20ರ ಹರೆಯದಲ್ಲೂ ಹೊರಸೇ ಗತಿ!
ಕನ್ನಡಪ್ರಭ ವಾರ್ತೆ, ಜೇವರ್ಗಿ, ಆ.5
ಎಲ್ಲರ ಜೀವನದಲ್ಲಿ ಕಷ್ಟ ಸಹಜ. ಆದರೆ, ಕಷ್ಟವೇ ಜೀವನವಾದರೆ ದಿನಗಳೆಯುವುದು ಕಷ್ಟಸಾಧ್ಯ.
ಹೌದು. ಜೀವನದಲ್ಲಿ ಅಲ್ಪವಾದರೂ ಖುಷಿ, ನೆಮ್ಮದಿ ಇದ್ದರೆ ಅದರಲ್ಲಿ ಕಷ್ಟಗಳು ಮಿಂದುಹೋಗಬಹುದು. ಆದರೆ ತಾಲೂಕಿನ ಸೊನ್ನ ಗ್ರಾಮದಲ್ಲಿರುವ ಬಡ ಕುಟುಂಬವೊಂದಕ್ಕೆ ಸಂಕಷ್ಟವೇ ಜೀವನವಾಗಿದೆ.
ಗ್ರಾಮದ ಶರಣಪ್ಪ ಎಂಬುವವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಪುತ್ರ ಇದ್ದಾರೆ. ಕಿತ್ತು ತಿನ್ನುವ ಬಡತನದಲ್ಲಿಯೇ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ. ಆದರೆ ಮೂರನೇ ಮಗಳು ಸಂಪೂರ್ಣ ವಿಕಲಚೇತನೆ ಹಾಗೂ ಬುದ್ಧಿಮಾಂದ್ಯೆ. 20 ವರ್ಷದ ಯುವತಿ ಉಮಾದೇವಿ ಹುಟ್ಟಿನಿಂದಲೇ ಕೈ- ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಾಳೆ.
20ನೇ ವಯಸ್ಸಲ್ಲೂ ಮಗುವಿನಂತೆ..: ಈಕೆ ಹುಟ್ಟಿದಾಗ ಅಮ್ಮನ ಲಾಲಿ ಹಾಡು ಕೇಳಿ ತೊಟ್ಟಿಲಲ್ಲಿ ದಿನ ಕಳೆದಂತೆ ತನ್ನ 20 ವರ್ಷದಲ್ಲೂ ತೊಟ್ಟಿಲ ನಂತರ ಹೊರಸಿನ ಮೇಲೆಯೇ ದಿನ ಕಳೆಯುತ್ತಿದ್ದಾಳೆ. ಈಕೆಯ ಬದುಕು ಹೊರಸು(ಮಂಚ) ಬಿಟ್ಟು ಮೇಲೇಳುವಂತಿಲ್ಲ. ಅಲ್ಲಿಯೇ ನಿತ್ಯದ 24 ಗಂಟೆಗಳ ಜೀವನ. ಹಸಿವು ಎನಿಸಿದಾಗ ಅಮ್ಮನ ಸೀರೆ ಹಿಡಿದು ಎಳೆಯುತ್ತಾಳೆ. ಅದಾಗಲೆ ಅಮ್ಮನಿಗೆ ಮಗಳಿಗೆ ಹಸಿವಾಗಿದೆ ಎಂದು ಗೊತ್ತಾಗುತ್ತದೆ.
ಇದು ದಿನದ ಕತೆಯಲ್ಲ..: ಅಮ್ಮನ ಸೀರೆ ಹಿಡಿಯುವ ಮುನ್ನ ಅನ್ನ ನೀಡಿದರೆ ವಿಕಲಚೇತನ ಯುವತಿ ಊಟ ಮಾಡಿದವಳಲ್ಲ. ಹೀಗಾಗಿ ತನ್ನ ಕರುಳ ಬಳ್ಳಿಯ ಹಸಿವಿಗಾಗಿ ತಾಯಿ ತಾನು ಹೊರಸಿನ ಪಕ್ಕದಲ್ಲಿಯೇ ಕುಳಿತು ತನ್ನ ಮಗು ಯಾವಾಗ ಸೀರೆ ಹಿಡಿಯುತ್ತಾಳೋ ಎಂದು ಕಾಯುತ್ತಾ ಕಣ್ಣೀರಿನಲ್ಲಿ ದಿನ ಕಳೆಯುತ್ತಾಳೆ. ಇವಳ ಸಂರಕ್ಷಣೆಗಾಗಿ ತಾಯಿ ಚನ್ನಮ್ಮ ತಮ್ಮ ಜೀವನ ಮುಡಪಾಗಿಟ್ಟಿದ್ದಾರೆ.
