ಗದಗ

ಈರುಳ್ಳಿ ದರ ಗಗನಮುಖಿ

Published On :

-ಜಗನ್ನಾಥ ಆರ್. ದೇಸಾಯಿ
ರಾಯಚೂರು: ರೈತರು ಮಾರುಕಟ್ಟೆಗೆ ಬೆಳೆ ತಂದಾಗ ಬೆಲೆಯಿಲ್ಲ, ಬೆಲೆಯಿದ್ದಾಗ ಬೆಳೆಯಿಲ್ಲ ಎಂಬಂಥ ಸ್ಥಿತಿಗೆ ಇದು ಉದಾಹರಣೆ. ಸದ್ಯ ರಾಯಚೂರಿನ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗೆ ಉತ್ತಮ ಬೆಲೆಯಿದೆ. ಆವಕದ ಅಭಾವದಿಂದ ಬೆಲೆ ಕುಸಿತ ಸದ್ಯಕ್ಕಿಲ್ಲ ಎಂಬಂತಾಗಿದೆ. ಆದರೆ ಬೆಲೆಯ ಲಾಭ ರೈತರಿಗಿಲ್ಲದಂತಾಗಿದೆ. ಈರುಳ್ಳಿ ದಾಸ್ತಾನಿರಿಸಿದವರು ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದು ಗ್ರಾಹಕರ ಜೇಬಿಗೆ ಬಿಸಿ ತಟ್ಟಿದೆ.
ಕಳೆದೊಂದು ತಿಂಗಳಿನಿಂದ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡಿದ್ದು ಗ್ರಾಹಕರು ಈರುಳ್ಳಿ ಖರೀದಿಸಲೂ ಯೋಚಿಸುವಂತಾಗಿದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ವಿದ್ಯುತ್‌ನ ಬಳಕೆ ಪ್ರಮಾಣ ಹೆಚ್ಚಳಕ್ಕೆ ದಾರಿ ಮಾಡಿದೆ. ಹಾಗಾಗಿ ವಿದ್ಯುತ್ ಕಡಿತವೂ ಹೆಚ್ಚಿದೆ.
ಪರಿಣಾಮ ರೈತರ ಹೊಲದಲ್ಲಿನ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರಲು ಇನ್ನಷ್ಟು ಸಮಯ ಬೇಕಾಗಲಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಈರುಳ್ಳಿ ದರ ಮತ್ತಷ್ಟು ಹೆಚ್ಚಳ ಕಾಣುವುದರಲ್ಲಿ ಸಂಶಯವಿಲ್ಲ. ಸದ್ಯ ದಿನವೂ ಮಾರುಕಟ್ಟೆಗೆ ಆವಕವಾಗುತ್ತಿರುವ ಈರುಳ್ಳಿಯ ಪ್ರಮಾಣ ಕುಸಿತ ಕಂಡಿದ್ದು ಅದರಿಂದಾಗಿ ಲಭ್ಯ ಈರುಳ್ಳಿಯ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಜನತೆ ಈರುಳ್ಳಿ ಖರೀದಿಸುವ ಮುನ್ನ ಆಲೋಚಿಸುವಂಥ ಸ್ಥಿತಿ ನಿರ್ಮಾಣವಾಗಿದೆ.
ಮಳೆಯ ಅಭಾವ: ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭಗೊಂಡರೂ ಮಳೆಯಾಗದಿರುವುದು ರೈತರಲ್ಲಿ ಈಗಾಗಲೇ ಆತಂಕ ತಂದಿದೆ. ನಿರೀಕ್ಷೆಯಂತೆ ಮಳೆ ಸುರಿಯದಿರುವುದು ರೈತರು ಕೃಷಿ ಕಾರ್ಯದಿಂದ ದೂರವುಳಿಯುವಂತೆ ಮಾಡಿದೆ. ನೀರಾವರಿ ಪ್ರದೇಶದಲ್ಲಿ ರಾಯಚೂರು ಹಾಗೂ ಮಾನವಿ ತಾಲೂಕಿನ ಹಲವೆಡೆ ಈರುಳ್ಳಿಯನ್ನು ರೈತರು ಇತ್ತೀಚೆಗೆ ಬಿತ್ತನೆ ಮಾಡಿದ್ದು, ಬೆಳೆ ಮಾರುಕಟ್ಟೆ ಪ್ರವೇಶಿಸಲು ಇನ್ನಷ್ಟು ತಿಂಗಳು ಹಿಡಿಯಲಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿ ಆವಕ ಕುಸಿತ ಕಂಡಿದೆ. ಮೇ ತಿಂಗಳಲ್ಲಿ ದಿನವೂ 200ರಿಂದ 300 ಕ್ವಿಂಟಾಲ್ ಆವಕವಾಗುತ್ತಿದ್ದ ಈರುಳ್ಳಿ ಕಳೆದೊಂದು ವಾರದಿಂದ 100ರಿಂದ 150 ಕ್ವಿಂಟಾಲ್‌ವರೆಗೆ ಮಾತ್ರ ಆವಕವಾಗುತ್ತಿದೆ. ಅದರಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ದಿಢೀರ್ ಏರಿಕೆ ಕಂಡಿದೆ. ಕಳೆದ ಮೇ ತಿಂಗಳಿನಲ್ಲಿ ಈರುಳ್ಳಿ ಧಾರಣೆ ಪ್ರತಿ ಕ್ವಿಂಟಾಲ್‌ಗೆ 1 ಸಾವಿರ ಆಸುಪಾಸಿನಲ್ಲಿತ್ತು.
ಆದರೆ ಜೂನ್ ತಿಂಗಳಿನಲ್ಲಿ ಅದರ ಬೆಲೆ 2 ಸಾವಿರ ಗಡಿ ದಾಟಿದೆ. ಆ ಮೂಲಕ ಈರುಳ್ಳಿ ದಾಸ್ತಾನು ಮಾಡಿಕೊಂಡವರಿಗೆ ಲಾಭದ ಹೊಳೆಯನ್ನೇ ಹರಿಸುತ್ತಿದೆ. ಇದೇ ವೇಳೆ ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರವು ಪ್ರತಿ ಕೆಜಿಗೆ 28ರಿಂದ 30 ತಲುಪಿದ್ದು, ಗ್ರಾಹಕರು ಈರುಳ್ಳಿ ಖರೀದಿಗೆ ಹಿಂದೇಟು ಹಾಕುವಂತಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡಿರುವ ಈರುಳ್ಳಿ ದರವು ಮುಂದಿನ ಒಂದೆರಡು ತಿಂಗಳು ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ರೈತರು ಸದ್ಯ ನಾಟಿ ಮಾಡಿರುವ ಈರುಳ್ಳಿ ಬೆಳೆಯು ಮಾರುಕಟ್ಟೆಗೆ ಬಂದ ನಂತರವಷ್ಟೇ ಆವಕದ ಪ್ರಮಾಣ ಏರಲಿದ್ದು, ಆಗಲೇ ಬೆಳೆ ಇಳಿಕೆ ಸಾಧ್ಯ ಎಂಬ ಮಾತು ಕೇಳಿಬಂದಿದೆ.

ನೀರಿನ ಅಭಾವ
ಗ್ರಾಮೀಣ ಭಾಗದಲ್ಲಿ ಈಗಾಗಲೇ ಮಳೆಯ ಅಭಾವದಿಂದ ಈರುಳ್ಳಿ ಸೇರಿ ಎಲ್ಲ ಬೆಳೆಗಳಿಗೆ ನೀರಿನ ಅಭಾವ ಕಾಡತೊಡಗಿದೆ. ಅದರಲ್ಲೂ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಈರುಳ್ಳಿ ಬೆಳೆಗೆ ವಿದ್ಯುತ್ ಅಭಾವ ಹಾಗೂ ಕೊಳವೆಬಾವಿಯಲ್ಲಿ ತಳಕಚ್ಚಿರುವ ನೀರಿನಿಂದಾಗಿ ಬೆಳೆ ಕೈಗೆ ಬರುವುದು ರೈತರಲ್ಲಿ ಅನುಮಾನ ಮತ್ತು ಆತಂಕ ತಂದೊಡ್ಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ ದರ ಮತ್ತಷ್ಟು ಏರಿಕೆ ಕಾಣುವುದರಲ್ಲಿ ಸಂದೇಹವಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.