ಇಂದು ಅಭಿನಂದನಾ ಸಮಾರಂಭ
ಗಜೇಂದ್ರಗಡ: ತಾಲೂಕು ಹೋರಾಟ ಸಮಿತಿ ಹಾಗೂ ಸುತ್ತಲಿನ ಗ್ರಾಮಗಳ ಸರ್ವ ಸಮಾಜ ಸದಸ್ಯರ ವತಿಯಿಂದ ಫೆ. 17ರ ಸಂಜೆ 5 ಗಂಟೆಗೆ ಪಟ್ಟಣದ ಮೈಸೂರ ಮಠ (ಚೌಕಿಮಠ)ದಲ್ಲಿ ಗಜೇಂದ್ರಗಡ ತಾಲೂಕನ್ನಾಗಿಸಲು ಶ್ರಮಿಸಿದ ಮಹನಿಯರಿಗೆ ಅಭಿನಂದನಾ ಸಮಾರಂಭ ಜರುಗಲಿದೆ. ಸಾನ್ನಿಧ್ಯವನ್ನು ಮೈಸೂರ ಸಂಸ್ಥಾನ ಮಠದ ವಿಜಯಮಹಾಂತ ಶ್ರೀಗಳು, ಚಿಂಚಣಿಯ ಸಿದ್ದ ಸಂಸ್ಥಾನ ಮಠದ ಅಲ್ಲಮಪ್ರಭು ಶ್ರೀಗಳು ವಹಿಸುವರು. ಸಚಿವ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡ್ರ, ಶಾಸಕ ಶ್ರೀಶೈಲಪ್ಪ ಬಿದರೂರ, ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಜಿ.ಎಸ್.ಪಾಟೀಲ, ಜ್ಞಾನದೇವ ದೊಡ್ಡಮೇಟಿಯವರನ್ನು ಅಭಿನಂದಿಸಲಾಗುವುದು. ಅಧ್ಯಕ್ಷತೆಯನ್ನು ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ. ಸಜ್ಜನ ವಹಿಸುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾವಂತರಿಗೆ ಪುರಸ್ಕಾರ: ಪತ್ತಾರ
ಹೊಳೆಆಲೂರ: ವಿಶ್ವಕರ್ಮ ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಹಾಯ ಯೋಜನೆ ರೂಪಿಸಲಾಗುತ್ತಿದೆ. ಅದರ ಸದುಪಯೋಗವನ್ನು ಸಮಾಜದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸ್ಥಳೀಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಾಂಡುರಂಗ ಪತ್ತಾರ ಹೇಳಿದರು.
ಅವರು ಈಚೆಗೆ ಸ್ಥಳೀಯ ವಿಶ್ವಕರ್ಮ ಸಮಾಜದ ವತಿಯಿಂದ ಯಚ್ಚರಸ್ವಾಮಿಮಠದ ಆವರಣದಲ್ಲಿ ನಡೆದ ಉಪನಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಮಾಜಕ್ಕೆ ಉಪಯುಕ್ತವಾಗುವ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಸಿಗಲಿ ಎಂದರು. ಮುರನಾಳದ ಮಳೇರಾಜೇಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಸಾನ್ನಿಧ್ಯವನ್ನು ಯಚ್ಚರೇಶ್ವರ ಶ್ರೀ, ಅಲ್ಲಮಯ್ಯ ಶ್ರೀ, ಮುರನಾಳದ ಮಳೇರಾಜೇಂದ್ರ ಶ್ರೀ, ನವಲಗುಂದದ ಅಜಾತ ನಾಗಲಿಂಗಸ್ವಾಮಿಮಠದ ಸಿದ್ದಯ್ಯ ಶ್ರೀ, ಇಂಗ್ಲೇಶ್ವರದ ಮಹೇಂದ್ರ ಶ್ರೀ, ವಹಿಸಿದ್ದರು. ಎ.ಎನ್. ಬಡಿಗೇರ, ಬಿ.ಆರ್. ಬಡಿಗೇರ, ಸರಾಫ ಅಸೋಸಿಯೇಶನ್ನ ಗದಗ ಅಧ್ಯಕ್ಷ ವೀರಣ್ಣ ಪ್ಯಾಟಿ, ಜಿಲ್ಲಾ ವಿಶ್ವಕರ್ಮ ಸೇವಾ ಪರಿಷತ್ ಅಧ್ಯಕ್ಷ ಈಶ್ವರ ಪತ್ತಾರ, ತಾಲೂಕಾ ವಿಶ್ವಕರ್ಮ ಸೇವಾ ಪರಿಷತ್ತಿನ ಅಧ್ಯಕ್ಷ ರುದ್ರೇಶ ಬಡಿಗೇರ ಉಪಸ್ಥಿತರಿದ್ದರು. ವಿಶ್ವನಾಥ ಬಡಿಗೇರ ಸ್ವಾಗತಿಸಿದರು. ಸಿ.ವಿ. ಪತ್ತಾರ ನಿರೂಪಿಸಿದರು. ಮೌನೇಶ ಬಡಿಗೇರ ವಂದಿಸಿದರು.
