ಹೈ-ಕ ನೆಲದಲ್ಲಿ ಕೆಂಡದ ಮಳೆ...!
ವಿಶೇಷ ವರದಿ
ಕ.ಪ್ರಭ. ವಾರ್ತೆ ಗುಲ್ಬರ್ಗ ಏ.10
ಈ ಬೇಸಿಗೆಯ ಅತಿ ಹೆಚ್ಚಿನ ತಾಪಮಾನ ಹೈ-ಕ ನೆಲದ ಜಿಲ್ಲೆಯಲ್ಲಿ ದಾಖಲಾಗಿದೆ. ಕಳೆದೆರೆಡು ದಿನಗಳಿಂದ ಈ ಜಿಲ್ಲೆಯಲ್ಲಿ ಪಾದರಸ ಮಟ್ಟ 42.6 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಜ್ಯ ಹವಾಮಾನ ಇಲಾಖೆ ಮೂಲಗಳು ಈ ಸಂಗತಿಯನ್ನು ಖಡಿತಪಡಿಸಿವೆ.
ಹವಾಮಾನ ಇಲಾಖೆ ಮೂಲಗಳ ಪ್ರಕಾರ, ಕಳೆದ ಬಾರಿ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ 41.5 ಡಿಗ್ರಿ ತಾಪಮಾನ ದಾಖಲಾಗಿತ್ತು. ಈ ಬಾರಿ ಏಪ್ರಿಲ್ ತಿಂಗಳಲ್ಲೇ ಬಿಸಿಲು- ಪಾದರಸ ಹೈಜಂಪ್ ಮಾಡಿದೆ. ಇದರಿಂದ ಹೈ-ಕ ನೆಲ ಕಾದ ಕಾವಲಿಯಂತಾಗಿದೆ.
ಮೊದಲೇ ನೀರು- ನೆರಳಿಗೆ ಬರ ಇರುವ ಈ ಭಾಗದಲ್ಲಿ ಬೇಸಿಗೆ ಬಲು ಜೋರಾಗಿ ಬಂದಿದ್ದರಿಂದ ಇಲ್ಲಿನ ಸಕಲ ಜೀವರಾಶಿಗಳು ಕಂಗೆಟ್ಟಿವೆ. ಬೆಳಗ್ಗೆ 7 ಗಂಟೆಯೊಂದಿಗೇ ಸೂರ್ಯದೇವ ತನ್ನ ಪ್ರಖರ ಕಿರಣಗಳೊಂದಿಗೆ ಇಡೀ ದಿನ ಸವಾರಿ ಮಾಡುತ್ತಿರುವುದರಿಂದ ಎಲ್ಲೆಡೆ ಬಿಸಿ ಹೆಚ್ಚುತ್ತಲೇ ಸಾಗಿದೆ.
ಮಂಗಳವಾರವಂತೂ ಗುಲ್ಬರ್ಗದಲ್ಲಿ ತಾಪಮಾನ 42.6 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿತ್ತು. ಇದು ಇಡೀ ರಾಜ್ಯದ 30 ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ಈ ಬೇಸಿಗೆಯ ಅತ್ಯಂತ ಹೆಚ್ಚಿನ ತಾಪಮಾನವಾಗಿ ದಾಖಲಾಗಿದೆ.
ಹೆಚ್ಚಿದ ಧಗೆ- ಸೆಕೆ: ಬೆಳಗಾಗುತ್ತಿದ್ದಂತೆಯೇ ಈ ಭಾಗದಲ್ಲಿ ವಾತಾವರಣದಲ್ಲಿ ಬಿಸಿ ಅನುಭವಕ್ಕೆ ಬರಲಾರಂಭಿಸಿದೆ. ಮೂಡಣದಿಂದ ಸೂರ್ಯನ ಪಯಣ ಸಾಗುತ್ತಿದ್ದಂತೆಯೇ ನಿಧಾನವಾಗಿ ಕಾವೇರುವ ವಾತಾವರಣ ಪಡುವಣದಲ್ಲಿ ಸೂರ್ಯಾಸ್ತವಾದ ನಂತರವೂ ಕಾದ ಕಾವಲಿಯಾಗಿಯೇ ಇರುತ್ತದೆ.
ಹೀಗಾಗಿ ತೊಟ್ಟಿಯಲ್ಲಿ, ಟ್ಯಾಂಕರ್ಗಳಲ್ಲಿ ಸಂಗ್ರಹಿಸಿರುವ ನೀರು ಕಾದು ಕುಳಿತಿರುತ್ತದೆ. ಕುಡಿಯಲೂ ತುಂಬಿಟ್ಟ ನೀರು ಬೇಸಿಯೇರಿರುತ್ತದೆ. ನಲ್ಲಿಗಳ ಕೊಳವೆಗಳಲ್ಲಿಯೂ ಬಿಸಿ ನೀರೇ ಹರಿದು ಬರುತ್ತದೆ. ಹೀಗಾಗಿ ಬೇಸಿಗೆಯ ಅವಧಿ ಪೂರ್ತಿ ಹೈ-ಕ ನೆಲದಲ್ಲಿ ಈ ಬಿಸಿ ಅನುಭವ ಇದ್ದೇ ಇರುತ್ತದೆ.
ನೆಲದ ಮೇಲೆ ಕಾಲಿಟ್ಟರೆ ಕೆಂಡ: ಏಪ್ರಿಲ್ ತಿಂಗಳಲ್ಲೇ ಬಿಸಿಲು ತನ್ನ ಪ್ರತಾಪ ಪ್ರಕಟಿಸಲಾರಂಭಿಸಿದೆ. ಇನ್ನೂ ಮೇ ತಿಂಗಳಲ್ಲಿ ಅದೆಂತಹ ತಾಪಮಾನ ಕಾದಿದೆಯೋ ಎಂದು ಜನ ಹೌಹಾರಿದ್ದಾರೆ. ಏಕೆಂದರೆ 2010ರ ಮೇ ತಿಂಗಳ 13ರಂದು ಗುಲ್ಬರ್ಗ ಜಿಲ್ಲೆಯಲ್ಲಿ ತಾಪಮಾನ 48.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಇಡೀ ದೇಶದಲ್ಲಿನ ಹವಾಮಾನ ತಜ್ಞರ ಗಮನ ಸೆಳೆದಿತ್ತು. ಅಂತರ್ಜಲ ಮಟ್ಟ 500 ಅಡಿ ಆಳದಲ್ಲಿ ಹುದುಗಿಕೊಂಡಿದೆ, ಮೇಲ್ಮೈಯಲ್ಲಿ ಇರುವ ನೀರೆಲ್ಲವೂ ಬತ್ತಿದ್ದರಿಂದ ಕೆರೆ- ಕಟ್ಟೆಗಳು ಖಾಲಿ, ನದಿ ಪಾತ್ರಗಳಲ್ಲಿಯೂ ನೀರಿಲ್ಲ. ಹೀಗಾಗಿ ಹೈ- ಕ ನೆಲದಲ್ಲಿ ಈ ಬೇಸಿಗೆ ಕೆಂಡದ ಮಳೆಯ ಅನುಭವ ನೀಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

