ನೆಮ್ಮದಿಗೆ ಭಕ್ತಿ ಮಾರ್ಗ ಅವಶ್ಯ
ಕನ್ನಡಪ್ರಭ ವಾರ್ತೆ, ಯಾದಗಿರಿ, ಆ.6
ಕಳೆದ ಮೂರು ದಿನಗಳಿಂದ ಅಬ್ಬೆತುಮಕೂರು ವಿಶ್ವರಾಧ್ಯ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ನಡೆಸುತ್ತಿದ್ದ ಪರಂಪರಾ ಪಾದಯಾತ್ರೆ ಮಂಗಳವಾರ ಸಂಜೆ ಸಂಪನ್ನಗೊಂಡಿತು.
ಹೆಡಗಿಮದ್ರಾ ಗ್ರಾಮದಿಂದ ಹೊರಟ ಪಾದಯಾತ್ರೆ ಠಾಣಗುಂದಿಯನ್ನು ತಲುಪಿತು. ಗ್ರಾಮದ ಜನತೆ ವೈಭವದಿಂದ ಶ್ರೀಗಳನ್ನು ಬರಮಾಡಿಕೊಂಡು ಗೌರವಿಸಿದರು. ಅಲ್ಲಿಂದ ಪಾದಯಾತ್ರೆ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪಾದಗಟ್ಟೆಯನ್ನು ತಲುಪಿತು. ನೆರೆದಿದ್ದ ಅಪಾರ ಭಕ್ತರು ಬರಮಾಡಿಕೊಂಡು ಪಾದಗಟ್ಟೆಯಿಂದ ಮಠದವರೆಗೆ ಶ್ರೀಗಳನ್ನು ಸಡಗರದಿಂದ ಮೆರವಣಿಗೆ ಮೂಲಕ ಕರೆದೊಯ್ದರು.
ವಿಶೇಷ ಪೂಜೆ: ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ಶ್ರೀಗಳು ವಿಶೇಷ ಪೂಜೆಯನ್ನು ನೆರವೇರಿಸುವುದರೊಂದಿಗೆ ಪಾದಯಾತ್ರೆ ಸಂಪನ್ನಗೊಂಡಿತು. ಪಾದಯಾತ್ರೆಯಲ್ಲಿ ಹಲಗೆ, ಡೊಳ್ಳು, ಬಾಜಾ ಭಜಂತ್ರಿ, ಕಣಿ ಹಲಗೆ ಮುಂತಾದ ವಾದ್ಯಗಳ ವಾದನ ಪಾದಯಾತ್ರೆಗೆ ಮೆರಗು ನೀಡಿತ್ತು.
ಮಠದ ಪೀಠಾಧಿಪತಿ ಡಾ. ಗಂಗಾಧರ ಸ್ವಾಮೀಜಿ ಪಾದಯಾತ್ರೆ ಸಮಾರೋಪ ಹಾಗೂ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕಳೆದ ಎರಡು ದಶಕಗಳಿಂದಲೂ ಪರಂಪರಾ ಪಾದಯಾತ್ರೆ ಮಾಡಿಕೊಂಡು ಬರಲಾಗುತ್ತಿದೆ. ಲೋಕಕಲ್ಯಾಣ ಮತ್ತು ಮಾನವ ಸಮೃದ್ಧಿಗಾಗಿ ಹಾರೈಸಿ ಪಾದಯಾತ್ರೆ ಕೈಗೊಳ್ಳುತ್ತಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ ಎಂದರು.
ವಿಶ್ವಾರಾಧ್ಯರ ಮಹಿಮೆಗೆ ಸಾಕ್ಷಿ: ವಿಶ್ವಾರಾಧ್ಯರು ಭಾವಕ್ಯತೆಯ ಭಗವಂತನಾಗಿ ಜಾತಿ, ಮತ, ಪಂಥವೆನ್ನದೆ ಇಡೀ ಮನುಕುಲವನ್ನು ಏಕಮುಖವಾಗಿ ಕರೆದುಕೊಂಡು ಹೋಗಿರುವ ಪುಣ್ಯಾತ್ಮರಾಗಿದ್ದಾರೆ. ಅಂತಹ ಮಹಾಪುರುಷನ ಜನ್ಮ ಕ್ಷೇತ್ರದಿಂದ ಪ್ರಾರಂಭಿಸಿ ಮುಕ್ತಿ ಕ್ಷೇತ್ರದವರೆಗೆ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಅನಂತ ಭಕ್ತ ಕುಲಕೋಟಿ ಭಾಗವಹಿಸುತ್ತಿರುವುದು ವಿಶ್ವಾರಾಧ್ಯರ ಮಹಿಮೆಗೆ ಸಾಕ್ಷಿಯಾಗಿದೆ ಎಂದರು.
ಸದಾಚಾರ ಸಂಪನ್ನರಾಗಿ: ಮನುಷ್ಯ ಸಂಸಾರಿಕ ಜೀವನದ ತೊಳಲಾಟದಿಂದ ಕ್ಷಣಕಾಲ ಶಾಂತಿ, ನೆಮ್ಮದಿ ಪಡೆಯಲು ಭಕ್ತಿಯ ಮಾರ್ಗ ಅವಶ್ಯ. ಇಂತಹ ಪಾದಯಾತ್ರೆಗಳಲ್ಲಿ ಶ್ರದ್ಧೆಯಿಂದ ಪಾಲ್ಗೊಂಡಾಗ ಸಹಜವಾಗಿಯೇ ಪ್ರತಿಯೊಬ್ಬರು ಪ್ರಸನ್ನ ಚಿತ್ತರಾಗುತ್ತಾರೆ. ಅಂತರಂಗ ಶುದ್ಧಿಯಾಗಬೇಕಾದರೆ ಸದಾಚಾರ ಸಂಪನ್ನರಾಗಬೇಕು. ಸದ್ವಿಚಾರಗಳನ್ನು ಆಲಿಸುವುದು, ಕ್ಷೇತ್ರ ದರ್ಶನ ಕೈಗೊಳ್ಳುವುದರಿಂದ ಪವಿತ್ರಾತ್ಮರಾಗಲು ಸಾಧ್ಯವಾಗುತ್ತದೆ ಎಂದು ನುಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ, ಶಾಸಕ ಡಾ. ಎ.ಬಿ. ಮಾಲಕರೆಡ್ಡಿ, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಡಾ. ಸುಭಾಶ್ಚಂದ್ರ ಕೌಲಗಿ, ಚನ್ನಪ್ಪಗೌಡ ಮೊಸಂಬಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