ದಲಿತ ಯುವ ಸೇನಾ ಸಮಿತಿ: ಆಯ್ಕೆ
ನರಗುಂದ: ತಾಲೂಕು ದಲಿತ ಯುವ ಸೇನಾ ಸಮಿತಿ (ರಿ) ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶರಣಪ್ಪ ವಾಲ್ಮೀಕಿ, ಕಾರ್ಯದರ್ಶಿಯಾಗಿ ಪರಶುರಾಮ ಚಲವಾಧಿ, ಉಪಾಧ್ಯಕ್ಷರಾಗಿ ಮಂಜುನಾಥ ಜಮಖಂಡಿ, ಗೌರವಾಧ್ಯಕ್ಷರಾಗಿ ದ್ಯಾಮಪ್ಪ ಚಲವಾದಿ, ಸದಸ್ಯರಾಗಿ ಚಂದ್ರಶೇಖರ ಮಾದರ, ಶಿವಾನಂದ ಪೂಜಾರ, ತಿರಕಪ್ಪ ತಳವಾರ, ಮಂಜು ಕೇರಿ, ಭೀಮರಾಜ ರೋಣ, ಸುರೇಶ ಜಮಖಂಡಿ, ಶಿವಾನಂದ ಜಮಖಂಡಿ, ಮರಗಪ್ಪ ಜವಳಿ, ಸುಂಕಪ್ಪ ತಲವಾಯಿ, ಮಂಜು ವಡ್ಡರ, ಮೈಲಾರಿ ದೊಡ್ಡಮನಿ, ದುರಗಪ್ಪ ಬುಡ್ಡನ್ನವರ, ವಿನಾಯಕ ಮೇದರ, ಪ್ರಕಾಶ ವಡ್ಡರ, ಬಾಳೇಶಿ ವಡ್ಡರ, ಶಿವಾನಂದ ಪಟ್ಟೇದ, ರುದ್ದಪ್ಪ ಚಳವಾದಿ, ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ವ್ಯತ್ಯಯ
ಗದಗ: ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕುಸಿತವಾದ ಹಿನ್ನೆಲೆಯಲ್ಲಿ ಭಾನುವಾರ ಅವಳಿ ನಗರಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ನಗರಸಭೆಯ ಪ್ರಕಟಣೆ ತಿಳಿಸಿದೆ.
ಚುನಾವಣೆ: ಆಯುಧ ಮರಳಿಸುವಂತೆ ಆದೇಶ
ಗದಗ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ದಿನಾಂಕದಿಂದ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಗರ, ಪಟ್ಟಣ ಪ್ರದೇಶದಲ್ಲಿ ಆಯುಧಗಳ ಲೈಸನ್ಸ್ ಹೊಂದಿದವರು ಆಯುಧಗಳನ್ನು ತಮ್ಮ ಸಂಗಡ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಆದೇಶ: ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳಿಂದಾಗಿ, ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ಮತ್ತು ಆಯುಧಗಳ ಕಾಯ್ದೆ 1959ರ ಕಲಂ 21(1) ರ ಮೇರೆಗೆ ಪ್ರದತ್ತವಾದ ಅಧಿಕಾರದ ಮೇರೆಗೆ ಈ ಕೆಳಗಿನಂತೆ ಆದೇಶಿಸಲಾಗಿದೆ. ವಿವಿಧ ಉದ್ದೇಶದ ಸಲುವಾಗಿ ಧಾರಣ ಮಾಡಿದ ಯಾವುದೇ ಬಗೆಯ ಆಯುಧಗಳನ್ನು ಯಾವುದೇ ಪರವಾನಿಗೆದಾರರಾಗಲೀ ಅಥವಾ ಅವರ ರಿಟೇನರ್ ಆಗಲಿ ತಮ್ಮ ಸಂಗಡ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದ್ದು, ಆಯುಧಗಳನ್ನು ಫೆ. 20 ರೊಳಗಾಗಿ ತಮ್ಮ ಸಮೀಪದ ಆರಕ್ಷಕ ಠಾಣೆಯಲ್ಲಿ ಠೇವಣಿ ಮಾಡಿ ರಶೀದಿ ಪಡೆಯಬೇಕು. ಈ ಆದೇಶವು ವಿವಿಧ ಹಣಕಾಸು ಸಂಸ್ಥೆ (ಬ್ಯಾಂಕ್) ಗಳ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲ. ಈ ಆದೇಶವು ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿ, ಗಜೇಂದ್ರಗಡ, ಮುಂಡರಗಿ, ನರಗುಂದ, ಲಕ್ಷ್ಮೇಶ್ವರ ಹಾಗೂ ರೋಣ ಪುರಸಭಾ ವ್ಯಾಪ್ತಿ ಮತ್ತು ನರೇಗಲ್, ಮುಳಗುಂದ, ಶಿರಹಟ್ಟಿ ಪಪಂ ವ್ಯಾಪ್ತಿ ಪ್ರದೇಶದಲ್ಲಿನ ಆಯುಧ ಲೈಸನ್ಸ್ದಾರರಿಗೆ ಮಾತ್ರ ಅನ್ವಯಿಸುತ್ತದೆ. ಇನ್ನುಳಿದ ಗ್ರಾಮೀಣ ಪ್ರದೇಶಕ್ಕೆ ಅನ್ವಯಿಸುವುದಿಲ್ಲ.
