ಕಸ ವಿಲೇವಾರಿ ಕಸಿವಿಸಿ!
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.10
ಗುಲ್ಬರ್ಗದ ಹೊರ ವಲಯದ ಉದನೂರ ಗ್ರಾಮದ ಬಳಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕವಿದ್ದರೂ ನಗರದ ಜನನಿಬಿಡ ಇಂದಿರಾ ನಗರದಲ್ಲಿ ವಿವಿಧ ಬಡಾವಣೆಗಳ ಕಸ ವಿಲೇವಾರಿ ಮಾಡುತ್ತಿದ್ದು, ಘನತ್ಯಾಜ್ಯದಿಂದ ವಿವಿಧ ರೋಗ ರುಜಿನಗಳು ಹರಡುವ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ.
ಉದನೂರ ಬಳಿ ಘನತ್ಯಾಜ್ಯ ಘಟಕ: ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 55 ವಾರ್ಡ್ಗಳ ವಿವಿಧ ಬಡಾವಣೆಗಳಲ್ಲಿ ಸಂಗ್ರಹವಾಗುತ್ತಿರುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲು ಮಹಾನಗರ ಪಾಲಿಕೆಯು ನಗರದ ಹೊರ ವಲಯದ ಉದನೂರ ಗ್ರಾಮದ ಬಳಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಮಾಡಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಜನತೆ ಕಸದ ತೊಟ್ಟಿಗಳಲ್ಲಿ ಹಾಕುತ್ತಿರುವ ತ್ಯಾಜ್ಯ ವಸ್ತುಗಳನ್ನು ಟ್ರ್ಯಾಕ್ಟರ್ಗಳ ಮೂಲಕ ಉದನೂರ ಗ್ರಾಮದ ಬಳಿಯಲ್ಲಿರುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿತ್ತು.
ಒಂದು ತಿಂಗಳಿಂದ ಇಂದಿರಾ ನಗರದಲ್ಲಿ ವಿಲೇವಾರಿ: ನಗರದ ಜನನಿಬಿಡ ಪ್ರದೇಶವಾಗಿರುವ ಇಂದಿರಾ ನಗರದಲ್ಲಿ ಕಳೆದ ಒಂದು ತಿಂಗಳಿಂದ ನಗರದ ವಿವಿಧ ಬಡಾವಣೆಗಳಿಂದ ಘನತ್ಯಾಜ್ಯ ವಸ್ತುಗಳನ್ನು ತಂದು ವಿಲೇವಾರಿ ಮಾಡಲಾಗುತ್ತಿದೆ.
ಬಡಾವಣೆಯ ನಾಗರಿಕರ ವಿರೋಧದ ನಡುವೆಯೂ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿ ಕಸ ಹಾಕುವುದರಿಂದ ಜನರಿಗೆ ಹಲವಾರು ರೋಗಗಳು ಬರುತ್ತವೆ. ಹೀಗಾಗಿ ಇಲ್ಲಿನ ಕಸ ತೆಗೆದುಕೊಂಡು ಹೋಗಬೇಕೆಂದು ನಾಗರಿಕರು ಒತ್ತಾಯಿಸಿದರೆ, ಉದನೂರ ಗ್ರಾಮಕ್ಕೆ ಹೋಗುವ ರಸ್ತೆ ದುರಸ್ತಿಯಲ್ಲಿರುವುದರಿಂದ ತಾತ್ಕಾಲಿಕವಾಗಿ ಇಲ್ಲಿ ಕಸ ಹಾಕಲಾಗುತ್ತಿದೆ ಎಂದು ಕಸ ವಿಲೇವಾರಿ ಮಾಡುವ ಪಾಲಿಕೆ ಸಿಬ್ಬಂದಿ ಸಮಜಾಯಿಸಿ ನೀಡುತ್ತಿದ್ದಾರೆ.
ಘನತ್ಯಾಜ್ಯ ವಸ್ತುಗಳು ವಿಲೇವಾರಿ ಮಾಡುತ್ತಿರುವ ಪಕ್ಕದಲ್ಲಿಯೇ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂರನೇ ಘಟಕ ಡಿಪೋ ಮತ್ತು ಜೋಸಫ್ ಕಾನ್ವೆಂಟ್ ಶಾಲಾ- ಕಾಲೇಜು ಇರುವುದರಿಂದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಾಗೂ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮೇಲೆ ಪರಿಣಾಮ ಬೀರುತ್ತಿದೆ.
