ರಂಜಾನ್ ಉಪವಾಸ ವ್ರತ ಶುರು
ಗಜೇಂದ್ರಗಡ: ಮುಸ್ಲಿಂ ಬಾಂಧವರು ಸೋಮವಾರದಿಂದ ದೇಶಾದ್ಯಾಂತ ರಂಜಾನ್ ಉಪವಾಸ ವ್ರತವನ್ನು ಆರಂಭಿಸಿದ್ದಾರೆ. ಈ ಮಾಸದಲ್ಲಿ ಬಡವ, ಅನಾಥ, ನಿರ್ಗತಿಕರಿಗೆ ದಾನ, ಧರ್ಮ ಜತೆಗೆ ತಿಂಗಳು ಪೂರ್ತಿ ರೋಜಾ (ಉಪವಾಸ) ಆಚರಣೆಯಿಂದ ಮನುಷ್ಯನ ಅಂತರಂಗ, ಬಹಿರಂಗ ಶುದ್ಧಿಯಾಗಲಿದೆ.
ರಂಜಾನ್ ಎಂದರೇನು?: ಹಿಜರಿ ಶಕೆ ಒಂಬತ್ತನೆ ತಿಂಗಳು ರಂಜಾನ್ ಆಗಿದೆ. ರಮಚ್ ಎಂದರೆ ಅರಬ್ಬಿ ಭಾಷೆಯಲ್ಲಿ ಸುಡುವುದು, ಬೇಗುದಿಯಿಂದ ಕಾಲು ಸುಡುವುದು ಎಂದರ್ಥ. ಅರಬ್ಬಿ ವರ್ಷದ ಒಂಬತ್ತನೆ ತಿಂಗಳು ತುರ್ಕಿಗಳ ಗಣನೆ ಪ್ರಕಾರ ಬೇಸಿಗೆಯಲ್ಲಿ ಬರುವುದರಿಂದ ಇದಕ್ಕೆ ರಂಜಾನ್ ಬಂದಿದೆ ಎಂದು ಉಲ್ಲೇಖಾರ್ಹ.
ರೋಜಾ ಎಂದರೆ ಉಪವಾಸ ವ್ರತ. ಇಸ್ಲಾಂ ಧರ್ಮ ಪಂಚ ಮೂಲಭೂತ ಕರ್ತವ್ಯಗಳಲ್ಲಿ ಒಂದು. ಆಧ್ಯಾತ್ಮಿಕ ಉನ್ನತಿಗೆ, ಚಾರಿತ್ರಿಕ ಪ್ರಗತಿಗೆ, ಆರೋಗ್ಯ ವರ್ಧನೆಗೆ ರೋಜಾ ಇಸ್ಲಾಮೇತರ ಧರ್ಮದಲ್ಲೂ ರೂಢಿಯಲ್ಲಿದೆ. ಇಡೀ ತಿಂಗಳು ರೋಜಾ ಇರುವುದು ಇಸ್ಲಾಂ ಧರ್ಮದ ವೈಶಿಷ್ಟ್ಯ. ದುಃಖದಿಂದ ಪಾರಾಗಲು ಅಲ್ಲಾಹನ ಪ್ರೇಮ ಸಂಪಾದಿಸಲು ರೋಜಾ ಪವಿತ್ರ ಮಾರ್ಗ ಎಂದು ಮುಸ್ಲಿಂ ಬಾಂಧವರು ನಂಬುತ್ತಾರೆ.
ನಿತ್ಯ ಬೆಳಗ್ಗೆ ಫಜ್ರು ನಮಾಜಿನ ವೇಳೆಗಿಂತ ಮೊದಲು ಹಿತಮಿತ ಆಹಾರ ಸೇವಿಸಿ ಸಹರಿ (ರೋಜಾ ಆರಂಭಿಸುವುದು) ಮಾಡುತ್ತಾರೆ. ಇದಕ್ಕೆ ಅನೇಕ ವಿಧಿ ನಿಯಮ ಇದ್ದು ಅದರಲ್ಲಿ ಒಂದು ಹೀಗಿದೆ. 'ನವಾಯಿತನ್ ಆರ್ ಮೊಗದಮ್ ಸೌಮ ರಮಧಾನ್ ಮನ ಫರ್ದಿಲ್ಲಾ ಹಿತಾಲಾ' ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು. ಅಂದರೆ ರೋಜಾ ಸ್ವೀಕೃತಿಯಾಗುತ್ತದೆ.
ಅನಂತರ ಇಡೀ ದಿನ ಆಹಾರ ನೀರು ಸ್ವೀಕರಿಸದೆ ಸೂರ್ಯಾಸ್ತವಾದ ನಂತರ ಮಗರಿಬ್ ನಮಾಜಿನ ವೇಳೆಗೆ ಹಲ್ಲುಜ್ಜಿ ಬಾಯಿ ತೊಳೆದುಕೊಂಡು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಕುಳಿತು ರೋಜಾ ಬಿಡಬೇಕು.
