ಪಕ್ಷದ ತೀರ್ಮಾನಕ್ಕೆ ಬದ್ಧ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ13
ಇಲ್ಲಿಯ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷ ನನಗೆ ಟಿಕೆಟ್ ನೀಡಿದೆ. ಒಂದು ವೇಳೆ ಅಭ್ಯರ್ಥಿಯನ್ನು ನಾಯಕರು ಬದಲಾವಣೆ ಮಾಡಿದರೆ ಅವರ ತೀರ್ಮಾನಕ್ಕೆ ನಾನು ಬದ್ಧ ಎಂದು ಪಕ್ಷದ ಅಭ್ಯರ್ಥಿ ಚಂದ್ರಶೇಖರಗೌಡ ಮಾಗನೂರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಪಕ್ಷದ ಕೆಲವು ನಾಯಕರು ನಾನು ಸ್ಥಳಿಯ ಅಭ್ಯರ್ಥಿಯಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ನಾನು ಈ ಹಿಂದೆ ಪಕ್ಷದ ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷನಾಗಿ, ಇನ್ನಿತರ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸ್ಥಳಿಯ ನಾಯಕರ ಹಾಗೂ ಕಾರ್ಯಕರ್ತರ ಒಡನಾಟ ಹೊಂದಿದ್ದೇನೆ. ಅಸಮಧಾನಗೊಂಡಿರುವ ನಾಯಕರನ್ನು ಭೇಟಿಯಾಗಿ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದೇನೆ. ಪಕ್ಷದ ಹಿರಿಯ ನಾಯಕರು ಕೂಡ ಅವರನ್ನು ಭೇಟಿಯಾಗಿ ಮಾತನಾಡಲಿದ್ದಾರೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಿ ಅವರು ಕೂಡ ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಅಭಿವೃದ್ಧಿಗೆ ಶ್ರಮಿಸುವೆ: ಯಾದಗಿರಿ ಮತಕ್ಷೇತ್ರವು ನೀರಾವರಿ ಸೌಲಭ್ಯಗಳಿಂದ ವಂಚಿತವಾಗಿದೆ. ಪರಿಣಾಮ ರೈತರು ಸಂಕಷ್ಟದಲ್ಲಿದ್ದಾರೆ. ನಾನು ಮೊದಲಿನಿಂದಲೂ ನಾರಾಯಣಪುರ ಜಲಾಶಯ ವ್ಯಾಪ್ತಿಯ ರೈತರ ಜಮೀನಿಗೆ ನೀರು ಹರಿಸಲು ಹಾಗೂ ಬತ್ತದ ಬೆಳೆಗೆ ಸೂಕ್ತ ದರ ನಿಗದಿ ಪಡಿಸಲು ರೈತರೊಂದಿಗೆ ಹೋರಾಟ ಮಾಡಿದ್ದೇನೆ. ಮತಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡಿ ರೈತರ ಮುಖದಲ್ಲಿ ನಗುತರಲು ಹಾಗೂ ಬಿಜೆಪಿ ಸರ್ಕಾರ ಮಾಡಿರುವ ನೂತನ ಜಿಲ್ಲಾ ಕೇಂದ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಇಲ್ಲಿನ ಬೆಜೆಪಿ ಶಾಸಕನಾಗಿ ಆಯ್ಕೆಯಾಗಬೇಕೆಂಬ ಛಲದಿಂದ ಪಕ್ಷದ ಟಿಕೆಟ್ ಪಡೆದು ಹೋರಾಟ ಮಾಡಿ ಮತದಾರರ ಆಶೀರ್ವಾದ ಢಿಪಡೆಯಲು ರಾಜಕೀಯ ರಣತಂತ್ರ ರೂಪಿಸಿದ್ದೇನೆ. ಅದಕ್ಕೆ ಸ್ಥಳೀಯ ಹಿರಿಯ ನಾಯಕರು ಹಾಗೂ ಪಕ್ಷದ ಯುವ ಕಾರ್ಯಕರ್ತರ ಪಡೆ ನನ್ನೊಂದಿಗಿದೆ. ಈ ಚುನಾವಣೆಯಲ್ಲಿ ನಾನು ಸೋತರೂ, ಗೆದ್ದರೂ ಇಲ್ಲಿಯೇ ಮನೆ ಮಾಡಿ ಪಕ್ಷದ ಸಂಘಟನೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.
ನಾಳೆ ನಾಮಪತ್ರ ಸಲ್ಲಿಕೆ: ಕಾರ್ಯಕರ್ತರೊಂದಿಗೆ ಸೋಮವಾರ ನಾಮಪತ್ರ ಸಲ್ಲಿಸಲಿದ್ದೇನೆ. ಈಗಾಗಲೇ 20ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡಿದ್ದೇನೆ. ಮತದಾರರಿಂದ ಉತ್ತಮ ಪತ್ರಿಕ್ರಿಯೆ ಬಂದಿದೆ ಎಂದು ಹೇಳಿದರು.
ಚನ್ನಕುಮಾರ, ಬಸಣ್ಣಗೌಡ ನಾಯ್ಕಲ್, ಪ್ರಶಾಂತರಡ್ಡಿ, ಮಲ್ಲಿಕಾರ್ಜುನ ಗುಳೆದ, ಮಹೆಂದ್ರಕುಮಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