ಮೂರು ದಿನದಲ್ಲಿ ಕಸ ಸ್ಥಳಾಂತರ ಮಾಡದಿದ್ದರೆ ರಸ್ತೆತಡೆ: ಕಳೆದ ಒಂದು ತಿಂಗಳಿಂದ ಈ ಬಡಾವಣೆಯಲ್ಲಿ ಕಸ ತಂದು ಹಾಕಲಾಗುತ್ತಿದೆ. ಕಸ ವಿಲೇವಾರಿಗೆ ಈಗಾಗಲೇ ಗುರುತಿಸಿರುವ ಉದನೂರ ಗ್ರಾಮದ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ಇಲ್ಲಿಯೇ ಕಸ ಹಾಕಲಾಗುತ್ತಿದೆ ಎಂದು ಬಡಾವಣೆಯ ನಾಗರಿಕ ಹಣಮಂತ ಎಸ್. ವಚ್ಚಾ ಆರೋಪಿಸಿದ್ದಾರೆ.
ಇಲ್ಲಿರುವ ಕಸ ಮೂರು ದಿನಗಳಲ್ಲಿ ಬೇರೆಡೆ ಸ್ಥಳಾಂತರಿಸದಿದ್ದರೆ ಆ.14 ರಂದು ರಸ್ತೆತಡೆ ಚಳವಳಿ ನಡೆಸಿ ಇಲ್ಲಿನ ಕಸ ಬೇರೆಡೆಗೆ ಸ್ಥಳಾಂತರಿಸುವ ಕುರಿತು ಪಾಲಿಕೆ ಆಯುಕ್ತರು ಭರವಸೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ಕಸ ಸ್ಥಳಾಂತರಕ್ಕೆ ಒತ್ತಾಯ: ಬಡಾವಣೆಯ ನಾಗರಿಕರ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ಇಲ್ಲಿ ತಂದು ಹಾಕುತ್ತಿರುವ ಕಸ ಕೂಡಲೇ ಸ್ಥಳಾಂತರಿಸಬೇಕೆಂದು ಸಮಾಜ ಸೇವಕಿ ರಾಜಶ್ರೀ ದೇಶಮುಖ ಒತ್ತಾಯಿಸಿದ್ದಾರೆ.
ಉದನೂರ ಗ್ರಾಮಕ್ಕೆ ಹೋಗಲು ಸಮರ್ಪಕ ರಸ್ತೆ ಇದ್ದರೂ ಪಾಲಿಕೆ ಸಿಬ್ಬಂದಿ ರಸ್ತೆ ಸರಿಯಿಲ್ಲ, ರಸ್ತೆ ದುರಸ್ತಿಯಾಗುವರೆಗೂ ಇಲ್ಲಿಯೇ ತಾತ್ಕಾಲಿಕವಾಗಿ ಕಸ ಹಾಕುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೇಶಮುಖ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಸಿಬ್ಬಂದಿ ವಿರುದ್ಧ ಕ್ರಮ: ಆಯುಕ್ತ ಕಟ್ಟಿಮನಿ
ಇಂದಿರಾ ನಗರದಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಬಗ್ಗೆ 'ಕನ್ನಡಪ್ರಭ' ಪಾಲಿಕೆ ಆಯುಕ್ತ ಎಸ್.ಬಿ. ಕಟ್ಟಿಮನಿ ಅವರ ಗಮನ ಸೆಳೆದಾಗ, ಕಸ ವಿಲೇವಾರಿಗೆ ಗೊತ್ತುಪಡಿಸಿರುವ ಉದನೂರ ಬಳಿ ನಗರದ ಎಲ್ಲ ಬಡಾವಣೆಗಳ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡಲಾಗುತ್ತಿದೆ. ಇಲ್ಲಿ ಹೊರತು ಪಡಿಸಿ ಎಲ್ಲಿಯೂ ಘನತ್ಯಾಜ್ಯ ವಸ್ತುಗಳು ವಿಲೇವಾರಿ ಮಾಡುತ್ತಿಲ್ಲ ಎಂದು ತಿಳಿಸಿದರು. ಒಂದು ವೇಳೆ ತಮ್ಮ ಗಮನಕ್ಕೆ ತರದೆ ಇಂದಿರಾ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರೆ ವಿಲೇವಾರಿ ಮಾಡಿದ ಪಾಲಿಕೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
- ಶಂಕರಬಾಬು ರೆಡ್ಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

