ಧಾರವಾಡ

ಕಲೆ, ಸಾಹಿತ್ಯ ವಿನಿಮಯ ಮಾಡಿದ ಅಮೀರ್‌ಬಾಯಿ: ಡಾ. ತರೀಕೆರೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 23
ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗುದ್ದಾಟಗಳ ಮಧ್ಯೆಯೂ ತನ್ನ ಹೆಸರಿನೊಂದಿಗೆ ತಾಯ್ನಾಡಿನ ನಾಮ ಸೇರಿಸಿಕೊಂಡು ಕಲೆ, ಸಾಹಿತ್ಯವನ್ನು ಬಹುವಾಗಿ ಈ ಎರಡು ರಾಜ್ಯಗಳಲ್ಲಿ ವಿನಿಮಯಗೊಳಿಸಿದ ಚೇತನ ಅಮೀರ್‌ಬಾಯಿ ಕರ್ನಾಟಕಿ ಎಂದು ಸಾಹಿತಿ ಡಾ. ರಹಮತ್ ತರೀಕೆರೆ ಹೇಳಿದರು.
ವಿದ್ಯಾವರ್ಧಕ ಸಂಘದಲ್ಲಿ ರಂಗ ಪರಿಸರ ಸಂಸ್ಥೆ ಹಮ್ಮಿಕೊಂಡಿದ್ದ ಅಮೀರ್‌ಬಾಯಿ ಕರ್ನಾಟಕಿ ಶತಮಾನೋತ್ಸವ ಹಾಗೂ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು, ರಂಗಭೂಮಿ ಚಲನಚಿತ್ರವಾಗಿ ರೂಪಾಂತರಗೊಳ್ಳುವ ಕಾಲಘಟ್ಟದಲ್ಲಿ ಸ್ವತಃ ಸಿನೆಮಾ ರಚಿಸಿ, ತನ್ನದೆ ಆದ ಒಂದು ಸಂಸ್ಕೃತಿ ರಚಿಸಿ, ಜೀವಸತ್ವದ ಚರಿತ್ರೆ ಬರೆದ ಜಗತ್ತಿನ ಮಾದರಿ ಮಹಿಳೆ ಎಂದು ಬಣ್ಣಿಸಿದರು. ಕರ್ನಾಟಕ ಏಕೀಕರಣಕ್ಕಿಂತ ಮುಂಚೆಯೇ ತನ್ನ ಹೆಸರಿನೊಂದಿಗೆ ಕರ್ನಾಟಕಿ ಎಂದು ಸೇರಿಸಿಕೊಂಡ ಈ ಮಹಿಳೆಗೆ ವಿದೇಶಗಳಲ್ಲಿಯೂ ಅಭಿಮಾನಿ ಸಂಘಗಳಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಅವರ ಪರಿಚಯವೇ ಇಲ್ಲದಂತೆ ಇರುವುದು ಶೋಚನೀಯ ಎಂದು ವಿಷಾದಿಸಿದರು. ಯಾವುದೇ ಸಂಗೀತದ ಉಪಕರಣಗಳಿಲ್ಲದ ಕಾಲಘಟ್ಟದಲ್ಲಿ, ತಮ್ಮ ಕಠಿಣ ಪರಿಸ್ಥಿತಿಯಲ್ಲೂ ದೇಶ, ವಿದೇಶವನ್ನೇ ತನ್ನ ಸಂಗೀತ, ಅಭಿನಯದ ಮೂಲಕ ಮೋಡಿ ಮಾಡಿ ತನ್ನ ಚೈತನ್ಯ, ಪ್ರತಿಭೆ ಪ್ರಕಟ ಮಾಡಿದ್ದಾರೆ ಎಂದು ತರೀಕೆರೆ ಹೇಳಿದರು. ಇಂದಿಗೂ ದೇಶದಲ್ಲಿನ ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳೆಯ ಪ್ರತಿಭೆ, ಶಕ್ತಿಯನ್ನು ದಮನ ಮಾಡುವುದರಲ್ಲಿಯೇ ನಮ್ಮ ಪುರುಷ ಜನಾಂಗ ಕಾಲಹರಣ ಮಾಡುತ್ತಿದೆ. ಈ ಕೃತ್ಯ ಸಮಾಜದಿಂದ ದೂರವಾಗಿ ಮಹಿಳಾ ಪ್ರತಿಭೆಗಳು ಅರಳಬೇಕು. ಯುವಪೀಳಿಗೆ ದಂತಕಥೆಗಳ ಮಧ್ಯ ಹುದುಗಿದ ಗತಕಾಲದ ಪ್ರತಿಭೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ನಾವು ಅಳಿದು ಮರೆಯಾದ ಪ್ರತಿಭೆಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎನ್.ಎಂ.ದಾಟನಾಳ ಹಾಗೂ ಕೆ. ಜಗುಚಂದ್ರ ಅವರನ್ನು ಸನ್ಮಾನಿಸಲಾಯಿತು. ಸವಿತಾ ನುಗಡೋಣಿ ಅವರು ಅಮೀರ್‌ಬಾಯಿ ಹಾಡಿದ್ದ ಹಾಡನ್ನು ಪ್ರಸ್ತುತಪಡಿಸಿದರು. ದೇವರಹುಬ್ಬಳ್ಳಿಯ ರಂಗಗಂಗಾ ತಂಡ 'ಕೊನೆಯ ನಮಸ್ಕಾರ' ನಾಟಕವನ್ನು ಅದ್ಭುತವಾಗಿ ಪ್ರಸ್ತುತಪಡಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.