ಗುಲ್ಬರ್ಗಾ

ವಲ್ಯಾಪುರೆ ಗೆಲವು ಖಚಿತ: ಅಜೀತ್

Published On :

ಚಿಂಚೋಳಿ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿದ ಮಾಜಿ ಸಚಿವ ಕೆಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಅವರ ಗೆಲವು ಖಚಿತ ಎಂದು ಎಪಿಎಂಸಿ ನಿರ್ದೇಶಕ ಅಜೀತ್ ಬಾಬುರಾವ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಬೈವಾಡ, ಧನಗರ ಗಲ್ಲಿ, ಜೋಶಿ ಗಲ್ಲಿ, ಚೋಟಿ ದರ್ಗಾ, ಬ್ರಾಹ್ಮಣ ಗಲ್ಲಿ, ಮೋಮಿನಪುರ ಮುಂತಾದ ವಾರ್ಡ್‌ಗಳಲ್ಲಿ ತಮ್ಮ ಕೆಜೆಪಿ ಕಾರ್ಯಕರ್ತರೊಂದಿಗೆ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಪಂ ಸದಸ್ಯರಾದ ಮೊಗಲಪ್ಪ ಕರಕಟ್ಟಿ, ವೀರಣ್ಣ ಬಬಲಾದಿ, ರವಿ ಹೊಸಬಾವಿ, ಮಾಜಿ ಸದಸ್ಯರಾದ ಕಾಶಿನಾಥ ನಾಟೀಕಾರ, ಜಗನ್ನಾಥ ಗುತ್ತೇದಾರ, ಸಂತೋಷ ಗಡಂತಿ ಮತ್ತು ಕೆಜೆಪಿ ಮುಖಂಡರಾದ ರಾಜಶೇಖರ ಮಜ್ಜಗಿ, ಮಧುಕರ ಕೊಳ್ಳೂರ, ರಾಜಶೇಖರ ಸಾಲೇಬೀರನಳ್ಳಿ ಇದ್ದರು.

'ಚಿಂಚನಸೂರರಿಂದ ಕ್ಷೇತ್ರ ಲೂಟಿ'
ಗುರುಮಠಕಲ್:
ಶಾಸಕರಿಂದ ಗುರುಮಠಕಲ್ ಮತಕ್ಷೇತ್ರ ಸಂಪೂರ್ಣವಾಗಿ ಲೂಟಿಯಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಆರೋಪಿಸಿದರು. ಮತಕ್ಷೇತ್ರದ ಶಿವಪುರ, ರಾಂಪುರ, ಸಿದ್ದಾಪುರ, ದೇವರಹಳ್ಳಿ ಹಾಗೂ ಗಾಜರಕೋಟ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ಪರ ಮತಯಾಚಿಸಿ ಅವರು ಮಾತನಾಡಿದರು. ಚಿಂಚನಸೂರ ಕಳೆದ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. 40 ವರ್ಷಗಳಿಂದ ನಾಗನಗೌಡ ಕಂದಕೂರ ರಾಜಕೀಯದಲ್ಲಿದ್ದು, ಸೋತರೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅನ್ಯ ಅಭ್ಯರ್ಥಿಗಳಂತೆ ಕ್ಷೇತ್ರ ಬಿಟ್ಟು ಹೋಗಿಲ್ಲ. ನಮ್ಮ ಕುಟುಂಬದ ಬಗ್ಗೆ ಹಲವಾರು ಜನ ಅಪಪ್ರಚಾರ ನಡೆಸಿದ್ದು, ಅದಕ್ಕೆ ಕಿವಿಗೊಡದೆ ಒಂದು ಬಾರಿ ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿಗಾಗಿ ಜೆಡಿಎಸ್‌ನ ನಾಗನಗೌಡರವರಿಗೆ ಮತ ಹಾಕಿ ಆರಿಸಿ ತನ್ನಿ ಎಂದು ಮನವಿ ಮಾಡಿದರು.

'ಕಾನೂನು ಅರಿವಿನಿಂದ ಅಪರಾಧಕ್ಕೆ ತಡೆ'
ಯಾದಗಿರಿ:
ಕಾನೂನು ಅರಿವು ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯ. ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೇ ಉತ್ತಮ ಬದುಕಿಗೆ ನಾಂದಿಯಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಿ.ಎಸ್. ದೇಶಪಾಂಡೆ ಹೇಳಿದರು.  ಇಲ್ಲಿಯ ತಾಲೂಕು ಉಪ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಇವುಗಳ ಆಶ್ರಯದಲ್ಲಿ ಸೋಮವಾರ ಕೈದಿಗಳಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾನೂನು ಅರಿವಿನ ಕೊರತೆಯಿಂದ ಅನೇಕ ಅಪರಾಧಗಳು ನಡೆಯುತ್ತವೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಅನೇಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಕಾನೂನು ಅರಿವು ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಆದ್ದರಿಂದ ಕೈದಿಗಳೂ ಕಾನೂನು ಅರಿವು ಹೊಂದಿರಬೇಕು ಎಂದರು. ಜೈಲು ಅಧೀಕ್ಷಕ ಕೆ.ಜಿ. ನಾಯ್ಕೋಡಿ, ಮೇಲ್ವಿಚಾರಕ ಬಂಡೆಪ್ಪ ಎಚ್. ಮಾಲಗತ್ತಿ, ಅರ್ಜುನಸಿಂಗ್ ಚವ್ಹಾಣ, ಹಣಮಂತ ಕಟ್ಟಿ ಇತರರು ಇದ್ದರು.

