ಮಾನವೀಯತೆ ಸತ್ತುಹೋಯ್ತೆ?...
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ. 6
ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಸಂಭವಿಸಿರುವ ನಾಯಿಪಾಲಾದ ನವಜಾತ ಶಿಶುವಿನ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಏತನ್ಮಧ್ಯೆ ನವಜಾತ ಶಿಶುವಿನ ದೇಹ ಕಸದ ತೊಟ್ಟಿ ಸೇರಿದ್ಯಾಕೆ ಎಂಬ ಪ್ರಶ್ನೆಗೆ ಆಸ್ಪತ್ರೆಯವರು ಇದುವರೆಗೂ ಸಮರ್ಪಕ ಉತ್ತರ ನೀಡದೆ ಮೌನವಾಗಿದ್ದಾರೆ.
ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿರುವ ಶವಾಗಾರದ ಮುಂಭಾಗದ ಕಸದ ತೊಟ್ಟಿಯಿಂದ ನಾಯಿಯೊಂದು ಶಿಶುವಿನ ದೇಹದೊಂದಿಗೆ ಹೋಗುವುದು ಪತ್ರಿಕಾ ಛಾಯಾಗ್ರಾಹಕರು ಫೋಟೋ ಕ್ಲಿಕ್ಕಿಸಿದ್ದಾರೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ಕಣ್ಣಾರೆ ಕಂಡವರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಪ್ರಕರಣ ದಾಖಲು: ಸಾರ್ವಜನಿಕರು ಹತ್ತಾರು ಕರೆಗಳನ್ನು ಮಾಡಿ, ಆಸ್ಪತ್ರೆಯ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ದೇಹ ಸಿಕ್ಕಿದೆ. ಅದು ನಾಯಿಪಾಲಾಗುತ್ತಿದೆ. ತಕ್ಷಣ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಲಿ ಎಂದು ಹಲವು ಪ್ರಜ್ಞಾವಂತರು ಫೋನ್ ಕರೆ ಮಾಡಿದರು. ಆದ್ದರಿಂದ ತಕ್ಷಣ ಸ್ಥಳಕ್ಕೆ ಧಾವಿಸಿ ಶಿಶುವಿನ ದೇಹದ ಸ್ಥಿತಿಗತಿಗಳನ್ನು ಪರಿಸೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಗುಲ್ಬರ್ಗ ಮಹಿಳಾ ಠಾಣೆಯ ಪಿಎಸ್ಐ ಎಸ್.ಎನ್. ಬಿರಾದಾರ್ ಹೇಳಿದ್ದಾರೆ.
ತಮ್ಮನ್ನು ಸಂಪರ್ಕಸಿರುವ 'ಕನ್ನಡಪ್ರಭ' ಜೊತೆ ಮಾತನಾಡಿದ ಬಿರಾದಾರ್ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 38 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿಶುವಿನ ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಿರಾದಾರ್ ಹೇಳಿದ್ದಾರೆ.
ಚಿಂಚೋಳಿ ಮೂಲದವರು: ಶಿಶುವಿನ ಕೈ ಭಾಗದಲ್ಲಿ ಕಂಡು ಬಂದಿರುವ ಬೇಬಿ ಆಫ್ ರೇಶ್ಮಾ ಎಂಬ ಮಾಹಿತಿ, ಅದರ ಜೊತೆಗೆ ಇರುವ ಮೊಬೈಲ್ ಸಂಖ್ಯೆ ಅನುಸರಿಸಿ ಪ್ರಾಥಮಿಕ ತನಿಖೆ ಕೈಗೊಳ್ಳಲಾಗಿದೆ. ಪಾಲಕರು ಚಿಂಚೋಳಿ ಭಾಗದವರು ಎಂದು ಪತ್ತೆಯಾಗಿದೆ. ಆದರೆ ಯಾವ ಊರಿನವರು ಎಂದು ತಿಳಿದು ಬಂದಿಲ್ಲ ಎಂದು ಮಹಿಳಾ ಠಾಣೆ ಇನ್ಸ್ಪೆಕ್ಟರ್ ಬಿರಾದಾರ್ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರಿ ಆಸ್ಪತ್ರೆಯವರ, ಅಲ್ಲಿನ ವ್ಯವಸ್ಥೆಯಲ್ಲಿನ ಲೋಪದೋಷಗಳು ಕಂಡರೂ ಆಸ್ಪತ್ರೆಯಲ್ಲಿರುವ ಸಂಬಂಧಪಟ್ಟವರ ವಿರುದ್ಧವೂ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಜರುಗಿಸಲಾಗುತ್ತದೆ ಎನ್ನಲಾಗಿದೆ.
