ಗುಲ್ಬರ್ಗಾ

ನಿಯಮಾವಳಿ ತಿರಸ್ಕರಿಸಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಆ.6
ಸಂವಿಧಾನದ 371(ಜೆ)ನೇ ಕಲಂ ವಿಶೇಷ ಸ್ಥಾನಮಾನದಡಿ ರಾಜ್ಯ ಸರ್ಕಾರ ಈ ಭಾಗಕ್ಕೆ ನಿಗದಿಪಡಿಸಲು ಉದ್ದೇಶಿಸಿರುವ ಮೀಸಲಾತಿ ಪ್ರಮಾಣ ಅಸಮರ್ಪಕವಾಗಿದ್ದು, ಇದರಿಂದ ಭವಿಷ್ಯದಲ್ಲೂ ಅನ್ಯಾಯ ಮುಂದುವರೆಯಲಿದೆ. ಕೂಡಲೇ ರಾಜ್ಯದ ನಿಯಮಾವಳಿಯನ್ನು ತಿರಸ್ಕರಿಸಬೇಕೆಂದು ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ ಡಾ. ರಾಜು ಕುಳಗೇರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಪ್ರಮಾಣ ಮತ್ತು ಅಭಿವೃದ್ಧಿ ಅನುದಾನ ನಿಗದಿಯಲ್ಲಿ ರಾಜ್ಯ ಸರ್ಕಾರ ಸಂಕುಚಿತತೆ ತೋರಿ ಎಂದಿನಂತೆ ಈ ಭಾಗದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು.
ಮೀಸಲಾತಿ ನಿಗದಿಯಲ್ಲೂ ಅನ್ಯಾಯ: ಸಂವಿಧಾನದ ತಿದ್ದುಪಡಿಯು ಈ ಭಾಗಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಮೀಸಲಾತಿ ನಿಗದಿಪಡಿಸುವಂತಹ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಹೀಗಾಗಿ ಶೇ.100ರ ವರೆಗೂ ಮೀಸಲಾತಿ ನೀಡಬಹುದು. ಯಾರೂ ಸಹ ಯಾವುದೇ ನ್ಯಾಯಲಯದಲ್ಲೂ ಇದನ್ನು ಪ್ರಶ್ನಿಸಲಾಗದು. ಆದರೆ, ಕಾಂಗ್ರೆಸ್‌ನಲ್ಲಿನ ಆಂತರಿಕ ಕಲಹದಿಂದಾಗಿ ಮೀಸಲಾತಿ ನಿಗದಿಯಲ್ಲೂ ಈ ಭಾಗಕ್ಕೆ ಅನ್ಯಾಯವೆಸಗಲಾಗಿದೆ ಎಂದು ಅವರು ದೂರಿದರು.
ಸಿಎಂ ಸಿದ್ದರಾಮಯ್ಯ ಅವರು ಈ ಭಾಗದವರಾದ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ವೈಮನಸ್ಸಿನಿಂದಾಗಿ ಮೀಸಲಾತಿ ನಿಗದಿಯಲ್ಲೂ ಕ್ಷುಲ್ಲಕ ರಾಜಕಾರಣ ಮಾಡಿದ್ದಾರೆ. ಈ ಮೂಲಕ ಖರ್ಗೆ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ಮೀಸಲಾತಿ ಹೀಗಿರಲಿ: ರಾಜ್ಯ ಸರ್ಕಾರ ವಿಶೇಷ ಸ್ಥಾನಮಾನದಡಿ ಈ ಭಾಗಕ್ಕೆ ಉದ್ಯೋಗದಲ್ಲಿ ಎ ಮತ್ತು ಬಿ ವರ್ಗಕ್ಕೆ ಶೇ.75, ಸಿ ವರ್ಗಕ್ಕೆ ಶೇ.80 ಹಾಗೂ ಡಿ ವರ್ಗಕ್ಕೆ ಶೇ.85 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಶೇ.95ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ನಿಯಮಾವಳಿ ರೂಪಿಸುವುದಕ್ಕಾಗಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳು ಸರಿಯಾಗಿಲ್ಲ. ವಿದರ್ಭ ಮತ್ತು ತೆಲಂಗಾಣ ಭಾಗದಲ್ಲಿ ಸದ್ಯ ಚಾಲ್ತಿಯಲ್ಲಿರುವ ನಿಯಮಾವಳಿ ಮತ್ತು ಮೀಸಲಾತಿ ಪ್ರಮಾಣವನ್ನೇ ಯಥಾವತ್ತಾಗಿ ಇಲ್ಲಿಯೂ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ ಎಂದರು.
ಸಚಿವ ಖರ್ಗೆಗೆ ಅವಮಾನ: ಕಡಿಮೆ ಪ್ರಮಾಣದಲ್ಲಿ ಮೀಸಲಾತಿ ನಿಗದಿಪಡಿಸುವ ಮೂಲಕ ಸಂಪುಟ ಉಪ ಸಮಿತಿ ಅನ್ಯಾಯವೆಸಗಿದೆ. ಅಲ್ಲದೇ ವಿಶೇಷ ಸ್ಥಾನಮಾನ ದೊರಕಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿದೆ. ಆದ್ದರಿಂದ ಈ ಉಪ ಸಮಿತಿ ಸದಸ್ಯರೂ ಹಾಗೂ ಖರ್ಗೆ ಅವರ ಕಟ್ಟಾ ಬೆಂಬಲಿಗರಾಗಿರುವ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಪ್ರತಿಭಟನೆಗೆ ಮುಂದಾಗಬೇಕೆಂದು ಕುಳಗೇರಿ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.