ಸಲೀಂ ಸೋಲಿಗೆ ಯಾರ ಕೈವಾಡ?
ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತ ಬೆನ್ನಲ್ಲೇ ಅಸಮಾಧಾನದ ಹೊಗೆ ಬೆಂಕಿಯಾಗಿ ಹೊರಹೊಮ್ಮಿದೆ. ವಿರೋಧದ ನಡುವೆಯೂ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇ ಸೋಲಿಗೆ ಕಾರಣ ಎಂದು ಹೇಳಿಕೆ ನೀಡಿದ ಶಾಸಕ ಕೆ.ಬಿ. ಕೋಳಿವಾಡ, ಸಚಿವ ಎಚ್.ಕೆ. ಪಾಟೀಲ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಹೊರಬಿದ್ದಿದೆ.
ದೇಶಾದ್ಯಂತ ಮೋದಿ ಅಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ದು, ರಾಜ್ಯದ ಅನೇಕ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. ಆದರೆ, ಹಾವೇರಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಸೋಲಿಗೆ ಕೋಳಿವಾಡ, ಸಚಿವ ಎಚ್ಕೆ ಅವರೇ ಕಾರಣ ಎಂಬುದು ಪಕ್ಷದ ಪರಾಜಿತ ಅಭ್ಯರ್ಥಿ ಸಲೀಂ ಅಹ್ಮದ್ ಹಾಗೂ ಕಾರ್ಯಕರ್ತರ ಆರೋಪ. ಇದಕ್ಕೆ ಅವರಿಬ್ಬರು ಚುನಾವಣೆ ವೇಳೆ ನಡೆದುಕೊಂಡ ರೀತಿ ಹಾಗೂ ಫಲಿತಾಂಶದ ನಂತರ ಇವರು ನೀಡಿದ ಹೇಳಿಕೆಯೇ ಸಾಕ್ಷಿ ಎಂಬುದು ಸಲೀಂ ಬೆಂಬಲಿಗರ ಆರೋಪ.
ಬುಗಿಲೆದ್ದ ಅಸಮಾಧಾನ: ಕಳೆದ 15 ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಈ ಬಾರಿ ಆ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಬೇಡ ಎಂದಿದ್ದೆವು. ಆದರೆ, ಎಲ್ಲ ಶಾಸಕರ ಪ್ರತಿರೋಧದ ನಡುವೆಯೂ ಹೈಕಮಾಂಡ್ ಸಲೀಂಗೆ ಟಿಕೆಟ್ ನೀಡಿತು.
ಇದೇ ಪಕ್ಷದ ಸೋಲಿಗೆ ಕಾರಣವಾಯಿತು ಎಂದು ಶಾಸಕ ಕೋಳಿವಾಡ ಹೇಳಿದ್ದರು. ಸೋಲಿನಿಂದ ಕಂಗೆಟ್ಟಿದ್ದ ಕೈ ಕಾರ್ಯಕರ್ತರಿಗೆ ಇಷ್ಟೇ ಸಾಕಾಗಿತ್ತು. ಅಲ್ಪಸಂಖ್ಯಾತರ ಮತ ಬೇಕು, ಟಿಕೆಟ್ ಬೇಡ ಎಂಬ ರೀತಿ ಕೋಳಿವಾಡ ನೀಡಿದ ಹೇಳಿಕೆಗೆ ಜಿಲ್ಲಾದ್ಯಂತ ಆಕ್ರೋಶ ಭುಗಿಲೆದ್ದಿತು. ಎಲ್ಲೆಡೆ ಅವರ ವಿರುದ್ಧ ಪ್ರತಿಭಟನೆಗಳು ನಡೆದವು.
ಟಿಕೆಟ್ ಬಯಸಿದ್ದ ಎಚ್ಕೆ: ರಾಜ್ಯದಲ್ಲೇ ಕೊನೆ ಕ್ಷಣದಲ್ಲಿ ಟಿಕೆಟ್ ನೀಡಿದ್ದು ಹಾವೇರಿ ಹಾಗೂ ಧಾರವಾಡ ಕ್ಷೇತ್ರಕ್ಕೆ. ಇದಕ್ಕೆ ಕಾರಣ ಈ ಎರಡರಲ್ಲಿ ಒಂದು ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡವಿತ್ತು. ತಮ್ಮ ಸೋದರ ಸಂಬಂಧಿ ಡಿ.ಆರ್. ಪಾಟೀಲರಿಗೆ ಟಿಕೆಟ್ ಕೊಡಿಸಲು ಸಚಿವ ಎಚ್.ಕೆ. ಪಾಟೀಲ ಕಸರತ್ತು ನಡೆಸಿದ್ದರು. ಹೈಕಮಾಂಡ್ ಮೇಲೆ ಒತ್ತಡ ತರಲು ಕ್ಷೇತ್ರದ ಎಲ್ಲ ಶಾಸಕರಿಂದ ಪತ್ರಕ್ಕೆ ಸಹಿ ಮಾಡಿಸಿಕೊಟ್ಟಿದ್ದರು. ಆದರೂ ಹೈಕಮಾಂಡ್ ಅಹ್ಮದ್‌ಗೆ ಟಿಕೆಟ್ ನೀಡಿತ್ತು. ಆದ್ದರಿಂದ ಚುನಾವಣೆ ಸಮಯ ಸಚಿವ ಎಚ್ಕೆ ಸರಿಯಾಗಿ ಕೆಲಸ ಮಾಡಲಿಲ್ಲ ಎಂಬುದು ಸಲೀಂ ಆರೋಪ.
