ಅಕ್ಷರ ಜತೆ ಪರಿಸರ ಪಾಠ
-ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜೂ. 4
ಖಾಸಗಿ ಶಾಲೆಗಳೆಂದರೆ ಬರೀ ಓದುವುದು, ಹೋಂವರ್ಕ್, ಪ್ರಾಜೆಕ್ಟ್ ವರ್ಕ್ಗಳ ಕಿರಿಕಿರಿ ಎನ್ನುವುದು ಬಹುತೇಕರ ಆರೋಪ. ಆದರೆ 14 ವರ್ಷಗಳಿಂದ ಮುಂಡರಗಿ ಪಟ್ಟಣ ಸೇರಿ ವಿವಿಧ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಇಲ್ಲಿನ ಎಸ್ಎಫ್ಎಸ್ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಅಕ್ಷರದ ಜತೆಗೆ ಪರಿಸರ ಪಾಠ ಮಾಡುವ ಮೂಲಕ ಶಾಲೆ ಆವರಣದಲ್ಲೊಂದು ಸುಂದರ ಉದ್ಯಾನ ನಿರ್ಮಾಣ ಮಾಡಿದ್ದಾರೆ.
ಉತ್ತಮ ಪರಿಸರಕ್ಕೆ ಹೆಸರಾದ ಮುಂಡರಗಿ ಪಟ್ಟಣದ ಗದಗ-ಮುಂಡರಗಿ ರಸ್ತೆಗೆ ಹೊಂದಿಕೊಂಡಿರುವ ಎಸ್ಎಫ್ಎಸ್ ಶಾಲೆ ಆವರಣದಲ್ಲಿ ಕಾಲಿಟ್ಟರೆ ಸಾಕು ವಿವಿಧ ರೀತಿಯ ಗುಲಾಬಿ, ಸಂಪಿಗೆ, ಸೇವಂತಿಗೆ, ಮಲ್ಲಿಗೆ, ವಿವಿಧ ಬಣ್ಣಗಳ ದಾಸವಾಳ, ಚಂಡು ಹೂವಿನ ಗಿಡಗಳು ನೋಡುಗರನ್ನು ಆಕರ್ಷಿಸುತ್ತವೆ.
ಅಲ್ಲದೇ ಅನೇಕ ತರದ ಶೋ ಗಿಡಗಳನ್ನು ಆಕರ್ಷಕವಾಗಿ ಕಟಾವು ಮಾಡಿ ಉದ್ಯಾನ ಬೆಳೆಸಿದ್ದಾರೆ. ಶಾಲೆ ಆವರಣ ಸುತ್ತಲೂ ನೂರಾರು ತೆಂಗಿನ ಮರ, ಅಶೋಕ ಗಿಡಗಳನ್ನು ಬೆಳೆಸಲಾಗಿದೆ.
ತರಕಾರಿಯೂ ಸೈ: ಶಾಲೆ ಆವರಣದಲ್ಲಿಯೇ ಕೈತೋಟ ನಿರ್ಮಿಸಲಾಗಿದೆ. ಹಿರೇಕಾಯಿ, ಬದನೇಕಾಯಿ, ಬೆಂಡೆಕಾಯಿ, ಮೂಲಂಗಿ, ಚೆಳ್ಳವರೆ, ನುಗ್ಗಿಕಾಯಿ, ಕೊತ್ತಂಬರಿ, ಕರಿಬೇವು, ಪಾಲಕ್, ಪುದೀನಾ ಹೀಗೆ ಅನೇಕ ತರಕಾರಿ ಬೆಳೆದು, ಮಕ್ಕಳಿಗೆ ಅವುಗಳ ಮಹತ್ವ ತಿಳಿಸಿಕೊಡಲಾಗುತ್ತದೆ.
ಹಣ್ಣಿನ ಗಿಡಗಳು: ಕೈ ತೋಟದಲ್ಲಿ ಸುಮಾರು 50ಕ್ಕೂ ಹೆಚ್ಚು ಪಪ್ಪಾಯಿ ಗಿಡಗಳು, ಮಾವು, ನಿಂಬೆ, ಬಾಳೆ, ಚಿಕ್ಕು, ಪೇರಲ ಅನೇಕ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಪಪ್ಪಾಯಿ ಗಿಡಗಳು ಈಗಾಗಲೇ ಸಾಕಷ್ಟು ಹಣ್ಣುಗಳನ್ನು ನೀಡಿವೆ. ಮಕ್ಕಳಿಗೆ ಹಣ್ಣು, ಹಣ್ಣಿನ ಗಿಡಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಫಲಿತಾಂಶದಲ್ಲೂ ಎತ್ತಿದ ಕೈ: ಶಾಲೆಯಲ್ಲಿ ಮಕ್ಕಳಿಗೆ ಬೇಕಾಗುವ ಎಲ್ಲ ಸೌಲಭ್ಯಗಳಿವೆ. ಕಂಪ್ಯೂಟರ್ ಶಿಕ್ಷಣ ಜತೆಗೆ ಆಟ-ಪಾಠ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 2011-12, 2012-13, 2013-14ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 100 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಹೆಸರು ಮಾಡಿದೆ.
ಶಾಲೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದು, ಅವರಿಗೆ ಒಳ್ಳೆ ಪರಿಸರದ ಕುರಿತು ಮತ್ತು ನಿತ್ಯ ಬಳಕೆಯ ಹಣ್ಣು, ತರಕಾರಿಗಳ ಕುರಿತು ತಿಳಿಸುವ ಉದ್ದೇಶದಿಂದ ಶಾಲೆ ಆವರಣದಲ್ಲಿ ಉದ್ಯಾನ, ಕೈತೋಟ ನಿರ್ಮಿಸಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿದ್ದೇವೆ. 2 ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿ ಮುಗಿಸಿದ ಅರವಿಂದ್ ಎಂಬ ವಿದ್ಯಾರ್ಥಿ ಪ್ರಸಕ್ತ ವರ್ಷದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 97 ಅಂಕ ಪಡೆದು, ಶಾಲೆ ಕೀರ್ತಿ ಹೆಚ್ಚಿಸಿದ್ದಾನೆ.
- ಪಿ. ಮರಿಯ ಲಾರೆನ್ಸ್, ಸಂತ್ ಫ್ರಾನ್ಸಿಸ್ ಡಿಸೇಲ್ಸ್ ಸ್ಕೂಲ್ ಪ್ರಾಚಾರ್ಯ, ಮುಂಡರಗಿ
ಮಕ್ಕಳನ್ನು ಪಾಠಕ್ಕೆ ಮಾತ್ರ ಸೀಮಿಗೊಳಿಸದೆ ಶಾಲೆ ಆವರಣದಲ್ಲಿ ಸುಂದರ ಉದ್ಯಾನ ನಿರ್ಮಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಎಸ್ಎಫ್ಎಸ್ ಶಾಲೆ ಪ್ರಾಚಾರ್ಯ, ಸಿಬ್ಬಂದಿ ಕಾರ್ಯ ಶ್ಲಾಘನೀಯ. ಇಂದು ಪರಿಸರ ಸಂರಕ್ಷಣೆ ಅತ್ಯಂತ ಅವಶ್ಯ. ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಿಸಬೇಕು.
- ಪ್ರೊ. ಸಿ.ಎಸ್. ಅರಸನಾಳ, ಪರಿಸರವಾದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