ರೋಜಾ ವ್ರತವನ್ನು ಹನ್ನೆರಡು ವರ್ಷ ಮೇಲ್ಪಟ್ಟ, ಎಲ್ಲ ಸ್ತ್ರೀ ಪುರುಷರಿಗೆ ರೋಜಾ ಕಡ್ಡಾಯವಾಗಿದೆ. ಆದರೆ ಏಳು ವರ್ಷ ಕೆಳಗಿನ ಚಿಕ್ಕಮಕ್ಕಳು, ರೋಗಿಗಳು, ಅಂಗವಿಕಲರು, ಗರ್ಭಿಣಿಯರು, ಬಾಣಂತಿಯರು ಯಾತ್ರಿಕರಿಗೆ ರೋಜಾದಿಂದ ವಿನಾಯಿತಿ ಇದೆ. ರೋಜಾ ಇರುವವರು ಸುಳ್ಳು, ಕಳ್ಳತನ, ಕೋಪ, ಮೋಸ ಮಾಡಿದರೆ ವ್ರತಕ್ಕೆ ಭಂಗವಾದಂತೆ ಎಂಬ ನಂಬಿಕೆ ಇದೆ. ಹೀಗಾಗಿ ಶ್ರದ್ಧಾ, ಭಕ್ತಿಯಿಂದ ಉಪವಾಸ ವ್ರತ ಮಾಡುತ್ತಾರೆ.
ರಂಜಾನ್ ತಿಂಗಳಿನ 21, 23, 25, 27, 29ನೇ ದಿನಗಳನ್ನು ಪವಿತ್ರವೆಂದು ಭಾವಿಸಿ ಮುಸ್ಲಿಮರು ಆ ರಾತ್ರಿಗಳನ್ನು ಅಲ್ಲಾಹನ ಚಿಂತನೆ ಮತ್ತು ಧ್ಯಾನಗಳಲ್ಲಿ ಕಳೆಯುತ್ತಾರೆ.
ಆದರೆ 26ನೇ ರಾತ್ರಿಗೆ ವಿಶೇಷ ಮಹತ್ವ ನೀಡಲಾಗಿದೆ. ಇದಕ್ಕೆ ಶಬ್ಬೆಕದ್ರ ಅಥವಾ ಲೈಲತುಲ್ ಕದ್ರ ಎಂದು ಕರೆಯುತ್ತಾರೆ ಆಬ್ ಎಂದರೆ ಪಾರ್ಶಿಯಲ್ಲಿ ರಾತ್ರಿ ಎಂದು ಕದ್ರ ಎಂದರೆ ಭಾಗ್ಯನಿರ್ಣಯವೆಂದು ಅರ್ಥ. ಆದರೆ, ಭಾರತದಲ್ಲಿ ಶಬ್ಬಕದ್ರ ಎಂಬ ಪದವು ಹೆಚ್ಚು ರೂಢಿಯಲ್ಲಿದೆ.
ಜಕಾತ್: ಪ್ರತಿ ವರ್ಷ ರಂಜಾನ್ ತಿಂಗಳಿನಲ್ಲಿ ಮುಸ್ಲಿಮರು ಜಕಾತ್ ಕೊಡಬೇಕು ಎಂಬ ನಿಯಮ ಇದೆ. ಸಾಮಾಜಿಕ ಸೇವೆ, ದೀನ ದರಿದ್ರರಿಗೆ ಆಹಾರ ಧಾನ್ಯ ಕೊಟ್ಟು ಉಪಕರಿಸುವುದು ಮೂಲ ಉದ್ದೇಶ.
ವಾರ್ಷಿಕ ಉಳಿತಾಯದ ಶೇ. 2ರಷ್ಟು ಭಾಗವನ್ನು ಬಡವರ ಹಿತಕ್ಕಾಗಿ ಪ್ರತಿಯೊಬ್ಬ ಮುಸ್ಲಿಮನು ಕೊಡಬೇಕು. ಇದರ ಹೊರತಾಗಿ ಸದಖಾ (ತಲೆಗಂದಾಯ ಎಂಬ ದಾನ) ಮತ್ತು ಪಿತಾರಾ (ಜೀವದ ತೆರಿಗೆ) ಎಂಬ ದಾನವನ್ನು ರಂಜಾನ್ ತಿಂಗಳ 27ನೇ ದಿನದಿಂದ ಶವ್ವಾಲ್ ತಿಂಗಳಿನ ಆರಂಭದ ದಿನದವರೆಗೆ ಅವಿರತ ನೀಡುವುದು ವಾಡಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