ಸಲೀಂ ಆಕ್ರೋಶ: ಈ ಬಾರಿ ಗೆಲುವು ತಮ್ಮದೇ ಎಂದುಕೊಂಡಿದ್ದ ಸಲೀಂಗೆ ಪಕ್ಷದೊಳಗಿನವರೇ ತಮ್ಮ ಸೋಲಿಗೆ ಕಾರಣರಾಗಿದ್ದು ಗೊತ್ತಿದ್ದರೂ ಬಹಿರಂಗ ಹೇಳಿಕೆ ನೀಡಿರಲಿಲ್ಲ. ಆದರೆ, ಕೋಳಿವಾಡರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬಾರದಿತ್ತು ಎಂದಿದ್ದು ಸಲೀಂರನ್ನು ಕೆಣಕಿತು.
ಕೋಳಿವಾಡ, ಎಚ್.ಕೆ. ಪಾಟೀಲರೇ ತಮ್ಮ ಸೋಲಿಗೆ ಪ್ರಮುಖ ಕಾರಣ. ಚುನಾವಣೆಯಲ್ಲಿ ಪಕ್ಷದ ಪರ ಅವರಿಬ್ಬರೂ ಯಾವುದೇ ಕೆಲಸ ಮಾಡಿಲ್ಲ ಎಂದರು. ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡು ಕೆಪಿಸಿಸಿ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಮುಂದೆ ಎಐಸಿಸಿಗೂ ಅವರಿಬ್ಬರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಇಬ್ಬರಿಗೂ ಸಹಿ ಮಾಡಿದ ಶಾಸಕರು: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಡಿ.ಆರ್. ಪಾಟೀಲರಿಗೆ ಟಿಕೆಟ್ ಕೊಡಬೇಕು ಎಂದು ಹೈಕಮಾಂಡ್‌ಗೆ ಸಚಿವ ಎಚ್ಕೆ ಬರೆದ ಪತ್ರಕ್ಕೆ ಎಲ್ಲ ಕಾಂಗ್ರೆಸ್ ಶಾಸಕರಿಂದ ಸಹಿ ಪಡೆಯಲಾಗಿತ್ತು. ಆಮೇಲೆ ಸಲೀಂ ಅವರೂ ಪತ್ರಕ್ಕೆ ಸಹಿ ಕೊಡುವಂತೆ ಶಾಸಕರನ್ನು ಕೇಳಿಕೊಂಡಿದ್ದಾರೆ. ಇಬ್ಬರೂ ಮುಖಂಡರು ಬೇಕು ಎಂಬ ಕಾರಣಕ್ಕಾಗಿ ಕೋಳಿವಾಡ, ಎಚ್.ಕೆ. ಪಾಟೀಲರನ್ನು ಹೊರತುಪಡಿಸಿ ಉಳಿದ ಶಾಸಕರು ಸಲೀಂರನ್ನು ಬೆಂಬಲಿಸಿ ಸಹಿ ಮಾಡಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ನ ಶಾಸಕರೊಬ್ಬರು.
ಈ ಕುರಿತು ಸಲೀಂರನ್ನು ಪತ್ರಿಕೆ ಮಾತನಾಡಿಸಿದಾಗ, ಈ ಸಲ ತಮಗೆ ಗೆಲ್ಲುವ ಎಲ್ಲ ಅವಕಾಶವಿತ್ತು. ಆದರೆ ಸೋಲಿಗೆ ಸಚಿವ ಎಚ್.ಕೆ. ಪಾಟೀಲ, ಶಾಸಕ ಕೋಳಿವಾಡರೇ ಕಾರಣ. ಚುನಾವಣೆ ಸಂದರ್ಭ ಅವರು ಪಕ್ಷದ ಪರ ಕೆಲಸ ಮಾಡಿಲ್ಲ. ಈ ಕುರಿತು ಹೈಕಮಾಂಡ್‌ಗೆ ದೂರು ನೀಡುತ್ತೇನೆ ಎಂದರು.
ಸೋಲಿನ ಬಳಿಕ ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಭಿನ್ನಮತ ಮತ್ತಷ್ಟು ಸ್ಫೋಟಗೊಂಡಿದೆ. ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ. ಮಂತ್ರಿ ಪದವಿ ಕನಸಿನಲ್ಲಿದ್ದ ಕೋಳಿವಾಡರಿಗೆ ತಮ್ಮ ಹೇಳಿಕೆಯೇ ಬಿಸಿತುಪ್ಪವಾಗಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಅಲ್ಪಸಂಖ್ಯಾತರು ಕಾಂಗ್ರೆಸ್ ಮೇಲೆ ಮುನಿಸಿಕೊಳ್ಳುವಂತೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