ಇಂದು ಜಾಥಾ
ಗುಲ್ಬರ್ಗ:
ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯಿಂದ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಿಸಲು ಅನುವಾಗುವಂತೆ ಮತದಾರರಲ್ಲಿ ಮತದಾನ ಹಕ್ಕು ಚಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಗುಲ್ಬರ್ಗ ನಗರದಲ್ಲಿ ಏ.30 ರಂದು ಬೆಳಗಿನ 9.30ಕ್ಕೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜಾಪುರ ಕ್ರಾಸ್, ಸೂಪರ್ ಮಾರ್ಕೆಟ್, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ ಹಾಗೂ ಶರಣಬಸವೇಶ್ವರ ದೇವಸ್ಥಾನ ಆವರಣದಿಂದ ಹೊರಡುವ ಈ ಜಾಥಾಗಳು ಕನ್ನಡಭವನದಲ್ಲಿ ಬೆಳಗಿನ 11.30ಕ್ಕೆ ಸಮಾವೇಶಗೊಳ್ಳಲಿವೆ. ನಂತರ ರಂಗಮಂದಿರದಲ್ಲಿ ಕಡ್ಡಾಯ ಮತದಾನದ ಬಗ್ಗೆ ಭಾಷಣ, ಪ್ರತಿಜ್ಞಾವಿಧಿ ಹಾಗೂ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮಗಳು ಜರುಗಲಿವೆ.

ಇಂದು ತರಬೇತಿ
ಚಿತ್ತಾಪುರ:
ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳಿಗೆ ಹಾಗೂ ಮೇಲಾಧಿಕಾರಿಗಳಿಗೆ ಏ.30 ರಂದು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಬೆಳಿಗ್ಗೆ 9.30ಕ್ಕೆ ಮೈಕ್ರೋ ಅಬ್ಬಜರ್ ತರಬೇತಿ ನೀಡುವರು. ತರಬೇತಿಯಲ್ಲಿ ಸಾಮಾನ್ಯ ವೀಕ್ಷಕ ಅಜಯಕುಮಾರ್ ಶರ್ಮಾ ಸೂಕ್ತ ನಿರ್ದೇಶನ ನೀಡಲಿದ್ದಾರೆ. ಅಧಿಕಾರಿಗಳು ತಪ್ಪದೆ ಸಭೆಗೆ ಹಾಜರಾಗಬೇಕೆಂದು ಚುನಾವಣಾಧಿಕಾರಿ ಚಂದ್ರಶೇಖರ ದೊಡ್ಮನಿ ತಿಳಿಸಿದ್ದಾರೆ.

ಮರುಪ್ರಸಾರ
ಗುಲ್ಬರ್ಗ:
ದೂರದರ್ಶನ ಸುದ್ದಿ ವಿಭಾಗ, ಸ್ಥಳೀಯ ದೂರದರ್ಶನ ಕೇಂದ್ರದ ಸಹಯೋಗದಲ್ಲಿ ಏ. 26ರಂದು ನಗರದ ಕಲಾನಿಕೇತನದಲ್ಲಿ ಆಯೋಜಿಸಿದ್ದ ಜನವಾಣಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಆಯ್ದ ಪ್ರೇಕ್ಷಕರೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮ ಏ. 30, ಮೇ. 1ರಂದು ಚಂದನ ಮತ್ತು ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಏ.30 ರಂದು ರಾತ್ರಿ 8ಕ್ಕೆ ಚಂದನ ವಾಹಿನಿಯಲ್ಲಿ (ಕನ್ನಡ) ಮತ್ತು ರಾತ್ರಿ 10ಕ್ಕೆ ದೂರದರ್ಶನ ಸುದ್ದಿ ವಾಹಿನಿಯಲ್ಲಿ (ಹಿಂದಿ) ಪ್ರಸಾರವಾಗಲಿದೆ. ಮೇ. 1ರಂದು ಮಧ್ಯಾಹ್ನ 3.30ಕ್ಕೆ ದೂರದರ್ಶನ ಸುದ್ದಿ ವಾಹಿನಿಯಲ್ಲಿ (ಹಿಂದಿ) ಮರು ಪ್ರಸಾರವಾಗಲಿದೆ ಎಂದು ಗುಲ್ಬರ್ಗ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.