ಗುಲ್ಬರ್ಗಾ

ವಾಮಮಾರ್ಗ ಹಿಡಿದ ಬಿಜೆಪಿ

Published On :

ಶಹಾಪುರ: ಜನತೆಯ ಅನುಕಂಪ ಗಳಿಸಲು ತತ್ವ ಸಿದ್ಧಾಂತವೆಂದು ಬೊಗಳೆ ಬಿಟ್ಟ ಬಿಜೆಪಿ ಸರ್ಕಾರ ಕೇವಲ ವಾಮಮಾರ್ಗದ ಮೂಲಕ ಶಾಸಕರನ್ನು ಖರೀದಿಸಿ ಶಾಸನಸಭೆಯ ಮರ್ಯಾದೆ ಹಾಳು ಮಾಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು.
ಪಟ್ಟಣದಲ್ಲಿ ಮಂಗಳವಾರ ಶಹಾಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಪರ ಮತ ಯಾಚಿಸಿ ಮಾತನಾಡಿದರು. ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಹಾಗೂ ಕೆಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಕೇವಲ ಅಧಿಕಾರದ ಹಪಾಪಿತನದಿಂದ ಯಡಿಯೂರಪ್ಪನವರು ಭ್ರಷ್ಟಾಚಾರವೆಸಗಿ ಜೈಲಿಗೆ ಹೋದರು. ಕೆಲ ಸಚಿವರು ಜೈಲು ಸೇರಿದ್ದು ಅವರ ಸರ್ಕಾರಗಳ ಸಾಧನೆ. ಜನತೆ ಕೊಟ್ಟಂತಹ ಪವಿತ್ರವಾದ ಜವಾಬ್ದಾರಿ ನಿರ್ವಹಿಸದೇ ಅಧಿಕಾರ ದುರುಪಯೋಗ ಪಡೆದರು. ಕಾಂಗ್ರೆಸ್ 45 ವರ್ಷ ರಾಜ್ಯವಾಳಿದರೂ ಇಂಥ ಅವ್ಯವಸ್ಥೆ ಒಮ್ಮೆಯೂ ಬರಲಿಲ್ಲ. ಯಾರೊಬ್ಬರೂ ಜೈಲಿಗೆ ಹೋಗಿಲ್ಲ. ಬಿಜೆಪಿಯವರು ಮಾತೆತ್ತಿದರೆ 5 ವರ್ಷದಲ್ಲಿ ಎಲ್ಲವನ್ನೂ ಮಾಡಿದ್ದೇವೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಮತದಾರರಲ್ಲಿ ಮನವಿ: ಮಧ್ಯಾಹ್ನದ ಬಿಸಿಯೂಟ, ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಸರಬರಾಜು, ಆಲಮಟ್ಟಿ, ನಾರಾಯಣಪುರ ಅಣೆಕಟ್ಟೆಯಿಂದ ನೀರಾವರಿ ಸೌಲಭ್ಯ, 22 ಬ್ಯಾರೇಜ್‌ಗಳ ನಿರ್ಮಾಣ, ವಿದ್ಯುತ್ ಉತ್ಪಾದನೆ ಇವೆಲ್ಲ ಯಾರು ಮಾಡಿದ್ದಾರೆಂಬ ಪರಿಜ್ಞಾನವಿಲ್ಲದೇ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ಹೇಗೆ ಹೊಡೆಯಬೇಕು ಎಂಬ ವಿಚಾರ ಮಾಡಿದರೇ ಹೊರತು ಅಭಿವೃದ್ಧಿಯನ್ನು ಮರೆತರು. ಸ್ಥಿರ ಸರ್ಕಾರ ರಚನೆಗೆ ಮತ್ತು ಸಂವಿಧಾನ 371ನೇ ಕಲಂ ತಿದ್ದುಪಡಿ ಅನುಷ್ಠಾನ ಕುರಿತಂತೆ ಈ ಭಾಗದ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆರಿಸಿ ಕಳಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಹಿರಿಯ ಮುಖಂಡ ಇಕ್ಬಾಲ ಅಹ್ಮದ್ ಸರಡಗಿ ಮಾತನಾಡಿ, ಅಡ್ಡ ಮತದಾನ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದು ಕೆಲವರು ಮಾಡಿದ ಅಪಪ್ರಚಾರ ಎಂದು ದರ್ಶನಾಪುರ ಅವರನ್ನು ಸಮರ್ಥಿಸಿಕೊಂಡರು.  ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಈ ಭಾಗದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದು, ಮುಂದ ಇನ್ನೂ ಹೆಚ್ಚು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಸಂಸದ ಧರ್ಮಸಿಂಗ್, ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಅಲ್ಲಂಪ್ರಭು ಪಾಟೀಲ್, ಚಂದ್ರಶೇಖರ ಆರಬೋಳ, ಬಸವರಾಜಪ್ಪಗೌಡ ದರ್ಶನಾಪುರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.