ಧಾರವಾಡ

ಸ್ಪರ್ಧೆಗೆ ಒಪ್ಪದ ಜೆಡಿಎಸ್ ಮುಖಂಡರು

Published On :

ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಿಕೊಳ್ಳಲೇಬೇಕೆಂಬ ಧಾವಂತ ಬಹುತೇಕ ಪಕ್ಷಗಳಲ್ಲಿ ಕಂಡು ಬಂದರೆ, ಜೆಡಿಎಸ್‌ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಬೆಳವಣಿಗೆ ನಡೆದಿದ್ದು ವಿಚಿತ್ರವೇ ಸರಿ.
ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಲೋಕಸಮರದಲ್ಲಿ ಜಗಜಟ್ಟಿಯಾಗಿ ನಿಲ್ಲುವ ಅಭ್ಯರ್ಥಿ ಧಾರವಾಡ ಜಿಲ್ಲೆಯಲ್ಲಿ ಇಲ್ಲ ಎಂಬ ಕಟುವಾಸ್ತವ ಜೆಡಿಎಸ್ ರಾಜ್ಯ ನಾಯಕರನ್ನು ಆರಂಭದಿಂದಲೂ ಚಿಂತೆಗೀಡು ಮಾಡಿದ್ದು ಸುಳ್ಳಲ್ಲ.
ಈ ಅಂಶವನ್ನು ಮಾಧ್ಯಮದವರೆದು ಹೇಳಿಕೊಳ್ಳಲು ಮುಜುಗರಕ್ಕೊಳಗಾದಂತೆ ಕಂಡು ಬಂದಿದ್ದ ಜೆಡಿಎಸ್ ನಾಯಕರು, ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಂಡು ತಮ್ಮ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸುವುದಾಗಿ ಸಮಜಾಯಿಷಿ ನೀಡಿದ್ದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಂಗಳವಾರ ನಗರಕ್ಕೆ ಆಗಮಿಸಿ ಜೆಡಿಎಸ್‌ನಿಂದ ಯಾರನ್ನು ಕಣಕ್ಕಿಳಿಸಬೇಕೆಂಬುದಕ್ಕೆ ಸಂಬಂಧಿಸಿದಂತೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಾಕಷ್ಟು ಹಗ್ಗಜಗ್ಗಾಟ ನಡೆಸಿದರು.
ಬೆಳಗ್ಗೆಯಿಂದ ಸಂಜೆವರೆಗೆ ಚಿರಪರಿಚಿತ ಹೆಸರುಗಳಾಗಿದ್ದ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ, ಮುಜಾಹೀದ್ ಕಾಂಟ್ರ್ಯಾಕ್ಟರ್, ಕಳೆದ ಬಾರಿ ಜಗದೀಶ ಶೆಟ್ಟರ್ ವಿರುದ್ಧ ಸ್ಪರ್ಧಿಸಿದ್ದ ನಾಸೀರ ಭಾಗಬಾನ್ ಹೆಸರು ಬಲವಾಗಿ ಕೇಳಿ ಬಂದಿದ್ದವು. ಆದರೆ, ಸಂಜೆಯಿಂದ ರಾತ್ರಿವರೆಗೂ ಮಾಜಿ ಸಿಎಂ ಕುಮಾರಸ್ವಾಮಿ ನಡೆಸಿದ ಸಭೆಯಲ್ಲಿ ಕ್ಷೇತ್ರದಲ್ಲಿ ಅಷ್ಟೊ-ಇಷ್ಟೊ ಹೆಸರು ಹೊಂದಿರುವ ಮುಖಂಡರು ತಾವು ಸ್ಪರ್ಧಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರಂತೆ.
ನಾಮಕೇವಾಸ್ತೆಯಾದರೂ ಧಾರವಾಡ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ನಿರ್ಧಾರಕ್ಕೆ ಬಂದ ಮುಖಂಡರು ಅಂತಿಮವಾಗಿ ಕ್ಷೇತ್ರದಲ್ಲಿ ಅಷ್ಟೊಂದು ಚಿರಪರಿಚಿತರಲ್ಲದ ಹನುಮಂತಪ್ಪ ಬಂಕಾಪುರ ಅವರ ಹೆಸರು ಅಖೈರುಗೊಳಿಸಿದ್ದಾರೆ. ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಜೆಡಿಎಸ್ ಸಕ್ರಿಯವಾಗಿದೆ ಎಂಬುದನ್ನು ತೋರಿಸಿಕೊಟ್ಟಂತಾಗಿದೆ ಎಂದೆ ಈ ಬೆಳವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ.

ಶಾಸಕ ವಿನಯ ಕುಲಕರ್ಣಿಗೆ ಅದ್ಧೂರಿ ಸ್ವಾಗತ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಫಾರ್ಮ್ ಪಡೆದುಕೊಂಡು ಮಂಗಳವಾರ ಹುಬ್ಬಳ್ಳಿಗೆ ಆಗಮಿಸಿದ ಶಾಸಕ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸಡಗರ ಸಂಭ್ರಮದಿಂದ ಬರಮಾಡಿಕೊಂಡರು.
ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರ್ಮ್ ಪಡೆದುಕೊಂಡ ಧಾರವಾಡ ಶಾಸಕ ವಿನಯ ಕುಲಕರ್ಣಿ ಮಧ್ಯಾಹ್ನ ಧಾರವಾಡ ಕ್ಷೇತ್ರದ ವ್ಯಾಪ್ತಿಗೆ ಬರುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಸವಣೂರ ಪಟ್ಟಣಗಳಿಗೆ ಭೇಟಿ ನೀಡಿ ಹುಬ್ಬಳ್ಳಿ ನಗರಕ್ಕೆ ಆಗಮಿಸಿದರು. ಸಂಜೆ ಹುಬ್ಬಳ್ಳಿ ಗಬ್ಬೂರ ಬೈಪಾಸ್ ಬಳಿ ಶಾಸಕ ವಿನಯ ಕುಲಕರ್ಣಿ ಅವರನ್ನು ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರು ಬರಮಾಡಿಕೊಂಡರು. ಬುಧವಾರ ನಾಮಪತ್ರ ಸಲ್ಲಿಸಲಿರುವ ಶಾಸಕ ವಿನಯ ಕುಲಕರ್ಣಿ ಮೊದಲು ಸಿದ್ಧಾರೂಢ ಮಠ, ಮೂರುಸಾವಿರಮಠ ಸೇರಿದಂತೆ ಇತರ ಚರ್ಚ್, ಮಸೀದಿಗಳಿಗೂ ಭೇಟಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.