ಗದಗ

ಶಿವ ದೇವಾಲಯಗಳಿಗೆ ಭಕ್ತಸಾಗರ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 10
ಜಿಲ್ಲೆಯಾದ್ಯಂತ ಭಕ್ತರು ಭಾನುವಾರ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿಯನ್ನು ಆಚರಣೆ ಮಾಡಿದರು.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಹಾಗೂ ಪ್ರತಿ ಗ್ರಾಮಗಳಲ್ಲಿಯೂ ಭಾನುವಾರ ಬೆಳಗ್ಗೆಯಿಂದಲೇ ಶಿವನ ದೇವಾಲಯ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ಹಾಗೂ ದೇವರಿಗೆ ವಿಶೇಷ ಅಭಿಷೇಕದ ಕಾರ್ಯಕ್ರಮ ಜರುಗಿದವು.
ದೇವರಿಗೆ ವಿಶೇಷ ಅಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು. ವೃದ್ಧರು, ಮಹಿಳೆಯರು ಮಕ್ಕಳು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು.
ನಗರದಲ್ಲಿರುವ ಐತಿಹಾಸಿಕ ತ್ರಿಕೂಟೇಶ್ವರ, ವೀರನಾರಾಯಣ ದೇವಸ್ಥಾನ, ಸಾಯಿ ಮಂದಿರ, ವೀರೇಶ್ವರ ಪುಣ್ಯಾಶ್ರಮ, ಕಾಶಿ ಅಧ್ಯಯನ ಪೀಠದಲ್ಲಿರುವ ಶಿವನ ದೇವಸ್ಥಾನ, ಕಪ್ಪತ್ತಗುಡ್ಡ ಭಾಗದಲ್ಲಿರುವ ಜಲಾಶಂಕರ ದೇವಸ್ಥಾನ, ರೋಣ ತಾಲೂಕಿನ ಕಾಲಕಾಲೇಶ್ವರ ದೇವಸ್ಥಾನ, ಮುಂಡರಗಿ ತಾಲೂಕಿನ ಸಿಂಗಟಾಲೂರಿನ ವೀರಭದ್ರೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಐತಿಹಾಸಿಕ ಪ್ರಸಿದ್ಧಿ ಪಡೆದ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಧರ್ಮಕ್ಷೇತ್ರ, ಗೋಲಾಳೇಶ್ವರ ದೇವಸ್ಥಾನ, ಲಕ್ಷ್ಮೀನಿಂಗನಗುಡಿ, ಬಾಳೇಶ್ವರ ಮಠ, ಶಿರಹಟ್ಟಿಯ ವರವಿ ಮೌನೇಶ್ವರ ದೇವಸ್ಥಾನ, ನರಗುಂದದ ಶಂಕರಲಿಂಗ ದೇವಸ್ಥಾನ, ಕಲ್ಮೇಶ್ವರ, ಮಂಜುನಾಥ, ಕೊಣ್ಣೂರಿನ ರಾಮಲಿಂಗ ದೇವಸ್ಥಾನ, ಗಜೇಂದ್ರಗಡದ ಐತಿಹಾಸಿಕ ಪ್ರಸಿದ್ಧಿ ಪಡೆದ ದಕ್ಷಿಣಕಾಶಿ ಕಾಲಕಾಲೇಶ್ವರ ದೇವಸ್ಥಾನ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಮುಂಡರಗಿಯ ಅನ್ನದಾನೀಶ್ವರ ಮಠ, ಈಶ್ವರ ದೇವಸ್ಥಾನ, ಬ್ಯಾಲವಾಡಗಿ ಈಶ್ವರ ದೇವಸ್ಥಾನ ಹಾಗೂ ಐತಿಹಾಸಿಕ ಪ್ರಸಿದ್ಧಿಯ ವಿಠ್ಠಲಾಪುರ ರಸಲಿಂಗ ದೇವಸ್ಥಾನ, ಮುಷ್ಟಿಕೊಪ್ಪದ ಲಕ್ಷ್ಮೀವೆಂಕಟೇಶ ದೇವಸ್ಥಾನ, ಶಿಂಗಟಾಲೂರಿನ ವೀರಭದ್ರ ದೇವಸ್ಥಾನ ಸೇರಿದಂತೆ ಗ್ರಾಮದ ಎಲ್ಲ ಶಿವಾಲಯ, ಈಶ್ವರ ದೇವಸ್ಥಾನಗಳಿಗೆ ಭಕ್ತರು ವಿಶೇಷ ಪೂಜೆ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಅಭಿಷೇಕ, ಮಹಾಮಂಗಳಾರತಿ ಸಲ್ಲಿಸಿದರು.
