ನಮ್ಮನ್ನು ನಂಬಿ, ಪ್ಲೀಸ್...!
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.1
ಸಣ್ಣಪುಟ್ಟ ಜಗಳಗಳು, ಗೊಂದಲಗಳು ಆಗಿವೆ, ಇದರಲ್ಲಿ ಯಾವುದೇ ಸುಳ್ಳಿಲ್ಲ, ಹಾಗಂತ ಅಭಿವೃದ್ಧಿ ವಿಚಾರದಲ್ಲಿ ಕೊರತೆ ಮಾಡಿಲ್ಲ. ಸಾಕಷ್ಟು ಹಣ ಬಿಡುಗಡೆಯಾಗಿ ಅಭಿವೃದ್ಧಿಯೂ ಆಗಿದೆ. ಹಿಂದಿನ ತಪ್ಪುಗಳಿಂದ ಪಾಠ ಕಲಿತು ಮುಂದೆ ಅವುಗಳು ಪುನರಾವರ್ತನೆಯಾಗದಂತೆ ಎಚ್ಚರಿದಿಂದ ಇರುತ್ತೇವೆ. ನಮ್ಮನ್ನು ನಂಬಿ...
ಹೀಗೆಂದು ಹೇಳಿದವರು ಬಿಜೆಪಿ ನಾಯಕಮಣಿಗಳು. ಬಿಜೆಪಿಯಿಂದ ನಡೆಯುತ್ತಿರುವ ಸಾಧನೆಯನ್ನು ಸಾರಿ ಹೇಳುವ ವಿಜಯ ಸಂಕಲ್ಪ ಸಮಾವೇಶದ ಅಂಗವಾಗಿ ಸೋಮವಾರ ನಗರದ ಎನ್ವಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ನಾಯಕರೆಲ್ಲರು ಒಂದಿಲ್ಲೊಂದು ರೂಪದಲ್ಲಿ ತಮ್ಮ ಮಾತುಗಳಲ್ಲಿ ಈ ರೀತಿ ಕೋರಿದ್ದು ವಿಶೇಷವಾಗಿತ್ತು.
ನಮ್ಮನ್ನು ಕ್ಷಮಿಸಿ: ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಮಾತನಾಡಿ, ಸೇರಿದ್ದ ಸಭಿಕರ ಮುಂದೆ ಜಗಳಗಳಿಗಾಗಿ ನಮ್ಮನ್ನು ಕ್ಷಮಿಸಿ ಎಂದು ಕೋರಿದರಲ್ಲದೆ ಬರುವ ದಿನಗಳಲ್ಲಿ ಇದರಿಂದ ಹೊರಬರುತ್ತೇವೆ. ಇನ್ನೂ ಹೆಚ್ಚಿನ ಜನಪರವಾದಂತಹ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಶೆಟ್ಟರ್ ಮಾತನಾಡಿ, ಹೈ- ಕ ಭಾಗಕ್ಕೆ ಬಿಜೆಪಿ ಸರ್ಕಾರ ಏನೆಲ್ಲಾ ಕೊಡುಗೆ ನೀಡಿದೆ ಎಂಬುದನ್ನು ಹೇಳುತ್ತ ಈ ಭಾಗದ ಸರ್ವತೋಮುಖ ಪ್ರಗತಿಗೆ ಬಿಜೆಪಿ ಸರ್ಕಾರ ಸಾಕಷ್ಟು ಲಕ್ಷ ನೀಡಿದೆ ಎಂದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ಖರ್ಗೆ- ಧರಂಸಿಂಗ್ರನ್ನು ಈ ಭಾಗದಲ್ಲಿನ ರಾಜಕೀಯದ ಸಂಗ್ಯಾ- ಬಾಳ್ಯಾ ಎಂದು ಲೇವಡಿ ಮಾಡಿದರಲ್ಲದೆ ಇವರು 4 ದಶಕಗಳ ಕಾಲ ರಾಜಕೀಯದಲ್ಲಿದ್ದರೂ ಈ ಭಾಗ ನಿರೀಕ್ಷಿತ ಪ್ರಗತಿ ಸಾಧಿಸದೆ ಮುಗ್ಗರಿಸಿದೆ ಎಂದು ವಿಷಾದಿಸಿದರು.
ಪ್ರಗತಿ ಬಗ್ಗೆ ಲೆಕ್ಕ ಕೊಡಲಿ: ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ಸದಾಕಾಲ ಅಧಿಕಾರದಲ್ಲಿದ್ದ ಖರ್ಗೆ- ಧರಂ ಇಬ್ಬರೂ ಇಲ್ಲಿನ ಪ್ರಗತಿ ಬಗ್ಗೆ ಲೆಕ್ಕ ಕೊಡಲಿ, ನಾವೂ ಬಿಜೆಪಿ ಸರ್ಕಾರದಲ್ಲಿ ಏನೆಲ್ಲಾ ಪ್ರಗತಿ ಈ ಭಾಗಕ್ಕೆ ಮಾಡಿದ್ದೇವೆ ಎಂಬುದರ ಲೆಕ್ಕ ನೀಡುತ್ತೇವೆ. ಹಿಂದುಳಿದ ನೆಲದ ಪ್ರಗತಿಗೆ ನಮ್ಮದೇ ಲಕ್ಷ ಹೆಚ್ಚಲಿದೆ. ಹಾಗಾಗದಿದ್ದರೆ ರಾಜಕೀಯದಿಂದಲೇ ದೂರ ಸರಿಸುತ್ತೇವೆ ಎಂದು ಸವಾಲು ಹಾಕಿದರು.
ನಾಯಕರ ಮಾತುಗಳಲ್ಲಿ ಸಿಂಹಪಾಲು ಖರ್ಗೆ- ಧರಂ ಇಬ್ಬರನ್ನು ತೆಗಳಲಿಕ್ಕೇ ಮೀಸಲಾಗಿತ್ತು. ಉಳಿದ ಸಮಯ ಸರ್ಕಾರದ ಸಾಧನೆ, ಹಲವು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಹೇಳಲಾಯ್ತು.
ರಾಜ್ಯ ಪ್ರ. ಕಾರ್ಯದರ್ಶಿ ರಘುನಾಥ ಮಲ್ಕಾಪುರೆ, ಅಮರನಾಥ ಪಾಟೀಲ್, ಸಚಿವ ರೇವುನಾಯಕ ಬೆಳಮಗಿ, ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್, ವಾಲ್ಮಿಕಿ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಕೆ.ಬಿ. ಶಾಣಪ್ಪ, ಶಶಿಲ್ ನಮೋಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಪಾಲಿಕೆ, ನಗರಸಭೆ ಮತ್ತು ಪುರಸಭೆ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