ಇಂದು ಮಧುಮೇಹ ಉಚಿತ ತಪಾಸಣಾ ಶಿಬಿರ
ನರೇಗಲ್ಲ: ರೋಟರಿ ಸಂಸ್ಥೆಯ ಅಡಿಯಲ್ಲಿ ಫೆ. 17ರಂದು ಸ್ಥಳೀಯ ಬಸ್ಸ್ಟ್ಯಾಂಡ್ ಹತ್ತ್ತಿರದ ಮಾದರಿ ಕೇಂದ್ರ ಶಾಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣಾ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಗದಗಿನ ತಜ್ಞ ವೈದ್ಯ ಡಾ. ಪ್ರಕಾಶ ಧರಣಾ ಅವರು ಮಧುಮೇಹ ತಪಾಸಣೆ ನಡೆಸಲಿದ್ದಾರೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಡಾ. ಕೆ.ಬಿ. ದನ್ನೂರ, ಡಾ. ಜಿ.ಕೆ. ಕಾಳೆ, ಡಾ. ಮಂಗಲಾ ಕಾಳೆ, ಡಾ. ಡ್ಯಾನಿಯಲ್ ಫ್ರೆಡರಿಕ್ಸ್, ಡಾ. ಆರ್.ಕೆ. ಗಚ್ಚಿನಮಠ, ಡಾ. ಆರ್.ಬಿ. ಬಸವರಡ್ಡೇರ, ಡಾ. ಎನ್.ಎಲ್. ಗ್ರಾಮಪುರೋಹಿತ, ಡಾ. ಆರ್.ವಿ. ಅಂಗಡಿ ಹಾಗೂ ಸಂಗಮೇಶ್ವರ ಮೆಡಿಕಲ್ ಜಕ್ಕಲಿ ಯವರನ್ನು ಸಂಪರ್ಕಿಸುವಂತೆ ಸ್ಥಳಿಯ ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಹೂಲಗೇರಿ, ಕಾರ್ಯದರ್ಶಿ ಎಂ.ಡಿ. ಗ್ರಾಂಪುರೋಹಿತ, ಖಜಾಂಚಿ ಡಾ. ಕೃಷ್ಣಾ ಕಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬಿಜೆಪಿ ಸಭೆ
ಲಕ್ಷ್ಮೇಶ್ವರ: ಪಟ್ಟಣದ ನಗರ ಘಟಕದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಫೆ. 17ರ ಸಂಜೆ 4ಕ್ಕೆ ಸ್ಥಳೀಯ ಸಾಲೇಶ್ವರ ಕಲ್ಯಾಣ ಮಂಟಪ ಬಸ್ತಿ ಬಣದಲ್ಲಿ ಕರೆಯಲಾಗಿದೆ. ಎಲ್ಲ ವಾರ್ಡ್ಗಳ ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ನಗರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸ್ನೇಹ ಸಮ್ಮೇಳನ
ನರಗುಂದ: ಪಟ್ಟಣದ ನವೋದಯ ಸಂಯುಕ್ತ ಪಪೂ ಮಹಾವಿದ್ಯಾಲಯದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭವು ಫೆ. 17ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಅಧ್ಯಾಪಕ ನಗರದ ಕಾಲೇಜು ಆವರಣದಲ್ಲಿ ಜರುಗಲಿದೆ. ಗದಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜೀವ ನಾಯಕ, ಸಂಸ್ಥೆಯ ಅಧ್ಯಕ್ಷ ಬಿ.ವಿ. ಸೋಮಪೂರ, ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ, ಸಿಪಿಐ ಪ್ರಶಾಂತ ಸಿದ್ದನಗೌಡ್ರ, ಡಾ. ಜಿ.ವಿ. ಮರಡ್ಡಿ, ಡಾ. ಪಿ.ಎಸ್. ಹೂಗಾರ, ಡಿ.ಆರ್. ಒಂಟಗೋಡಿ, ಪ್ರಾ. ಆರ್.ಎಸ್. ಪವಾರ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