ಶಿವನ ಜಾಗರಣೆ: ಮಹಾಶಿವರಾತ್ರಿ ಅತ್ಯಂತ ಪವಿತ್ರ ಆಚರಣೆ ಆಗಿದ್ದು, ಭಕ್ತರು ಶನಿವಾರ ದಿನಪೂರ್ತಿ ಉಪವಾಸ ಮಾಡುವ ಮೂಲಕ ರಾತ್ರಿ ಇಡೀ ಶಿವನ ಜಾಗರಣೆ, ಭಜನೆ, ಪೂಜೆಗಳ ಮೂಲಕ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಇನ್ನು ಕೆಲವರು ಬೆಳಿಗ್ಗೆಯಿಂದಲೇ ನಗರದಲ್ಲಿರುವ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿತು.

ಕಾಲಕಾಲೇಶ್ವರ ದೇಗುಲ ದರ್ಶನ
ಗಜೇಂದ್ರಗಡ: ಪಟ್ಟಣದ ಗಣಪತಿ, ವಿರೂಪಾಕ್ಷೇಶ್ವರ, ಶ್ರೀರಾಮ ಮಂದಿರ, ವಿಠ್ಠಲ ದೇವರ ಗುಡಿ, ಜಗದಂಬಾ, ದುರ್ಗಾ ಮಾತೆಯರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಭಾನುವಾರ ಬೆಳಗ್ಗೆಯಿಂದ ರಾತ್ರಿಯಿಡಿ ಭಕ್ತರು ದೇವರ ದರ್ಶನ ಮಾಡಿ ಪೂಜೆ ಗೈದರು.
ನಾಡಿನ ವಿವಿಧೆಡೆಯಿಂದ ಭಕ್ತರು ಸಮೀಪದ ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕಾಲಕಾಲೇಶ್ವರ ಪುಣ್ಯ ಕ್ಷೇತ್ರದಲ್ಲಿ ಅಹೋರಾತ್ರಿ ಶಿವನ ಕಥಾ ಶ್ರವಣ, ರುದ್ರಧ್ಯಾನ, ಪುರುಷಸೂಕ್ತ ಪಠಣದೊಂದಿಗೆ ಧ್ಯಾನ, ಜಪ ತಪಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರಾದ ಕಲ್ಲಂಭಟ್ರ, ಮಲ್ಲಯ್ಯಸ್ವಾಮಿ ಪೂಜಾರ ನೇತೃತ್ವದಲ್ಲಿ  ನೆರವೇರಿದವು.
ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆ ಭಕ್ತರು ಅಭ್ಯಂಜನ ಸ್ನಾನದೊಂದಿಗೆ ಶಿವನಿಗೆ ಅಭಿಷೇಕ ಮಾಡುವ ಮೂಲಕ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡರು. ದಿನವಿಡೀ ಉಪವಾಸ ವ್ರತ ಕೈಗೊಂಡು ಕೇವಲ ಹಣ್ಣು ಹಂಪಲ ಸೇವಿಸಿ ತಮ್ಮ ನಿತ್ಯ ಕಾಯಕಕ್ಕೆ ವಿರಾಮ ನೀಡಿ ಭಕ್ತಿಯ ಪರಾಕಾಷ್ಠೆ ಮೆರೆದರು. ಇನ್ನು ವಿವಿಧ ದೇಗುಲದಲ್ಲಿ ಶಿವನಾಮ ಸ್ಮರಣೆಯ ಗೀತೆಗಳು ಮಾರ್ದನಿಸಿದವು. ಸಮೀಪದ ಸೂಡಿ ಗ್ರಾಮದ ಶಿವಚಿದಂಬರ ದೇಗುಲದಲ್ಲಿಯೂ ಮಹಾ ಶಿವರಾತ್ರಿ ಪ್ರಯುಕ್ತ ಬೆಳಗಿನ ಜಾವ ಭಕ್ತರು ರುದ್ರಾಭಿಷೇಕ, ವಿಶೇಷ ಪಂಚಾಮೃತ ಅಭಿಷೇಕ ಪೂಜೆ ಸಲ್ಲಿಸಿದರು.