ಆಸ್ಪತ್ರೆಯವರು ಗಪ್ಚುಪ್: ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಶಿಶುವಿನ ವಿಚಾರದಲ್ಲಿಯೂ ಅಲಕ್ಷ್ಯ ತೋರಲಾಗಿದೆ ಎಂಬ ಗಂಭೀರ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟುಹಾಕಿದೆ. ಏಕೆಂದರೆ ನವಜಾತ ಶಿಶು ಯಾವುದೇ ಕಾರಣದಿಂದ ಸಾವನ್ನಪ್ಪಿದ್ದರೂ ಅದರ ದೇಹವನ್ನು ಹೀಗೆ ಬೇಕಾಬಿಟ್ಟಿ ಕಸದ ತೊಟ್ಟಿಯಲ್ಲಿ ಬಿಸಾಡುವಂತಿಲ್ಲ. ಅದನ್ನು ವಿಧಿವತ್ತಾಗಿ ಅಂತಿಮ ಸಂಸ್ಕಾರ ಮಾಡಬೇಕು. ಆದರೆ ಇಲ್ಲಿ ಕಸದ ತೊಟ್ಟಿಯಲ್ಲಿ ದೇಹ ಕಂಡಿದೆ. ಅದನ್ನು ನಾಯಿ ಹೊತ್ತೊಯ್ಯುತ್ತಿದೆ. ಇದು ಘೋರ ದುರಂತ. ಇಷ್ಟೆಲ್ಲಾ ರಾದ್ಧಾಂತ ತಮ್ಮ ಆಸ್ಪತ್ರೆ ಆವರಣದಲ್ಲೇ ನಡೆದರೂ, ಜಿಲ್ಲಾಸ್ಪತ್ರೆಯಿಂದ ಯಾವುದೇ ವಿವರಣೆಗಳು ಅಧಿಕೃತವಾಗಿ ಹೊರಬಿದ್ದಿಲ್ಲ.
ಆಗಾಗ ಕಸದ ತೊಟ್ಟಿಯಲ್ಲಿ ಕೂಸುಗಳು ಕಂಡು ವಿವಾದ ಹುಟ್ಟುತ್ತದೆ. ಹಾಗೆಯೇ ಮುಚ್ಚಿಹೋಗುತ್ತದೆ. ಈಗಿನ ಬೇಬಿ ಆಫ್ ರೇಷ್ಮಾ ವಿವಾದವೂ ಇದೇ ಸಾಲಿಗೆ ಸೇರಿಹೋಗಬಾರದು. ಪೊಲೀಸರು ಪ್ರಕರಣ ದಾಖಲಿಸಿದ್ದರಿಂದ ಈ ಪ್ರಕರಣದಲ್ಲಿ ತನಿಖೆ ಮಾನವೀಯ ಮೌಲ್ಯಗಳನ್ನು ಉಳಿಸುವ ಗುರಿಯೊಂದಿಗೆ ನಡೆಯಬೇಕು ಎಂಬುದು ಜಿಲ್ಲೆಯ ಪ್ರಜ್ಞಾವಂತರ ಆಗ್ರಹ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

