ಶರಣರ ಕೊಡುಗೆ ಅಪಾರ
ಸಂತರು, ಸತ್ಪುಷರು ತಮ್ಮ ಹೆಸರಿನಲ್ಲಿ ಭಿನ್ನತೆ ಹೊಂದಿರುವರೇ ಹೊರತಾಗಿ ಅವರ ಜೀವನದಲ್ಲಲ್ಲ. ಅವರೆಲ್ಲರೂ ಸಮಾಜ ಸುಧಾರಣೆಗೆ ತಮ್ಮ ಜೀವನವನ್ನು ಮುಡುಪಾಗಿಡುವ ಮಹಾನ್ ಚೇತನರಾಗಿದ್ದಾರೆಂದು ಬಿಜಾಪುರ ಜ್ಞಾನ ಯೋಗಾಶ್ರವುದ ಸಿದ್ಧೇಶ್ವರ ಶ್ರೀ ಹೇಳಿದರು.
ಅವರು ಶುಕ್ರವಾರ ನಗರದ ಕೆ.ಎಚ್. ಪಾಟೀಲ್ ಸಭಾಭವನದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ ಇವರ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಬಾಳಿದ ಶರಣರೆಲ್ಲರೂ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಪ್ರಾಮಾಣಿಕರಾಗಿ ಶ್ರಮಿಸಿದ್ದಾರೆ. ಯುವಕರು ಇಂತಹ ವ್ಯಕ್ತಿಗಳ ತತ್ವಾದರ್ಶ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಪ್ರೊ. ಗುರುಲಿಂಗ ಕಾಪಸೆ ಮಾತನಾಡಿ, ಸ್ವಾಮಿ ವಿವೇಕಾನಂದರು ವಿಶ್ವ ಮಹಾನ್ ಸಂತರಲ್ಲಿ ಒಬ್ಬರು. ಅವರ ವಿಚಾರಧಾರೆಗಳು ಇಂದಿನ ಯುವ ಪೀಳಿಗೆಗೆ ದಾರಿ ದೀಪವಾಗಿವೆ. ತಮ್ಮ ಕಿರಿಯ ವಯಸ್ಸಿನಲ್ಲಿಯೇ ಮಹಾನ್ ಸಾಧನೆ ಮಾಡುವ ಮೂಲಕ ಈ ನಾಡಿನ ಮಹಾನ್ ಚೇತನರಾಗಿ ಹೊರಹೊಮ್ಮಿದ್ದಾರೆ. ಅಂಥಹ ಮಹಾನ್ ಚೇತನರ ಸಮಗ್ರ ಚಿಂತನೆ ಕುರಿತು ಅವಲೋಕಿಸುವ ಕಾರ್ಯವಾಗಬೇಕಿದೆ. ಸಮಾಜದಲ್ಲಿ ಸ್ವಾಸ್ಥ್ಯ ಬೆಳೆಸಲು ಹಾಗೂ ಅಭಿವೃದ್ಧಿಗೆ ಇಂಥವರ ಆದರ್ಶ ಸಹಕಾರಿಯಾಗಿದೆ. ವರ್ಗರಹಿತ, ವರ್ಣರಹಿತ ಸಮಾಜ ನಿರ್ಮಾಣ ಮಾಡುವುದು ಇಂದಿನ ಯುವ ಸಮೂಹದ ಕರ್ತವ್ಯವಾಗಿದೆ. ಯುವಕರಿಗೆ ವಿವೇಕಾನಂದರು ಆದರ್ಶರಾಗಿದ್ದಾರೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ, ಸಮಾಜದಲ್ಲಿರುವ ಜಾತಿ, ಅಧರ್ಮ, ಅಂಧಕಾರ ಕುರಿತು ತಿಳಿದುಕೊಳ್ಳುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರಾಗಿದ್ದಾರೆ ಎಂದರು.