ಶಿವರಾತ್ರಿ ಆಚರಣೆ ವಿಧಾನ
ಮಾಘಮಾಸದ ಕೃಷ್ಣಪಕ್ಷ ತ್ರಯೋದಶಿ ದಿನದಿಂದ ಉಪವಾಸ ಅಥವಾ ಚತುರ್ದಶಿಯ ದಿನವಾದರೂ ಉಪವಾಸ ಮಾಡುವುದು, ಪ್ರಾತಃಕಾಲ ನಿತ್ಯಕರ್ಮಗಳನ್ನು ಮುಗಿಸಿ, ವ್ರತಸಂಕಲ್ಪ ಮಾಡಿ, ಶುದ್ಧ, ಸ್ವಚ್ಛ ಸ್ಥಳದಲ್ಲಿ ಲಿಂಗವನ್ನು ಸ್ಥಾಪಿಸಿ ಪೂಜೆ ಮಾಡುವುದು, ನುಡಿಗೊಮ್ಮೆ ನಡೆಗೊಮ್ಮೆ ಶರಣನೆನ್ನತ್ತಾ ಅಕ್ಕಿ, ಶ್ರೀಗಂಧ, ಕರಿಯೆಳ್ಳು, ಅರ್ಘ್ಯ-ಪಾದ್ಯ-ಆಚಮನ, ಪಂಚಾಮೃತ, ಕಮಲದ ಹೂವು, ಸಕಲಪುಷ್ಪ, ಧೂಪ, ದೀಪ ಕಾಯಿ-ಕರ್ಪೂರಾದಿಗಳಿಂದ ಪೂಜಿಸಲಾಗುತ್ತದೆ. ಈ ಕಾರ್ಯ ಗುರುಗಳ ಮುಖೇನವಾಗಿ ನಡೆದು ಪ್ರಸಾದವನ್ನು ಉಣಬಡಿಸುವುದು ಮತ್ತು ತಮ್ಮ ಶಕ್ತ್ಯನುಸಾರ ಗುರುಗಳಿಗೆ ದಾನ ಧರ್ಮ ಮಾಡುವುದು ವಾಡಿಕೆ. ಇಡೀ ರಾತ್ರಿ ಶಿವಭಜನೆ, ಶಿವಕೀರ್ತನೆ, ಶಿವಕಥಾಸಾರ ಹೀಗೆ ಅನನ್ಯ ರೀತಿಯಿಂದ ಶಿವನನ್ನು ಭಜಿಸುವ ಮೂಲಕ ಆರಾಧಿಸಲಾಗುತ್ತದೆ.

ಪಂಚಾಕ್ಷರಿ ಮಂತ್ರದಿಂದ ಜೀವನ ಪಾವನ
ಲಕ್ಷ್ಮೇಶ್ವರ:  ಶಿವನ ನಾಮಸ್ಮರಣೆಯಿಂದ ನಮ್ಮೆಲ್ಲ ಪಾಪ ಕರ್ಮಗಳು ದೂರಾಗುವುದು. ಶಿವನು ತನ್ನ ಭಕ್ತರನ್ನು ಬೇಡುವುದು ಒಂದು ಬಿಲ್ವಪತ್ರೆಯನ್ನು ಮಾತ್ರ ಎಂದು ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಸ್ವಾಮಿಗಳು ಹೇಳಿದರು.
