ರೋಣ: ಮಳೆಗಾಗಿ ದೇವರ ಮೊರೆ
-ಪಿ. ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ, ರೋಣ, ಜೂ. 29
ಕೈಕೊಟ್ಟ ಮಳೆಯಿಂದ ಬೆಳೆ ಕಮರುತ್ತಿದ್ದು, ಕೆರೆ- ಬಾವಿಗಳು ಬತ್ತುತ್ತಿದ್ದು, ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ತಾಲೂಕಿನ ಜನತೆ, ರೈತ ಸಮೂದಾಯ ವರುಣದೇವನ (ಮಳೆರಾಯ) ಕೃಪೆಗಾಗಿ ಹರನ (ದೇವರ) ಜಪ-ತಪ, ಗುರ್ಜಿಯಾಟದ ಮೊರೆ ಹೋಗಿದ್ದಾರೆ.
ಮಳೆಗಾಗಿ ರೋಣದ ಜನತೆ ಹೊನ್ನೆತ್ತವ್ವ ದೇವಸ್ಥಾನದ ಎದುರು ಮಣ್ಣೆತ್ತಿನ ಅಮಾವಾಸ್ಯೆ ದಿನದಿಂದ ಅಂದರೆ, ಗುರುವಾರದಿಂದ ಬುಧವಾರ (7 ದಿನ)ದ ವರೆಗೆ 24್ಗ7 ಡೊಳ್ಳು ವಾದನ ಸಪ್ತಾಹದ ಮೂಲಕ ಮಳೆರಾಯನನ್ನು ಬೇಡುತ್ತಿದ್ದು, ಈ ಪೂಜಾ ಕಾರ್ಯದಲ್ಲಿ ತಾಲೂಕಿನಿಂದ 30 ಡೊಳ್ಳು ಕುಣಿತದ ತಂಡಗಳು ಸರದಿಯಂತೆ ಪಾಲ್ಗೊಳ್ಳುತ್ತಿವೆ. ಒಂದು ತಂಡದಲ್ಲಿ 10ರಿಂದ 12 ಜನರಿದ್ದು, ತಂಡವೊಂದಕ್ಕೆ 6 ಗಂಟೆ ಅವಕಾಶ ನೀಡಲಾಗಿದೆ.
2 ದಶಕಗಳ ಹಿಂದೆ ಇದೇ ರೀತಿ ಬರ ಆವರಿಸಿತ್ತು, ಆಗ ಗ್ರಾಮದೇವತೆ ಹೊನ್ನೆತ್ತವ್ವಗೆ ಜಲಾಭಿಷೇಕ, ಭಜನಾ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು, ಆಗ ಮಳೆಯಾಗಿತ್ತು. ಅದರಂತೆಯೇ ಈಗ ಮಳೆಗಾಗಿ ಗ್ರಾಮದೇವತೆ ಮೊರೆ ಹೋಗಿದ್ದೇವೆ ಎನ್ನುತ್ತಾರೆ ಪಟ್ಟಣದ ಹುಚ್ಚಪ್ಪ ನವಲಗುಂದ, ಮೂಕಪ್ಪ ಕಿರೇಸೂರ, ಬಸನಗೌಡ ಪಾಟೀಲ, ಬಸವಣ್ಣೆಪ್ಪ ಗಾಣಿಗೇರ, ಮೈಲಾರಪ್ಪ ಗಾಣಿಗೇರ.
ಗುರ್ಜಿಯಾಟ
ಮಳೆಗಾಗಿ ಪ್ರಾರ್ಥಿಸುವ ವಿವಿಧ ಹರಕೆಗಳಲ್ಲಿ ಗುರ್ಜಿಯಾಟವು ಒಂದಾಗಿದೆ. ತಾಲೂಕಿನ ಕೊತಬಾಳ, ಮುಗಳಿ, ಅರಹುಣಸಿ, ಮೇಲ್ಮಠ, ಹೊಸಳ್ಳಿ, ಜಿಗಳೂರ, ಹೊನ್ನಾಪುರ, ರೋಣ ಪಟ್ಟಣ ಸೇರಿದಂತೆ ಅನೇಕ ಕಡೆಗಳಲ್ಲಿ ಜನತೆ ಗುರ್ಜಿಯಾಟದಲ್ಲಿ ತೊಡಗಿದ್ದಾರೆ. ತಲೆಯ ಮೇಲೆ ತವೆ ಇಟ್ಟುಕೊಂಡು ಅದರ ಮೇಲೆ ಸೆಗಣಿಯಿಂದ ಗುರ್ಜಿ ಸ್ಥಾಪಿಸಿ ಕರಕಿ ಮತ್ತು ಹೂಗಳಿಂದ ಅಲಂಕರಿಸಿರುತ್ತಾರೆ. ಅದರ ಮೇಲೆ ನೀರು ಹಾಕಿಸಿಕೊಳ್ಳುತ್ತ 5 ಸುತ್ತು ತಿರುಗುತ್ತಾರೆ. ಗುರ್ಜಿ ಜತೆಗಿರುವವರು ಗುರ್ಜಿ, ಗುರ್ಜಿ ಎಲ್ಲಾಡಿ ಬಂದೆ, ಹಳ್ಳ ಕೊಳ್ಳ ತಿರುಗಾಡಿ ಬಂದೆ, ಇರ್ಪಡೆ ನಾಗ ಇರಾಡಿ ಬಂದೆ, ಚಂದು ರಾಮ, ಬಂದು ರಾಮ ಬಂದರಕಿನ ಬಾ ಮಳೆಯೇ... ಬಾ ಮಳೆಯೇ ಬಣ್ಣ ಕೊಡುತ್ತೇನೆ ಬಾರಲೇ ಮಳೆಯೇ, ಸುಣ್ಣ ಕೊಡುತ್ತೇನೆ ಸುರಿಯಲೇ ಮಳೆ... ಎಂದು ಹಾಡುತ್ತಾ ಕುಣಿಯುತ್ತಾರೆ.
ಒಣ ಭೂಮಿಯಲ್ಲಿಯೇ ಬಿತ್ತನೆ ಮಾಡಲಾಗಿದೆ. ಮಳೆ ಅನಿಶ್ಚಿತತೆಯಿಂದ ಬದುಕು ಕಷ್ಟಕರವಾಗಿದೆ. ರೈತರ ಮೊಗದಲ್ಲಿ ಹರ್ಷ ಮೂಡುವಂತಾಗಲು ಸಮೃದ್ಧ ಬೆಳೆಗೆ ಸಮರ್ಪಕ ಮಳೆಯಾಗಬೇಕು. ಅದಕ್ಕಾಗಿ ಈ ರೀತಿಯ ಹರಕೆ, ಜಪ, ತಪ, ಅಭಿಷೇಕ ಕೈಂಕರ್ಯದಲ್ಲಿ ತೊಡಗಿದ್ದೇವೆ.
-ಮಲ್ಲು ಅಚ್ಚಿನಗೌಡ್ರ, ಬಸನಗೌಡ ಪ್ಯಾಟಿಗೌಡ್ರ, ಅಮರೇಶ ಹದ್ಲಿ, ಮೇಘರಾಜ ಬಾವಿ, ಬಸಪ್ಪ ಹೂಗಾರ, ಅಶೋಕ ಮೆಣಸಿನಕಾಯಿ, ವೀರಪ್ಪ ಹುರಕಡ್ಲಿ (ರೋಣ ರೈತರು)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

