚ್ಚರಿಕೆ ಇರಬೇಕಾದದ್ದು ಅಗತ್ಯ ಎಂದರು.
ತೀರ್ಪುಗಾರರ ಪರವಾಗಿ ಮಾತನಾಡಿದ ಹಿರಿಯ ಸಾಹಿತಿ ಜಿ.ಪಿ. ಬಸವರಾಜು, ಕನ್ನಡ ಸಾಹಿತ್ಯ ಇಂದು ಹಲವು ಸವಾಲುಗಳಿಗೆ ಎದುರಾಗಿದೆ. ಜಾಗತೀಕರಣದಿಂದ ಉಂಟಾದ ಆರ್ಥಿಕ ಪರಿಣಾಮಗಳು ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಹಲವು ಪಲ್ಲಟಗಳಿಗೆ ಕಾರಣವಾಗಿದೆ. ಕೇವಲ ಮಾಹಿತಿಯ ಪ್ರಸ್ತುತಿಯೇ ಕಲೆ ಅಥವಾ ಸಾಹಿತ್ಯ ಆಗಲಾರದು. ಸ್ಪರ್ಧೆಗಾಗಿಯೇ ಕಥೆ ಬರೆಯುವ ಪ್ರವೃತ್ತಿಯಿಂದ ಯುವ ಲೇಖಕರು ದೂರ ಸರಿಯಬೇಕು ಎಂದರು.
ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಪಡೆದ ಮಹಾಂತೇಶ ನವಲಕಲ್ ಮತ್ತು ಪಿ. ಮಂಜುನಾಥ ಅವರ ಕಥೆಗಳು ಗ್ರಾಮೀಣ ಭಾರತದ ದರ್ಶನ ಮಾಡಿಸುತ್ತವೆ. ಗ್ರಾಮೀಣ ಬದುಕಿನ ಅನುಭವಗಳ ಹಿನ್ನೆಲೆಯಲ್ಲಿ ಮೂಡಿಬಂದ ಈ ಇಬ್ಬರೂ ಕಥೆಗಾರರ ಕಥೆಗಳು ವಿಶ್ವದರ್ಶನ ಮಾಡಿಸುತ್ತವೆ ಎಂದರು.
ಮಹಾಂತೇಶ ನವಲಕಲ್ ಮತ್ತು ಪಿ. ಮಂಜುನಾಥ ಅವರಿಗೆ ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ, ಮಕ್ಕಳ ಸಾಹಿತಿ ಆನಂದ ಪಾಟೀಲ, ನಿರ್ಮಲಾ ಸುರತ್ಕಲ್ ಅವರಿಗೆ ನಾ. ಡಿಸೋಜ- ಎಚ್.ಎಸ್. ವೆಂಕಟೇಶಮೂರ್ತಿ ಪುಟಾಣಿ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಿದರು.
ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಪಡೆದ ಮಹಾಂತೇಶ ನವಲಕಲ್ ಅವರ ಭಾರತ ಭಾಗ್ಯ ವಿಧಾತ ಕಥಾ ಸಂಕಲನವನ್ನು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಬಿಡುಗಡೆ ಮಾಡಿದರು. ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಮಾತನಾಡಿದರು. ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಕವಿ ವಿಜಯಕಾಂತ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿದಾನಂದ ಕಮ್ಮಾರ ನಿರೂಪಿಸಿದರು. ನಿರ್ಮಲಾ ಶೆಟ್ಟರ ವಂದಿಸಿದರು. ಶಂಕರ ಹಲಗತ್ತಿ, ಶಿವಾನಂದ ಕ್ಯಾಲಕೊಂಡ, ಡಾ.ಪ್ರಹ್ಲಾದ ಅಗಸನಕಟ್ಟೆ, ಜಗದೀಶ ಮಂಗಳೂರಮಠ, ಸುನಂದಾ ಕಡಮೆ, ಡಾ. ಶ್ರೀಶೈಲ ಹುದ್ದಾರ, ಡಾ.ಎಂ.ಡಿ. ವಕ್ಕಂದ, ಬಸು ಬೇವಿನಗಿಡದ, ಶುಭಾ ಅಂಗಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