ಸಮಿಪದ ಮುಕ್ತಿಮಂದಿರದಲ್ಲಿ ಪ್ರತಿ ವರ್ಷದಂತೆ ಮಹಾಶಿವರಾತ್ರಿಯ ದಿನ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಯ್ಯಾಚಾರ ಕಾರ್ಯಕ್ರಮದಲ್ಲಿ ಜಂಗಮ ದೀಕ್ಷೆ ನೀಡಿ, ಅವರು ಆಶೀರ್ವಚನ ನೀಡಿದರು. ವೀರಶೈವರಿಗೆ ಶಿವದೀಕ್ಷೆ ನೀಡುವುದು ಅವಶ್ಯ. ಜಂಗಮ ವಟುಗಳಿಗೆ ಶಿವದೀಕ್ಷೆಯನ್ನು ನೀಡಿ, ಪಂಚಾಕ್ಷರಿ ಮಂತ್ರಗಳ ಗುರು ಮಂತ್ರೋಪದೇಶ ಪಠಣ ಮಾಡಿ, ಸಂಸ್ಕಾರ ನೀಡುವುದರಿಂದ ದೇವರನ್ನು ಒಲಿಸಿಕೊಳ್ಳುವ ಮಾರ್ಗವನ್ನು ತಿಳಿಯಲು ಅನುಕೂಲವಾಗುವುದು. ಶಿವರಾತ್ರಿಯ ಶುಭದಿನದಂದು ಸ್ವರ್ಗದ ಬಾಗಿಲು ತೆರೆದಿರುವುದರಿಂದ ಶಿವನು ಲೋಕಕಲ್ಯಾಣಕ್ಕಾಗಿ ಭೂಮಿಗೆ ಬಂದು ತನ್ನ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ ಎನ್ನುವ ಪ್ರತೀತಿ ಇದೆ. ಇಂತಹ ಶುಭದಿನದಂದು ಶಿವ ಧ್ಯಾನವನ್ನು ಮಾಡಿ ತಮ್ಮ ಪೂರ್ವಜನ್ಮದ ಪಾಪಕರ್ಮಗಳನ್ನು ತೊಳೆಯಲು ಸಾಧ್ಯ ಎಂದು ಹೇಳಿದರು.
ಜಂಗಮರು ಆಚಾರ-ವಿಚಾರ ಸಂಪನ್ನರಾಗಿರಬೇಕು. ಸಾಮರಸ್ಯದಿಂದ ಬಾಳುವುದನ್ನು ಕಲಿಯಬೇಕು, ಕಲಿಸಬೇಕು. ಮುಕ್ತಿಮಂದಿರದ ಲಿಂಗೈಕ್ಯ ಜಗದ್ಗುರು 1008 ರಂಭಾಪುರಿ ಭಗವತ್ಪಾದ ವೀರಗಂಗಾಧರ ಸ್ವಾಮಿಗಳ ಇಚ್ಛೆಯಂತೆ ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗಗಳನ್ನು ಸ್ಥಾಪಿಸಿ, ದಕ್ಷಿಣ ಭಾರತದಲ್ಲಿ ಅತ್ಯಂತ ಪವಿತ್ರ ಕ್ಷೇತ್ರವನ್ನಾಗಿಸುವ ಮಹತ್ಕಾರ್ಯವನ್ನು ಭಕ್ತರ ಸಹಕಾರದಿಂದ ಪೂರ್ಣಗೊಳಿಸುವುದಾಗಿ ಶ್ರೀಗಳು ಹೇಳಿದರು.
ಬೆಳಗ್ಗೆ ಜಂಗಮ ವಟುಗಳಿಗೆ ಲಿಂಗ ಪೂಜೆಯ ವಿಧಿ-ವಿಧಾನಗಳನ್ನು ಹೇಳಿಕೊಡಲಾಯಿತು. ಸುಮಾರು 50ಕ್ಕೂ ಹೆಚ್ಚು ಜಂಗಮ ವಟುಗಳು ಅಯ್ಯಾಚಾರ ದೀಕ್ಷೆ ಮಾಡಿಸಿಕೊಳ್ಳುವ ಮೂಲಕ ಶಿವದೀಕ್ಷೆ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.