ವಿಕಲಚೇತನ ಮಗಳ ಆರೈಕೆಗಾಗಿ ಹಿರಿಯ ಇಬ್ಬರು ಹೆಣ್ಣು ಮಕ್ಕಳು ವಿಕಲಚೇತನ ಉಮಾದೇವಿಯ ಆರೈಕೆಗಾಗಿ ನೆರವಾಗುತ್ತಿದ್ದರು. ಆದರೆ ಕಳೆದ 8- 10 ವರ್ಷಗಳ ಹಿಂದೆ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಲಾಗಿದೆ. ನಂತರ ತಾಯಿಯೇ ಎಲ್ಲ ಜವಾಬ್ದಾರಿ ವಹಿಸುತ್ತಿದ್ದಾಳೆ.
ಕೂಲಿ ಮಾಡುವ ಪುತ್ರನೇ ಆಧಾರ: ಬೇರೆಯವರ ಸೇವೆ ಬಯಸುವ ಊರುಗೋಲು ಹಿಡಿದಿರುವ ವೃದ್ಧೆಗೆ ಮಗಳದ್ದೇ ಚಿಂತೆ. ಸಂಕಷ್ಟ ಜೀವನದ ಈ ಕುಟುಂಬದಲ್ಲಿ ಪುತ್ರನೇ ಮನೆಗೆ ಆಧಾರ ಸ್ತಂಭ. ಕಿತ್ತು ತಿನ್ನುವ ಬಡತನದ ಸಂಸಾರ ನೌಕೆ ಸಾಗಿಸಲು ಈತ ಕೂಲಿ ಮಾಡಬೇಕು. ದಿನದ ಗಂಜಿಗಾಗಿ ಮಗ ದುಡಿದರೆ ತಾಯಿ ವಿಕಲಚೇತನ ಮಗಳ ಆರೈಕೆ ಮಾಡಬೇಕು.
ತೀವ್ರ ಸಂಕಷ್ಟ: ಗ್ರಾಮದಲ್ಲಿರುವ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ವಿಕಲಚೇತನ ಉಮಾದೇವಿ ತಂದೆ ಸೇವೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನದಲ್ಲಿ ಯಾವುದೇ ಆದಾಯವಿಲ್ಲ. ಆದರೆ ಸುಗ್ಗಿಯ ಕಾಲದಲ್ಲಿ ಗ್ರಾಮದಲ್ಲಿರುವ ಹೊಲಗಳಿಗೆ ಹೋಗಿ ಭಿಕ್ಷೆ ಬೇಡಿ ತಂದು ಸ್ವಲ್ಪ ಮಟ್ಟಿಗೆ ಆಹಾರಧಾನ್ಯ ಸಂಗ್ರಹಿಸಿಕೊಳ್ಳುತ್ತಾರೆ. ಇತ್ತೀಚೆಗೆ ವದ್ಧಾಪ್ಯದಿಂದ ಹೊಲಗಳಿಗೂ ಹೋಗಲಾಗುತ್ತಿಲ್ಲ. ಹೀಗಾಗಿ ಈ ಕುಟುಂಬ ಬಡತನದಲ್ಲಿ ಬೆಂದು ಹೋಗಿದೆ.
ಬಾರದ ಸಮರ್ಪಕ ಪಿಂಚಣಿ: ಕಳೆದ ಒಂದೂವರೆ ವರ್ಷಗಳ ಹಿಂದೆ ಈ ವಿಕಲಚೇತನ ಉಮಾದೇವಿಗೆ 400 ಮಾಸಾಶನ ಬರುತ್ತಿತ್ತು. ಆದರೆ ಸರ್ಕಾರದ ಪರಿಶೀಲನೆ ನೆಪದಿಂದ ಸಂಪೂರ್ಣ ಅಂಗವಿಕಲವಾಗಿರುವ ಅರ್ಹ ಫಲಾನುಭವಿ ಉಮಾದೇವಿಯ ಮಾಸಾಶನ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿತ್ತು.
ಈಗ ಕೆಲವು ದಿನಗಳಿಂದ ಉಮಾದೇವಿಗೆ 400 ಮಾಸಾಶನ ದೊರಕುತ್ತಿದೆ. ಆದರೆ ಸಂಪೂರ್ಣ ವಿಕಲಚೇತನವಾಗಿರುವ ಈ ಯುವತಿ 1 ಸಾವಿರ ಮಾಸಾಶನಕ್ಕೆ ಅರ್ಹಳಾಗಿದ್ದಾಳೆ. ಆಡಳಿತ ವರ್ಗ ಮತ್ತೊಮ್ಮೆ ಪರಿಶೀಲಿಸಿ ವಿಕಲಚೇತನ ಉಮಾದೇವಿಗೆ ಸಮರ್ಪಕ ಮಾಸಾಶನ ಕಲ್ಪಿಸಬೇಕು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಏಳಲಾಗದ, ಕೂಡಲಾಗದ ವಿಕಲಚೇತನಳ ಬಡ ಕುಟುಂಬಕ್ಕೆ 1 ಸಾವಿರ ಮಾಸಾಶನ ಕಲ್ಪಿಸಿ ನೇರವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