ದೇಶದಲ್ಲಿ ಉಪವಾಸದಿಂದ ಬಳಲುವವರು, ಉಡಲು ಬಟ್ಟೆಯಿಲ್ಲದವರು, ಶೋಷಣೆಗೊಳಗಾದವರು, ಅನಕ್ಷರಸ್ಥರು, ಅಸಹಾಯಕ ಮಹಿಳೆಯರ ಪರವಾಗಿ ಧ್ವನಿ ಎತ್ತಿದರು. ಇಂಥ ಜನರ ಉಳಿತಿಗಾಗಿ ದೇಶಾದ್ಯಂತ ಸಂಚರಿಸುವ ಮೂಲಕ ಜನರಲ್ಲಿ ಜಾಗೃತಿಯನ್ನುಂಟು ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದರು. ಜನರ ಜಾಗೃತಿಗಾಗಿ, ಸಮೃದ್ಧ ನಾಡುಕಟ್ಟಲು ದೇಶಾದ್ಯಂತ ಸ್ವಾಮಿ ವಿವೇಕಾನಂದರು ಆಶ್ರಮಗಳನ್ನು ನಿರ್ಮಿಸಿದರು. ಈ ಆಶ್ರಮಗಳ ಮೂಲಕ ಸಮಾಜವನ್ನು ಪರಿವರ್ತನೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜ ಪರಿವರ್ತನೆಗೆ ಕೈಜೋಡಿಸುವಂತೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಶ್ರೀಗಳು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ, ನಿಜಗುಣ ಶ್ರೀಗಳು, ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ಮಂಡಿಸಿದರು. ಬಳಿಕ ಡಾ. ಎಚ್.ಎನ್. ಮುರಳೀಧರ, ಪ್ರೊ. ಜಿ.ಎಸ್. ಜಯದೇವ, ಡಾ. ಎಚ್.ಬಿ. ಪೂಜಾರ ಅವರಿಂದ ವಿವಿಧ ಗೋಷ್ಠಿ ಜರುಗಿದವು. ಮಾಜಿ ಶಾಸಕ ಡಿ.ಆರ್. ಪಾಟೀಲ ಸ್ವಾಗತಿಸಿದರು. ಕೆ.ಬಿ. ತಳಗೇರಿ ನಿರೂಪಿಸಿದರು.
ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಿ: ಜಗ್ಗಲ
ಕನ್ನಡಪ್ರಭ ವಾರ್ತೆ, ಗದಗ, ಮಾ. 8
ಸ್ತ್ರಿಶಕ್ತಿ ಹಾಗೂ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರು ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಮುಂತಾದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಸಲಹೆ ನೀಡಿದರು.
ಶುಕ್ರವಾರ ತಾಲೂಕಿನ ಕೋಟುಮಚಗಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಮಹಿಳಾ ವಿಕಾಸ ಗ್ರಾಮ ಸಭಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಠೇವಣಿ ಇಡುವ ಮೂಲಕ ಬ್ಯಾಂಕ್ನ ಉನ್ನತಿಗೆ ಶ್ರಮಿಸಬೇಕು. ಸಾಲ ಸೌಲಭ್ಯವನ್ನು ಸದುಪಯೋಗ ಪಡೆದುಕೊಂಡು ಸೂಕ್ತ ಸಮಯದಲ್ಲಿ ಮರು ಪಾವತಿ ಮಾಡಿ ಬ್ಯಾಂಕ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರು.
ಬ್ಯಾಂಕ್ ಶಾಖಾಧಿಕಾರಿ ಪಿ.ಎಂ. ಡಿಪೋ ಮಾತನಾಡಿ, ಬ್ಯಾಂಕ್ನಲ್ಲಿ ಮಹಿಳೆಯರಿಗಾಗಿಯೇ ಹಲವು ಯೋಜನೆಗಳಿದ್ದು, ಸ್ತ್ರೀಶಕ್ತಿ, ಮಹಿಳಾ ಸ್ವ ಸಹಾಯ ಸಂಘಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರಲ್ಲದೆ, ಸಂಚಯಿನಿ ಠೇವಣಿ, ಸಾಲ ಮರು ಪಾವತಿ ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಮೂರು ಸಂಘಗಳಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಕಸ್ತೂರಿ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಹರ್ಲಾಪುರ, ಸದಸ್ಯೆ ಕಸ್ತೂರವ್ವ ನೀರಲಗಿ, ನೀಲವ್ವ ಅಲ್ಲಾಪುರ, ಮಹಾಂತೇಶ ಭೂಸನೂರಮಠ, ಶೋಭಾ ಸಂಕನಗೌಡರ, ಮೆಹಬೂಬಿ ಬೂದಿಹಾಳ, ರೇಣವ್ವ ಅಂಬರಗಟ್ಟಿ, ಸುಮಂಗಲಾ ಶಿವಶಿಂಪರ, ನೀಲವ್ವ ಸೊನ್ನದ, ಈರಮ್ಮ ನೀರಲಗಿ, ಮಂಜುಳಾ ಪಾಟೀಲ, ಚಾಮುಂಡೇಶ್ವರಿ ಮಹಿಳಾ ಸ್ವ-ಸಹಾಯ ಸಂಘ, ನೇತ್ರಾವತಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹಾಜರಿದ್ದರು. ಬ್ಯಾಂಕ್ನ ಸಿಬ್ಬಂದಿ ಎಂ.ಎಚ್. ಮುಲ್ಲಾ, ಬಿ.ಬಿ. ನೀಲಗುಂದ, ಅಮರೇಶ ಜಗ್ಗಲ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

